ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದ್ದು, ಬಿತ್ತನೆಗಾಗಿ ಸಕಲ ಸಿದಟಛಿತೆ ಕೈಗೊಂಡಿರುವ ಅನ್ನದಾತರು ಇದೀಗ ಮಳೆಗಾಗಿ ಚಾತಕ ಪಕ್ಷಿಗಳಂತೆ ಆಕಾಶದತ್ತ ದಿಟ್ಟಿಸಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಮಳೆರಾಯನ ಕೃಪೆ ತೋರದ ಪರಿಣಾಮ ಇದುವರೆಗೂ ಬರೀ 0.25 ರಷ್ಟು ಮಾತ್ರ ಬಿತ್ತನೆ ದಾಖಲಾಗಿದೆ.
ಹೌದು, ಸಾಮಾನ್ಯವಾಗಿ ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಲ್ಲಿ ನೆಲಗಡಲೆ, ತೊಗರಿ ಬಿತ್ತನೆ ಕಾರ್ಯ ಪೂರ್ಣಗೊಳ್ಳುತ್ತಿತ್ತು. ಆದರೆ ಅರ್ಧ ತಿಂಗಳಾದರೂ ನೆಲಗಡಲೆ ಬಿತ್ತನೆ ಮಳೆಯ ಅಭಾವದಿಂದ ಆರಂಭಗೊಳ್ಳದಿರುವುದು ರೈತರನ್ನು ಸಾಕಷ್ಟು ಚಿಂತೆಗೀಡು ಮಾಡಿದ್ದು, ಬಿತ್ತನೆಗೆ ಚಿಪ್ಪೆ ಸುಲಿದು ಸಿದಪಡಿಸಿಕೊಂಡಿರುವ ನೆಲಗಡಲೆ ಬೀಜ ಸ್ವಲ್ಪ ದಿನ ಕಳೆದರೆ ಬಿತ್ತನೆಗೆ ಯೋಗ್ಯವಲ್ಲದಂತಾಗುವ ಆತಂಕ ರೈತರನ್ನು ಆವರಿಸಿದೆ.
1.40 ಲಕ್ಷ ಹೆಕ್ಟೇರ್ ಗುರಿ: ಜಿಲ್ಲೆಯಲ್ಲಿ ಈ ವರ್ಷ ಕೃಷಿ ಇಲಾಖೆ 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದೆ. ಆ ಪೈಕಿ ನೆಲಗಡಲೆ 26 ಸಾವಿರ ಹೆಕ್ಟೇರ್, ತೊಗರಿ 13,600 ಹೆಕ್ಟೇರ್ ಪ್ರದೇಶದ ಗುರಿ ಹೊಂದಲಾಗಿದೆ. ಆದರೆ ಇದುವರೆಗೂ ಬಿತ್ತನೆ ಆಗಿರುವುದು ಕೇವಲ 353 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ. ಜಿಲ್ಲಾದ್ಯಂತ ಉತ್ತಮ ಮಳೆ ಆಗಿದ್ದರೆ ಇಷ್ಟೊತ್ತಿಗಾಗಲೇ ನೆಲಗಡಲೆ ಹಾಗೂ ತೊಗರಿ ಬಿತ್ತನೆ ಕಾರ್ಯ ವಾಡಿಕೆಯಂತೆ ಪೂರ್ಣಗೊಳ್ಳಬೇಕಿತ್ತು. ಆದರೆ ಜಿಲ್ಲಾದ್ಯಂತ ಮಳೆ ಕ್ಷೀಣಿಸಿರುವುದರಿಂದ ಬಿತ್ತನೆ ಪ್ರಮಾಣ ಕುಸಿದಿದೆ.
ಇದುವರೆಗೂ ಜಿಲ್ಲೆಯಲ್ಲಿ 26 ಸಾವಿರ ಹೆಕ್ಟೇರ್ ಪ್ರದೇಶದ ಪೈಕಿ ನೆಲಗಡಲೆ 135 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿದ್ದರೆ ತೊಗರಿ 13,600 ಹೆಕ್ಟೇರ್ ಪೈಕಿ 62 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ನಡೆದಿದೆ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಂಗಾರು ಮಳೆ ಆರಂಭದಲ್ಲಿ ಬಿತ್ತನೆ ಸಮಯಕ್ಕೆ ಹೆಚ್ಚು ಕ್ಷೀಣಿಸಿದ್ದು, ಜಿಲ್ಲೆಯ ರೈತರು ಮಳೆಗಾಗಿ ಆಕಾಶದತ್ತ ದಿಟ್ಟಿಸಿ ನೋಡುವಂತಾಗಿದೆ. ಒಂದೆರೆಡು ದಿನಗಳಲ್ಲಿ ಮಳೆ ಕೃಪೆ ತೋರದಿದ್ದರೆ ಕಳೆದ ವರ್ಷದಂತೆ ನೆಲಗಡಲೆ ಬಿತ್ತನೆ ಪ್ರಮಾಣದಲ್ಲಿ ಸಾಕಷ್ಟು ಕುಸಿಯುವ ಸಾಧ್ಯತೆಗಳು ದಟ್ಟವಾಗಿವೆ.
ಜಿಲ್ಲೆಯಲ್ಲಿ ಈ ವರ್ಷದ ಮುಂಗಾರು ಹಂಗಾಮಿಗೆ ಒಟ್ಟು 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು, ಆ ಪೈಕಿ ಇದುವರೆಗೂ 0.25 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಜಿಲ್ಲೆಯ ರೈತರು ಬಿತ್ತನೆ ಕಾರ್ಯಕ್ಕೆ ಸಿದತೆ ನಡೆಸಿದ್ದು, ಮಳೆಗಾಗಿ ಎದುರು ನೋಡುತ್ತಿದ್ದಾರೆ.
-ಎಲ್.ರೂಪಾ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ
* ಕಾಗತಿ ನಾಗರಾಜಪ್ಪ