Advertisement

ಯುಗಾದಿ ದಿನವೂ ಕುಡಿಯಲು ನೀರಿಲ್ಲ: ಪುರಸಭೆ ಅವ್ಯವಸ್ಥೆಗೆ ಜನರು ಹೈರಾಣ

10:31 AM Apr 02, 2022 | Team Udayavani |

ಹುಮನಾಬಾದ: ಯುಗಾದಿ ಹಬ್ಬದ ದಿನಕೂಡ ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ಇಲ್ಲಿನ ಪುರಸಭೆ ಆಡಳಿತ ಮಂಡಳಿ, ಅಧಿಕಾರಿಗಳು ವಿಫಲಗೊಂಡಿದ್ದು, ಜನರು ಪುರಸಭೆ ಅಧಿಕಾರಿಗಳು ಹಾಗೂ¸ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕಳೆದ ಆರು ದಿನಗಳಿಂದ ಪಟ್ಟಣದ ವಿವಿಧಡೆ ಕುಡಿಯುವ ನೀರು ಪೂರೈಕೆ ಇಲ್ಲದ ಕಾರಣ ಪಟ್ಟಣದ ಜನರು ಹಣ ನೀಡಿ ನೀರು ಖರೀದಿಸುವ ಸ್ಥಿತಿ ನಿರ್ಮಾಣಗೊಂಡಿದೆ.

ಪ್ರತಿ ತಿಂಗಳು ಎರೆಡು-ಮೂರು ಬಾರಿ ಇಂತಹ ಸಮಸ್ಯೆಗಳು ಉಂಟಾಗುತ್ತಿದ್ದು, ಪಟ್ಟಣದ ಜನರು ಪುರಸಭೆ ಆಡಳಿತ ಮಂಡಳಿ ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ. ಪುರಸಭೆ ಸದಸ್ಯರಿಗೆ ಮತದಾರರು ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಸಂಗ ಸಾಮಾನ್ಯವಾಗಿದೆ.

ಕಾರಂಜಾ ಜಲಾಶಯದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಆಗಬೇಕು. ಸೂಕ್ತ ಪ್ರಮಾಣದ ನೀರು ಇದ್ದರು ಕೂಡ ಪುರಸಭೆ ಜನರಿಗೆ ತಲುಪಿಸುವಲ್ಲಿ ಸಂಪೂರ್ಣ ವಿಫಲಗೊಳ್ಳುತ್ತಿದೆ. ನೀರು ಪೂರೈಕೆ ಮಾಡಬೇಕಾದ ಮೊಟಾರ್ ದುರಸ್ಥಿ ಕಾರ್ಯ, ಪಂಪ್ ಸಮಸ್ಯೆ, ವಿದ್ಯುತ್ ಟಿಸಿಗಳ ಸಮಸ್ಯೆ, ಪೈಪಲೈನ್ ಸಮಸ್ಯೆ ಎಂದು ಪದೆ ಪದೆ ದುರಸ್ಥಿಗಾಗಿ ವರ್ಷಕ್ಕೆ ಲಕ್ಷಾಂತರ ಹಣ ಖರ್ಚುಮಾಡಲಾಗುತ್ತಿದೆ. ಆದರೂ, ಕೂಡ ಪದೆ ಪದೆ ಅದೇ ಸಮಸ್ಯೆಗಳು ಉಂಟಾಗುತ್ತಿದೆ ಎಂದು ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಪುರಸಭೆ ಅವ್ಯವಸ್ಥೆಗೆ ಪಟ್ಟಣದ ಜನರು ಹೈರಾಣ ಆಗುತ್ತಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಂಟಾದರೆ ಏನು ಗತಿ ಎಂದು ಬಡಾವಣೆಗಳ ಜನರು ಪ್ರಶ್ನಿಸುತ್ತಿದ್ದಾರೆ. ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಆಡಳಿತ ಸದಸ್ಯರು, ಅಧಿಕಾರಿಗಳು ಕುರ್ಚಿ ಖಾಲಿಮಾಡುವಂತೆ ಬಡಾವಣೆಗಳ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪದೆ ಪದೆ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪುರಸಭೆ ಅಧಿಕಾರಿಗಳು, ಆಡಳಿತ ಮಂಡಳಿಯರವು ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲಗೊಂಡಿದ್ದಾರೆ. ಪದೆ ಪದೆ ದುರಸ್ಥಿ ಕಾರ್ಯಗಳಿಗಾಗಿ ಈವರೆಗೆ ಮಾಡಿದ ಖರ್ಚಿನಲ್ಲಿ ಹೊಸ ಯಂತ್ರಗಳು ಅಳವಡಿಸಬಹುದಿತ್ತು. ಆದರೆ, ಇಲ್ಲಿನ ಅಧಿಕಾರಿಗಳು ಮಾತ್ರ ಕೇವಲ ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.

ಒಂದು ಬಾರಿ ಸಮಸ್ಯೆ ಕಂಡುಬಂದರೆ 4-6 ದಿನಗಳ ಕಾಲ ಜನರಿಗೆ ನೀರು ಪೂರೈಕೆ ಆಗುತ್ತಿಲ್ಲ. ಪುರಸಭೆ ಅಧಿಕಾರಿಗಳು ನೆಪಹೇಳಿ ಹಣ ಲೂಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ದುರಸ್ಥಿ ಕಾರ್ಯಗಳಿಗೆ ಖರ್ಚು ಮಾಡಿದ ಹಣದ ಕುರಿತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ವರೆಗೂ ಇಲ್ಲಿನ ಪುರಸಭೆ ಆಡಳಿತ ಸುಧಾರಿಸುವುದಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಮಹೇಶ ಅಗಡಿ, ಪುರಸಭೆ ಸದಸ್ಯ ರಮೇಶ ಕಲ್ಲೂರ ಸೇರಿದಂತೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next