ಹೊಸದಿಲ್ಲಿ: ನೂತನ ವರ್ಷದ ಭಾರತೀಯ ಕ್ರಿಕೆಟ್ ಕ್ಯಾಲೆಂಡರ್ ಬಹುತೇಕ ಪೂರ್ತಿಗೊಂಡಿದೆ.
ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಟೀಮ್ ಇಂಡಿಯಾ ಮುಂದಿನ 12 ತಿಂಗಳಲ್ಲಿ ಬಿಡುವಿಲ್ಲದಷ್ಟು ಕ್ರಿಕೆಟ್ ಸರಣಿಗಳಲ್ಲಿ ಪಾಲ್ಗೊಳ್ಳಲಿದೆ. ಜತೆಗೆ ವನಿತಾ ಐಪಿಎಲ್ ಪಂದ್ಯಾವಳಿಯ ಆರಂಭವೂ ಕ್ರಿಕೆಟ್ ಮೆರುಗನ್ನು ಹೆಚ್ಚಿಸಲಿದೆ.
ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ 2023ರಲ್ಲಿ ಭಾರತದ ಪುರುಷರ ತಂಡ 8 ಟೆಸ್ಟ್, 18 ಏಕದಿನ, 17 ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿದೆ. ಜತೆಗೆ ಏಕದಿನ ವಿಶ್ವಕಪ್ ಪಂದ್ಯಾವಳಿಯೂ ಸೇರಿದೆ. ಈ ಬಾರಿಯ ವಿಶ್ವಕಪ್ ಭಾರತದ ಆತಿಥ್ಯದಲ್ಲೇ ನಡೆಯಲಿದೆ ಎಂಬುದು ವಿಶೇಷ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪ್ರವೇಶಿಸಿ ದರೆ ಹೆಚ್ಚುವರಿಯಾಗಿ ಒಂದು ಟೆಸ್ಟ್ ಪಂದ್ಯವನ್ನು ಆಡಬೇಕಾಗುತ್ತದೆ.
ತವರಿನಲ್ಲಿ ಭಾರತ ತಂಡ ಶ್ರೀಲಂಕಾ, ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಜ. 3ರಂದು ಪ್ರವಾಸಿ ಶ್ರೀಲಂಕಾ ವಿರುದ್ಧ ಟಿ20 ಪಂದ್ಯ ಆಡುವ ಮೂಲಕ ಭಾರತದ 2023ರ ಋತು ಹಾಗೂ ತವರಿನ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದೆ. ಈ 3 ಸರಣಿಗಳಲ್ಲಿ ಭಾರತ ಒಟ್ಟು 6 ಟಿ20, 9 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಶ್ರೀಲಂಕಾ ಎದುರಿನ 3 ಪಂದ್ಯಗಳ ಟಿ20 ಹಾಗೂ ಏಕದಿನ ಸರಣಿ ಮುಗಿದ ಮೂರೇ ದಿನಗಳಲ್ಲಿ ಭಾರತ-ನ್ಯೂಜಿ ಲ್ಯಾಂಡ್ ಸರಣಿ ಮೊದಲ್ಗೊಳ್ಳಲಿದೆ. ಇಲ್ಲಿಯೂ 3 ಟಿ20, 3 ಏಕದಿನ ಪಂದ್ಯ ಗಳನ್ನು ಆಡಲಾಗುವುದು. ಫೆ. ಒಂದಕ್ಕೆ ಈ ಸರಣಿ ಕೊನೆಗೊಳ್ಳುತ್ತದೆ. 8 ದಿನಗಳ ಬ್ರೇಕ್ ಬಳಿಕ ಭಾರತ-ಆಸ್ಟ್ರೇಲಿಯ ನಡು ವಿನ ಪ್ರತಿಷ್ಠಿತ ಬೋರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿ ಮೊದಲ್ಗೊಳ್ಳುತ್ತದೆ. ಮಾ. 24ರಂದು 3 ಪಂದ್ಯಗಳ ಏಕದಿನ ಸರಣಿಗೆ ಚಾಲನೆ ಲಭಿಸುತ್ತದೆ.
ಬಳಿಕ ಐಪಿಎಲ್ ಋತು. ಅನಂತರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. ಇದರ ಸ್ಥಳ, ದಿನಾಂಕ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಭಾರತ ತಂಡದ ಪ್ರವಾಸ
ವರ್ಷದ ಮೊದಲಾರ್ಧದಲ್ಲಿ ಭಾರತ ತವರಿನ ಸರಣಿಯಲ್ಲಿ ಪಾಲ್ಗೊಂಡರೆ, ದ್ವಿತೀಯಾರ್ಧದಲ್ಲಿ ವಿದೇಶ ಪ್ರವಾಸ ಕೈಗೊಳ್ಳಲಿದೆ.
ಜುಲೈ-ಆಗಸ್ಟ್ ತಿಂಗಳಲ್ಲಿ ವೆಸ್ಟ್ ಇಂಡೀಸ್‌ಗೆ ತೆರಳಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನು ಆಡಲಿದೆ. ಸೆಪ್ಟಂಬರ್‌ನಲ್ಲಿ ಆಸ್ಟ್ರೇಲಿಯಕ್ಕೆ ತೆರಳಿ 3 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತದೆ.
ಅನಂತರದ್ದು ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ. ಬಳಿಕ ವಿಶ್ವಕಪ್ ಕ್ರಿಕೆಟ್. ಇದು ಮುಗಿದ ಬಳಿಕ ಆಸ್ಟ್ರೇಲಿಯ ಮತ್ತೆ ಭಾರತಕ್ಕೆ ಬಂದು 5 ಟಿ20 ಪಂದ್ಯಗಳನ್ನು ಆಡಲಿದೆ. ವರ್ಷಾಂತ್ಯ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ. ಅಲ್ಲಿ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳು ನಡೆಯಲಿವೆ.