Advertisement

ತುರುವನೂರು ಕಾಲೇಜು ಸ್ಥಳಾಂತರ ಇಲ್ಲ

05:17 PM Aug 24, 2020 | Suhan S |

ಚಿತ್ರದುರ್ಗ: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ತುರುವನೂರು ಪದವಿ ಕಾಲೇಜು ಸ್ಥಳಾಂತರವನ್ನು ಸರ್ಕಾರ ಕೈಬಿಟ್ಟಿದ್ದು, ಅದನ್ನು ಘಟಕ ಕಾಲೇಜನ್ನಾಗಿ ಮಾಡಲು ತೀರ್ಮಾನಿಸಿದೆ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ತಿಳಿಸಿದ್ದಾರೆ.

Advertisement

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರುವನೂರು ಪದವಿ ಕಾಲೇಜನ್ನು ನಿಪ್ಪಾಣಿಗೆ ಸ್ಥಳಾಂತರಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ ಈ  ನಿರ್ಧಾರ ವಿರೋಧಿಸಿ ನಾವು ಧರಣಿ ನಡೆಸಿದೆವು. ನಂತರ ಬೆಂಗಳೂರಿಗೆ ತೆರಳಿ ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ ಅವರನ್ನು ಭೇಟಿ ಮಾಡಿ ಸಮಸ್ಯೆ ವಿವರಿಸಿದ ನಂತರ ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದರು.

ಇದು ಕೇವಲ ನನ್ನೊಬ್ಬನಿಂದ ಆದ ಕೆಲಸವಲ್ಲ. ನನ್ನ ಹೋರಾಟಕ್ಕೆ ಹಿಂದುಳಿದ ವರ್ಗದ ಸ್ವಾಮೀಜಿಗಳ ಒಕ್ಕೂಟದ ಬೆಂಬಲವಿತ್ತು. ಎಲ್ಲ ಸ್ವಾಮೀಜಿಗಳು ಕಾಲೇಜು ಉಳಿವಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ನಿವೃತ್ತ ಪ್ರಾಧ್ಯಾಪಕರು, ಬುದ್ಧಿಜೀವಿಗಳು, ಸಾಹಿತಿಗಳು, ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು ನನ್ನ ಹೋರಾಟಕ್ಕೆ ಕೈಜೋಡಿಸಿದ್ದರು. ಸಂಸದ ಎ. ನಾರಾಯಣಸ್ವಾಮಿ, ಸಚಿವರು, ಕೆಲವು ಬಿಜೆಪಿ ಶಾಸಕರು ಸಹಕರಿಸಿದ್ದಾರೆ ಎಂದು ಸ್ಮರಿಸಿದರು.

ಕಾಲೇಜು ಉಳಿಸುವ ನನ್ನ ಹೋರಾಟಕ್ಕೆ ಕೈಜೋಡಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಅದರಂತೆ ತುರುವನೂರಿನಲ್ಲೇ ಕಾಲೇಜು ಮುಂದುವರಿಯಲು ಅವಕಾಶ ನೀಡಿರುವ ಹಾಗೂ ಅದನ್ನು ಮಾದರಿ ಕಾಲೇಜು ಮಾಡುವುದಾಗಿ ತಿಳಿಸಿರುವ ಉಪಮುಖ್ಯಮಂತ್ರಿ ಡಾ| ಅಶ್ವತ್ಥನಾರಾಯಣ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ತುರುವನೂರು ಕಾಲೇಜನ್ನು ದಾವಣಗೆರೆ ವಿಶ್ವವಿದ್ಯಾಯಲದ ಅಧೀನಕ್ಕೆ ಒಳಪಡಿಸಲಾಗಿದೆ. ಈ ಕುರಿತು ಸದ್ಯದಲ್ಲೇ ಸರ್ಕಾರದ ಆದೇಶ ಹೊರಬೀಳಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವುದಾಗಿ ಉಪಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇದರಿಂದ ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ. ಅಲ್ಲದೆ ಕಾಲೇಜಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಪಂಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಪ್ರಕಾಶ್‌, ಜಿಪಂ ಸದಸ್ಯ ಪ್ರಕಾಶ್‌ಮೂರ್ತಿ, ಮಾಜಿ ಸದಸ್ಯ ಬಾಬುರೆಡ್ಡಿ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next