ಕೊಟ್ಟಿಗೆಹಾರ: ರಸ್ತೆ ಸೌಕರ್ಯವಿಲ್ಲದೆ ಮಲೆಕುಡಿಯ ಕುಟುಂಬವೊಂದು ಮೃತಪಟ್ಟ ತಮ್ಮ ಕುಟುಂಬದ ಸದಸ್ಯರೊಬ್ಬರ ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿದ ಘಟನೆ ಹೊಳೆಕೂಡಿಗೆ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಹೊಳೆಕೂಡಿಗೆ ಮೂಲದ ಸುಬ್ಬರಾಯ (70) ಎಂಬುವವರು ಮೂತ್ರಪಿಂಡದ ಸಮಸ್ಯೆಯಿಂದ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದು ಅಂತ್ಯಸಂಸ್ಕಾರವನ್ನು ನೆರವೇರಿಸಲು ಶನಿವಾರ ಹೊಳೆಕೂಡಿಗೆಗೆ ಮೃತದೇಹವನ್ನು ತರಲಾಯಿತು. ಆದರೆ ಮೃತರ ಮನೆಗೆ ಹೋಗಲು ರಸ್ತೆ ಸೌಕರ್ಯ ಇಲ್ಲದೇ ಇರುವುದರಿಂದ ತೆಪ್ಪದಲ್ಲಿಯೇ ಮೃತದೇಹವನ್ನು ಇಟ್ಟು ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ನಾಲ್ಕು ದಶಕಗಳಿಂದ ಸಂಪರ್ಕಕ್ಕೆ ತೆಪ್ಪವನ್ನೇ ಆಶ್ರಯಿಸಿರುವ ಈ ಕುಟುಂಬ ಬೇರೆ ಬೇರೆ ಸಂದರ್ಭಗಳಲ್ಲಿ 9 ಮೃತದೇಹವನ್ನು ತೆಪ್ಪದಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದೆ. ನದಿಯ ಒಂದು ತೀರದ ಜಾಗವನ್ನು ತೆರವುಗೊಳಿಸಿ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಅಥವಾ ತೂಗು ಸೇತುವೆ ನಿರ್ಮಿಸುವಂತೆ ಈ ಕುಟುಂಬ ಹಲವು ಬಾರಿ ಜಿಲ್ಲಾಧಿಕಾರಿಗಳು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಈ ಬಗ್ಗೆ ಮಾತನಾಡಿದ ಮಲೆಕುಡಿಯ ಕುಟುಂಬದ ಸದಸ್ಯರಾದ ಸುರೇಶ್, ರಸ್ತೆಗಾಗಿ, ತೂಗು ಸೇತುವೆಗಾಗಿ ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.