Advertisement

ಪ್ರವಾಸಿತಾಣಗಳ ಅಭಿವೃದ್ಧಿ ಬಗ್ಗೆ ಪ್ರಸ್ತಾಪವೇ ಇಲ್ಲ  

12:32 PM Feb 18, 2023 | Team Udayavani |

ಚಾಮರಾಜನಗರ: ಯಳಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು ಹಾಗೂ ಚಾಮರಾಜನಗರದ ಬದನಗುಪ್ಪೆ ಬಳಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಕೈಗಾರಿಕಾ ವಸಾಹತು ಸ್ಥಾಪನೆ ಎಂಬ ಎರಡು ಅಂಶ ಬಿಟ್ಟರೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ವಿಶೇಷ ಕೊಡುಗೆಗಳಿಲ್ಲ.

Advertisement

ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರಿದ್ದು, ಇದು ಚುನಾವಣಾ ವರ್ಷವಾದ್ದರಿಂದ ಜಿಲ್ಲೆಗೆ ಹೆಚ್ಚಿನ ಕೊಡುಗೆಗಳು ದೊರಕಬಹುದೆಂದು ಜನತೆ ನಿರೀಕ್ಷಿಸಿದ್ದರು. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನರ ನಿರೀಕ್ಷೆಯನ್ನ ಹುಸಿಗೊಳಿಸಿದ್ದಾರೆ. ಹೀಗಾಗಿ ಜಿಲ್ಲೆಯ ಪಾಲಿಗೆ ಈ ಬಾರಿಯ ಬಜೆಟ್‌ ನಿರಾಶಾದಾಯಕವಾಗಿದೆ.

ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಜಿಲ್ಲೆಗೆ ಅಗತ್ಯವಾಗಿ ಬೇಕಾದ ಕೆಲಸಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿದ್ದು, ಒಂದೇ ಉಪ ವಿಭಾಗ (ಕೊಳ್ಳೇಗಾಲ) ಇದೆ. ಆಡಳಿತದ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಮತ್ತೊಂದು ಉಪವಿಭಾಗ ರಚನೆ ಮಾಡಬೇಕು. ಹನೂರು ಹೊಸ ತಾಲೂಕಿನ ಕಾರ್ಯನಿರ್ವಹಣೆಗಾಗಿ 10 ಕೋಟಿ ರೂ ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಮತ್ತು 948 ಸಂಪರ್ಕಿಸುವ ಸಂತೆಮರಹಳ್ಳಿ ಮೂಗೂರು ಕ್ರಾಸ್‌ ವರೆಗಿನ 7 ಕಿ.ಮೀ. ರಸ್ತೆಯನ್ನು 18 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಪ್ರಸ್ತಾವನೆ.

ಯಳಂದೂರಿನ 30 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ 15.3 ಕೋಟಿ ರೂ ವೆಚ್ಚದ ಪ್ರಸ್ತಾವ ಮಾಡಲಾಗಿತ್ತು. ಈ ಪೈಕಿ ಯಳಂದೂರು ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಬಜೆಟ್‌ ನಲ್ಲಿ ಪ್ರಸ್ತಾಪಿಸಲಾಗಿದೆ.

ಈಗಾಗಲೇ ಬದನಗುಪ್ಪೆಯಲ್ಲಿ , ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಎಐಡಿಬಿ) ಯಿಂದ ಕೈಗಾರಿಕಾ ವಸಾಹತು ಸ್ಥಾಪಿಸಲಾಗಿದೆ. ಆದರೆ ಅದಕ್ಕೆ ಹೆಚ್ಚಿನ ಮೂಲ ಸೌಕರ್ಯಗಳಿಲ್ಲದೇ ಕೈಗಾರಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಜನರು ಮುಂದೆ ಬಂದಿಲ್ಲ. ಈ ಬಜೆಟ್‌ನಲ್ಲಿ ಇದೇ ಜಾಗದಲ್ಲಿ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಿಂದ ಹೊಸದಾಗಿ ಕೈಗಾರಿಕಾ ವಸಾಹತು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಲಾಗಿದೆ. ಇದಕ್ಕೆ ಎಷ್ಟು ಅನುದಾನ, ಎಷ್ಟು ಹೆಕ್ಟೇರ್‌ ಪ್ರದೇಶ, ಈ ಜಾಗದ ವಿಸ್ತರಣೆಯೋ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಹೀಗಾಗಿ ಇದು ಸಹ ಮೂಗಿಗೆ ತುಪ್ಪ ಸವರುವ ಕೆಲಸ ಎಂದೇ ತಿಳಿಯಬೇಕಾಗಿದೆ.

Advertisement

ಈಡೇರದ ಜಿಲ್ಲೆಯ ಜನರ ನಿರೀಕ್ಷೆಗಳು :

ಪ್ರವಾಸಿತಾಣಗಳ ಅಭಿವೃದ್ಧಿಗೆ ಅನುದಾನ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಪಡಿಸಲು ಅನುದಾನ ನೀಡಬಹುದಿತ್ತು. ರಾಜ್ಯ ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತಾಳಿದೆ.

ಕಾನೂನು ಕಾಲೇಜು: ಜಿಲ್ಲೆಯಲ್ಲಿಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿದೆ. ಅದನ್ನು ಕಾರ್ಯಾರಂಭ ಮಾಡಲು ಅನುದಾನ ನೀಡಿಲ್ಲ.

ಕಾವೇರಿ 2ನೇ ಹಂತ: ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ನಿರೀಕ್ಷಿಸಲಾಗಿದೆ. ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ 279 ಕೋಟಿ ರೂ. ಅಂದಾಜು ತಯಾರಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ. ಬಜೆಟ್‌ನಲ್ಲಿ ಇದರ ಬಗ್ಗೆ ಪ್ರಸ್ತಾವವಿಲ್ಲ.

ಹೊಸ ಬಸ್‌ ನಿಲ್ದಾಣ: ನಗರದಲ್ಲಿ ಈಗಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಚಿಕ್ಕದಾಗಿದ್ದು, ವಿಶಾಲವಾದ ಹೈಟೆಕ್‌ ಬಸ್‌ನಿಲ್ದಾಣವನ್ನು ಸಂತೆಮರಹಳ್ಳಿ ರಸ್ತೆಯ ರೇಷ್ಮೆ ಇಲಾಖೆ ಕಟ್ಟಡದ ಆವರಣದಲ್ಲಿ ನಿರ್ಮಿಸಲು ಅನುದಾನ ನಿರೀಕ್ಷಿಸಲಾಗಿತ್ತು. ಬಜೆಟ್‌ನಲ್ಲಿ ಇದರ ಸದ್ದಿಲ್ಲ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next