Advertisement

400 ಜನರಿಗೆ ಇರುವುದೊಂದೇ ಶೌಚಾಲಯ; ಸೋರುವ ಮೂರು ಕೊಠಡಿಗಳು

05:30 PM Jul 27, 2023 | Team Udayavani |

ಹುಬ್ಬಳ್ಳಿ: ಸರಿಸುಮಾರು 380 ವಿದ್ಯಾರ್ಥಿಗಳು, 20 ಜನ ಬೋಧಕೇತರ ಸಿಬ್ಬಂದಿ ಸೇರಿ ಒಟ್ಟು 400 ಜನರಿಗೆ ಇರುವುದು ಒಂದೇ ಶೌಚಾಲಯ. ಶಾಲಾ ಕಟ್ಟಡದ ಒಂದು ಭಾಗ ಶಿಥಿಲಾವಸ್ಥೆಯಲ್ಲಿದ್ದರೆ, ಮೂರು ಕೊಠಡಿಗಳು ಸೋರುತ್ತಿವೆ. ಸತತ ಮಳೆಯಿಂದಾಗಿ ಏನಾಗುವುದೋ ಎಂಬ ಆತಂಕದಲ್ಲಿಯೇ ವಿದ್ಯಾರ್ಥಿಗಳು, ಶಿಕ್ಷಕರು-ಸಿಬ್ಬಂದಿ ದಿನದೂಡುವಂತಾಗಿದೆ.

Advertisement

ಇದು, ಹಳೇ ಹುಬ್ಬಳ್ಳಿ ಆನಂದ ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ-ಪ್ರೌಢಶಾಲೆ ಕಥೆ ವ್ಯಥೆಯಾಗಿದೆ. ಶಾಲೆಯಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ನಡೆಯುತ್ತಿದ್ದು, ಮೂರು ಕೊಠಡಿಗಳು ಸೋರುತ್ತಿವೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಕೊಠಡಿಗಳ ಕೊರತೆ ಎದುರಾಗಿದೆ. ಶಾಲಾ ಕಟ್ಟಡದ ಮೊದಲನೇ ಮಹಡಿಯಲ್ಲಿರುವ 8ನೇ ತರಗತಿಯ ಕೊಠಡಿ ಸೋರುತ್ತಿದ್ದರೆ, ಕೆಳಭಾಗದ ಎರಡು ಕೊಠಡಿಗಳು ಸಹ ಸೋರುತ್ತಿವೆ.

ಶಾಲೆಯ ಮೇಲ್ಭಾಗದಲ್ಲಿ ಸೋರುತ್ತಿದ್ದು ಗೋಡೆಯ ಮುಖಾಂತರ ಹಾಗೂ ಮೇಲ್ಭಾಗದಿಂದ ಕೊಠಡಿಗಳಲ್ಲಿ ನೀರು ಬರುತ್ತಿದ್ದು ಇದರಿಂದ ಶಾಲೆಯ ಈ ಮೂರು ತರಗತಿಯ ಮಕ್ಕಳನ್ನು ಬೇರೆ ಕೊಠಡಿಗಳಿಗೆ ಸ್ಥಳಾಂತರಿಸಿ ತರಗತಿ ನಡೆಸಲಾಗುತ್ತಿದೆ.

ಒಂದೇ ಶೌಚಾಲಯ: ಶಾಲೆಯಲ್ಲಿ ಒಂದೇ ಶೌಚಾಲಯ ಇರುವುದರಿಂದ ತುಂಬಾ ಸಮಸ್ಯೆ ಆಗಿದೆ. ಬಾಲಕಿಯರು ಹಾಗೂ ಮಹಿಳಾ ಸಿಬ್ಬಂದಿ ಶೌಚಾಲಯ ಬಳಸುತ್ತಿದ್ದು, ಬಾಲಕರು, ಪುರುಷ ಸಿಬ್ಬಂದಿ ಅನ್ಯಮಾರ್ಗ ಕಂಡುಕೊಳ್ಳುವ ಸ್ಥಿತಿ ಈ
ಶಾಲೆಯದ್ದಾಗಿದೆ. ಈಗಾಗಲೇ ಶಿಕ್ಷಣ ಇಲಾಖೆಗೆ ಶಾಲೆ ಸೋರುತ್ತಿರುವ ಕುರಿತು ಹಾಗೂ ಒಂದೇ ಶೌಚಾಲಯ ಇರುವ ಕುರಿತು ಗಮನಕ್ಕೆ ತರಲಾಗಿದ್ದು, ಇದುವರೆಗೂ ಯಾವುದೇ ಕ್ರಮ ಇಲ್ಲವಾಗಿದೆ.

ಆನಂದನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಾಲ್ಕು ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿವೆ. ಇದರಿಂದ ಶಾಲೆಯಲ್ಲಿರುವ ನಾಲ್ಕು ಕೊಠಡಿಗಳಲ್ಲಿ ನಡೆಯುತ್ತಿರುವ ತರಗತಿಯನ್ನು ಬೇರೆಡೆ ವರ್ಗಾಯಿಸಿದ್ದು, ಅಲ್ಲಿಯೇ ನಡೆಯುತ್ತಿದ್ದ ಅಂಗನವಾಡಿ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ. ಈಗಾಗಲೇ ಶಿಥಿಲಾವಸ್ಥೆಗೊಂಡಿರುವ ಕೊಠಡಿಗಳ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

Advertisement

ಹಳೇಹುಬ್ಬಳ್ಳಿ ಆನಂದ ನಗರದಲ್ಲಿರುವ ಎರಡು ಉರ್ದು ಶಾಲೆಗಳ ಕೊಠಡಿಗಳು ಸೋರುತ್ತಿರುವುದು ಹಾಗೂ ಶಿಥಿಲಾವ್ಯಸ್ಥೆಯಲ್ಲಿರುವುದನ್ನು ಗುರುತಿಸಲಾಗಿದ್ದು, ಅವುಗಳನ್ನು ತೆರವು ಮಾಡಲು ಸೂಕ್ತ ಕ್ರಮ  ತೆಗೆದುಕೊಳ್ಳಲಾಗುತ್ತಿದೆ. ಇನ್ನು ಕ್ಷೇತ್ರದಲ್ಲಿನ ಶಾಲೆಗಳಿಗೆ ಸುಣ್ಣ-ಬಣ್ಣ ಮಾಡಿಸುವುದು ಬಿಟ್ಟರೆ ಕ್ಷೇತ್ರದಲ್ಲಿ ಶಿಥಿಲಾವಸ್ಥೆಗೊಂಡಿರುವ ಶಾಲೆಗಳು ಕಂಡುಬಂದಿಲ್ಲ.
ಚನ್ನಪ್ಪ ಗೌಡರ,
ಶಹರ ಕ್ಷೇತ್ರದ ಕ್ಷೇತ್ರ ಶಿಕ್ಷಣಾಧಿಕಾರಿ

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next