ಹೊಸದಿಲ್ಲಿ: ಸದ್ಯಕ್ಕೆ ಪ್ರತ್ಯೇಕ ಲಿಂಗಾಯತ/ವೀರ ಶೈವ ಧರ್ಮದ ಘೋಷಣೆ ದೂರದ ಮಾತಾಗಿಯೇ ಉಳಿವ ಸಾಧ್ಯತೆ ಹೆಚ್ಚಾಗಿದೆ. ಕೇಂದ್ರ ಗೃಹ ಇಲಾಖೆ ಈ ಸಂಬಂಧ ಆಂತರಿಕ ಟಿಪ್ಪಣಿಯೊಂದನ್ನು ಸಿದ್ಧ ಮಾಡಿದ್ದು, ಒಂದು ವೇಳೆ ಪ್ರತ್ಯೇಕ ಧರ್ಮವೆಂದು ಘೋಷಣೆ ಮಾಡಿದಲ್ಲಿ ಸದ್ಯ ಲಿಂಗಾಯತ/ವೀರಶೈವ ಧರ್ಮದ ಕೆಲವರು ಪಡೆಯುತ್ತಿರುವ ಪರಿಶಿಷ್ಟ ಜಾತಿ ಸೌಲಭ್ಯವೂ ಹೋಗಲಿದೆ ಎಂದು ಅಭಿಪ್ರಾಯ ಪಡಲಾಗಿದೆ. ಹೀಗಾಗಿ, ಕರ್ನಾಟಕದ ವಿಧಾನಸಭೆ ಚುನಾವಣೆ ಮುಗಿಯುವವರೆಗೂ ಈ ಸಂಬಂಧ ಯಾವುದೇ ನಿರ್ಧಾರ ಹೊರ ಬೀಳುವುದಿಲ್ಲ ಎಂದು ಹೇಳಲಾಗಿದೆ.
ಇದಷ್ಟೇ ಅಲ್ಲ, ಈಗ ಕರ್ನಾಟಕದಲ್ಲಿನ ಲಿಂಗಾಯತ/ವೀರಶೈವ ಧರ್ಮದ ಬೇಡಿಕೆಗೆ ಮನ್ನಣೆ ನೀಡಿದರೆ, ಹಿಂದೂ ಸಮುದಾಯದ ಉಳಿದ ಪಂಗಡಗಳೂ ತಮಗೆ ಕೂಡ ಪ್ರತ್ಯೇಕ ಧರ್ಮ ಎಂಬ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖೀಸಲಾಗಿದೆ. ಈ ಸಂಬಂಧ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಸರಕಾರದ ಟಿಪ್ಪಣಿಯಲ್ಲಿ “ಈ ಬಗ್ಗೆ ತೀರ್ಮಾನ ತೆಗೆದುಕೊಂಡರೆ ಆರ್ಯ ಸಮಾಜ, ರಾಧಾಸ್ವಾಮಿ, ವೈಷ್ಣವ ಎಂಬ ಹಿಂದೂ ಧರ್ಮದ ಇತರ ಪಂಗಡಗಳೂ ಪ್ರತ್ಯೇಕ ಧರ್ಮಕ್ಕಾಗಿ ಬೇಡಿಕೆ ಮಂಡಿಸುವ ಸಾಧ್ಯತೆ ಇದೆ. ಏಕೆಂದರೆ ಅವುಗಳು ಬ್ರಾಹ್ಮಣ ಸಮುದಾಯ ಅನುಸರಿಸುವ ಹಿಂದೂ ಧಾರ್ಮಿಕ ವಿಧಾನಗಳನ್ನು ಅನುಸರಿಸುತ್ತಿಲ್ಲ’ ಎಂದು ಅಭಿಪ್ರಾಯಪಟ್ಟಿರುವುದಾಗಿ ಹೇಳಿದೆ.
ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗದ ಕಾಯ್ದೆ 1992ರ ಸೆಕ್ಷನ್ 2ರ ಪ್ರಕಾರ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಕ್ಖರು, ಬೌದ್ಧರು, ಪಾರ್ಸಿಗಳು ಮತ್ತು ಜೈನ ಸಮುದಾಯವನ್ನು ಮಾತ್ರ ಅಲ್ಪಸಂಖ್ಯಾಕರು ಎಂದು ಪರಿಗಣಿಸಲಾಗಿದೆ ಎಂದು ಕೇಂದ್ರ ಗೃಹ ಖಾತೆ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ) ಮಾಹಿತಿ ನೀಡಿದೆ. 2014ರಲ್ಲಿ ಜೈನ ಸಮುದಾಯಕ್ಕೆ “ಅಲ್ಪಸಂಖ್ಯಾಕ’ ಎಂಬ ಮಾನ್ಯತೆ ನೀಡಲಾಯಿತು.
2011ರ ಜನಗಣತಿಯ ಮಾಹಿತಿಯಂತೆ ಹಿಂದೂ ಧರ್ಮದಲ್ಲಿ ಅಲಖ್, ಮಹಿಮಾ, ಆನಂದ ಮಾರ್ಗಿ, ವೈಷ್ಣವ, ವಾಲ್ಮೀಕಿ, ಬ್ರಹ್ಮಕುಮಾರಿ, ಸನಾತನ ಧರ್ಮ ಎಂಬ ಪಂಗಡಗಳು ಇವೆ. ಪ್ರತಿ ಬಾರಿ ಸಮೀಕ್ಷೆ ನಡೆಸಿದಾಗಲೂ ಅವರು ತಮ್ಮ ಸಮುದಾಯವನ್ನು ಬದಲಿಸಿಕೊಳ್ಳುತ್ತಿರುವುದರಿಂದ ನಿಗದಿತ ಸಮುದಾಯವರು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ಕರಾರು ವಾಕ್ಕಾಗಿ ಹೇಳಲು ಸಾಧ್ಯವಾಗಿಲ್ಲ.
ಅವಸರ ಮಾಡಲ್ಲ: ಲಿಂಗಾಯತ / ವೀರಶೈವ ಸಮು ದಾಯಕ್ಕೆ ಅಲ್ಪಸಂಖ್ಯಾಕ ಸ್ಥಾನಮಾನ ನೀಡಿಕೆ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಯುತ್ತಿದೆ. ಆದರೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯ ಕರ್ನಾಟಕದಲ್ಲಿ ಮೇ 12ರಂದು ವಿಧಾನಸಭೆ ಚುನಾವಣೆ ನಡೆಯುವುದಾಗಿ ಘೋಷಣೆಯಾಗಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅವಸರವಾಗಿ ತೀರ್ಮಾನ ಕೈಗೊಂಡು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.
ಕರ್ನಾಟಕ ಸರಕಾರ ಮಾ. 22ರಂದು ನಿರ್ಧಾರದ ಬಗ್ಗೆ ಅಧಿಕೃತ ಪ್ರಕಟನೆ ಹೊರಡಿಸಿ, ಕೇಂದ್ರ ಸರಕಾರಕ್ಕೆ ಮಾ.23ರಂದು ಲಿಂಗಾಯತ ಹಾಗೂ ಬಸವಣ್ಣನವರ ತತ್ವಗಳನ್ನು ಅನುಸರಿಸುವ ವೀರಶೈವ ಸಮುದಾಯವನ್ನು ರಾಷ್ಟ್ರೀಯ ಅಲ್ಪಸಂಖ್ಯಾಕ ಆಯೋಗ ಕಾಯ್ದೆ 1992ರ ಅನ್ವಯ ಧಾರ್ಮಿಕ ಅಲ್ಪಸಂಖ್ಯಾಕರು ಎಂದು ಮಾನ್ಯತೆ ನೀಡಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ವಿಧ್ಯುಕ್ತವಾಗಿ ಮನವಿ ಸಲ್ಲಿಸಿತ್ತು.