Advertisement

ನಕ್ಸಲ್‌ ಪೀಡಿತ ಪ್ರದೇಶದ ಹಂಜ ಶಾಲೆಗೆ ಶಿಕ್ಷಕರಿಲ್ಲ

06:00 AM Jun 19, 2018 | |

ಸಿದ್ದಾಪುರ: ನಕ್ಸಲ್‌ ಪೀಡಿತ ಪ್ರದೇಶವಾದ ಮಡಾಮಕ್ಕಿ ಗ್ರಾಮದ ಹಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಖಾಯಂ ಶಿಕ್ಷಕಿ ಹೆರಿಗೆ ರಜೆಯಲ್ಲಿರುವುದರಿಂದ ಪ್ರಸ್ತುತ ಶಿಕ್ಷಕರಿಲ್ಲದೆ ಮಕ್ಕಳು ಪರದಾಡುವಂತಾಗಿದೆ. 

Advertisement

ಏಕೈಕ ಶಾಲೆ
ನಕ್ಸಲ್‌ ಬಾಧಿತ ಪ್ರದೇಶವೆಂದು ಗುರುತಿಸಲ್ಪಟ್ಟ ಹಂಜ ಪರಿಸರದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಡಾಮಕ್ಕಿ ಪೇಟೆಯಿಂದ ನಾಲ್ಕೂವರೆ ಕಿ.ಮೀ. ತೀರ ಒಳಪ್ರದೇಶದಲ್ಲಿದೆ. ಹಂಜ, ಎಡಮಲೆ ಭಾಗದಲ್ಲಿ 40ಕ್ಕೂ ಅಧಿಕ ಮನೆಗಳಿಗೆ ಇರುವ ಏಕೈಕ ಶಾಲೆಯಾಗಿದೆ. ಕಡಿಮೆ ಮಕ್ಕಳಿರುವ ಸರಕಾರಿ ಶಾಲೆಯನ್ನು ಹತ್ತಿರದ ಶಾಲೆಯೊಂದಿಗೆ ವಿಲೀನಗೊಳಿಸಬೇಕು ಎನ್ನುವ ಸರಕಾರಿ ಆದೇಶವಿದ್ದರೂ ಶಾಲೆಯನ್ನು ಉಳಿಸಲು ಸ್ಥಳೀಯರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮೂಲಸೌಕರ್ಯ ವಂಚಿತ ಹಾಗೂ ನಕ್ಸಲ್‌ ಪೀಡಿತ ಪ್ರದೇಶದಲ್ಲಿರುವ ಏಕೈಕ ಶಾಲೆಯೆನ್ನುವ ನೆಲೆಯಲ್ಲಿ ಇಲಾಖೆ ಮತ್ತು ಸ್ಥಳೀಯರು ಶಾಲೆಯನ್ನು ಜೀವಂತವಾಗಿಸಿಕೊಂಡಿದ್ದಾರೆ. ಆದರೆ ಸರಕಾರಿ ಶಾಲೆಯಲ್ಲಿರುವ ಖಾಯಂ ಶಿಕ್ಷಕಿ ಹೆರಿಗೆ ರಜೆಯಲ್ಲಿರುವುದರಿಂದ ಪ್ರಸ್ತುತ ಶಿಕ್ಷಕರಿಲ್ಲದೆ ಶಾಲೆ ಮುಚ್ಚುವ ಭೀತಿ ಎದುರಾಗಿದೆ.

ನಿಯೋಜನೆ
ಹಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು 1ರಿಂದ 5ನೇ ತರಗತಿಯಿದ್ದು, ಒಟ್ಟು 11 ಮಕ್ಕಳು ಕಲಿಯುತ್ತಿದ್ದಾರೆ. ಮಹಿಳಾ ಶಿಕ್ಷಕಿ ಹೆರಿಗೆ ರಜೆಯಲ್ಲಿರುವುದರಿಂದ ವಾರದಲ್ಲಿ ಎರಡು ದಿನ (ಶುಕ್ರವಾರ, ಶನಿವಾರ) ಅಲಾºಡಿ ಶಾಲೆಯ ಶಿಕ್ಷಕರೊಬ್ಬರನ್ನು ನಿಯೋಜಿಸಲಾಗಿದೆ. ಉಳಿದ ದಿನಗಳಲ್ಲಿ ಶಾಲೆ ಮುಚ್ಚಬಾರದು ಎನ್ನುವ ನೆಲೆಯಲ್ಲಿ ಸರಕಾರಿ ಆದೇಶವಿಲ್ಲದಿದ್ದರೂ ಸ್ಥಳೀಯರೆಲ್ಲ ಒಟ್ಟಾಗಿ ತಾತ್ಕಾಲಿಕವಾಗಿ ಶಿಕ್ಷಕಿಯೊಬ್ಬರನ್ನು ನೇಮಿಸಿಕೊಂಡಿದ್ದಾರೆ.

ರಸ್ತೆಯೂ ಇಲ್ಲ
ಶಾಲೆಗೆ ತೆರಳುವುದಕ್ಕೆ ಸರಿಯಾದ ರಸ್ತೆಯಿಲ್ಲ. ಪ್ರಸ್ತುತ ಇರುವ ರಸ್ತೆ ಮಳೆಗಾಲದಲ್ಲಿ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಸಂಚಾರವೆ ದುಸ್ತರವಾಗಿದೆ. ನೇಮಕಗೊಂಡ ಸರಕಾರಿ ಶಿಕ್ಷಕಿಯು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಮಹಿಳೆಯಾಗಿ ನಕ್ಸಲ್‌ ಬಾಧಿತ ಪ್ರದೇಶ ಸರಕಾರಿ ಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಈ ಪ್ರದೇಶದಲ್ಲಿ ಉಳಿಯುವುದಕ್ಕೆ ಬಾಡಿಗೆ ಕೊಠಡಿ ವ್ಯವಸ್ಥೆಯಿಲ್ಲದಿರುವುದರಿಂದ ಮಗು ಸಣ್ಣದಾಗಿರುವುದರಿಂದ ಅವರು ಅನಿವಾರ್ಯವಾಗಿ ರಜೆಯನ್ನು ವಿಸ್ತರಿಸುವ ಸಾಧ್ಯತೆಯಿದೆ. ಆದ್ದರಿಂದ ಅವರನ್ನು ಬೇರೆ ಶಾಲೆಗೆ ವರ್ಗಾಯಿಸಿ ಹಂಜ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕು. ಈ ಕುರಿತು ಇಲಾಖೆ ಸೂಕ್ತ ಕ್ರಮ ಕೈಗೊಂಡು ನಕ್ಸಲ್‌ ಬಾಧಿತ ಪ್ರದೇಶದ ಶಾಲೆಯ ಶಿಕ್ಷಕರ ಕೊರತೆ ನೀಗಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

Advertisement

ಖಾಯಂ ಶಿಕ್ಷಕರನ್ನು ನೇಮಿಸಿ
ಹೆರಿಗೆ ರಜೆಯಲ್ಲಿರುವ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾಯಿಸಿ, ಖಾಯಂ ಶಿಕ್ಷಕರನ್ನು ನೇಮಿಸಬೇಕು. ಈ ಮೂಲಕ ಸರಕಾರಿ ಶಾಲೆ ಉಳಿಯಬೇಕು ಮತ್ತು ಈ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.
– ದಯಾನಂದ ಪೂಜಾರಿ ಹಂಜ
ಗ್ರಾ.ಪಂ. ಸದಸ್ಯ ಮಡಾಮಕ್ಕಿ

ಮಕ್ಕಳ ಪರದಾಟ
ಹಂಜ ಶಾಲೆಗೆ ಹೋಗಲು ಸರಿಯಾದ ರಸ್ತೆಯಿಲ್ಲದಿದ್ದರೂ ಮಹಿಳಾ ಶಿಕ್ಷಕಿ ಕರ್ತವ್ಯ ನಿರ್ವಹಿಸಿರುವುದು ಸ್ವಾಗತಾರ್ಹ. ಅನಿವಾರ್ಯ ಕಾರಣಗಳಿಂದ ರಜೆಯಲ್ಲಿರುವುದರಿಂದ ಆ ಶಾಲೆಗೆ ಶಿಕ್ಷಕರಿಲ್ಲದೆ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಇಲಾಖೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು.
– ಪ್ರಭಾಕರ ನಾಯ್ಕ, ಆರ್‌ಟಿಐ ಕಾರ್ಯಕರ್ತ

ಅತಿಥಿ ಶಿಕ್ಷಕಿ ನೇಮಕ
ಪ್ರಸ್ತುತ ಕಾರ್ಯಾಚರಿಸುವ ಯಾವುದೇ ಸರಕಾರಿ ಶಾಲೆ ಮುಚ್ಚುವ ಉದ್ದೇಶ ಇಲಾಖೆಗೆ ಇಲ್ಲ. ಹಂಜ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಆಧಾರದ ಮೇಲೆ ಖಾಯಂ ಶಿಕ್ಷಕಿಯೊಬ್ಬರು ಇದ್ದಾರೆ. ಅವರು ಹೆರಿಗೆ ರಜೆಯಲ್ಲಿರುವುದರಿಂದ ಬೇರೆ ಶಾಲೆಯಿಂದ ಶಿಕ್ಷಕರೊಬ್ಬರನ್ನು ನೇಮಕ ಮಾಡಿದ್ದೇವೆ. ಸ್ಥಳೀಯವಾಗಿ ಅತಿಥಿ ಶಿಕ್ಷಕಿಯನ್ನು ನೇಮಿಸಿಕೊಳ್ಳಲು ಹೇಳಿದ್ದೇವೆ. ಆದೇಶ ಇನ್ನೂ ಬಂದಿಲ್ಲ. ಬಂದ ಮೇಲೆ ಅತಿಥಿ ಶಿಕ್ಷಕಿಗೆ ಗೌರವ ಸಂಬಳ ನೀಡುತ್ತೇವೆ.
– ಅಶೋಕ ಕಾಮತ್‌,
ಕ್ಷೇತ್ರ ಶಿಕ್ಷಣಾಧಿಕಾರಿ ಕುಂದಾಪುರ

– ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next