Advertisement
ಬಾಣಂತಿಯರು ಮತ್ತು ಶಿಶುಗಳ ಆರೋಗ್ಯಕ್ಕಾಗಿ ಸರಕಾರವು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೂ ಬಡವರಿಗೆಂದೇ ಇರುವ ಜಿಲ್ಲಾ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಾತ್ರ ಬಾಣಂತಿಯರು ಮತ್ತು ಶಿಶುಗಳು ವರಾಂಡದಲ್ಲೇ ಮಲಗಬೇಕಿದೆ. ಸುಮಾರು 5 ವರ್ಷಗಳಿಂದಲೂ ಇದೇ ಸ್ಥಿತಿಯಿದ್ದು, ಹೊಸ ಕಟ್ಟಡದ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಈ ಕಷ್ಟ ಮುಗಿಯುವಂತೆ ತೋರುತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ. ಹೊರಗಿನಿಂದ ಮಳೆ ನೀರು ಒಳ ಸೋಕದಂತೆ ತಡೆಯಲು ಕಿಟಕಿಗೆ ಪ್ಲಾಸ್ಟಿಕ್ ಕವರ್ ಅಳವಡಿಸಲಾಗಿದೆ. ಈ ಕವರ್ ಸಹ ಅಲ್ಲಲ್ಲಿ ಕಿತ್ತು ಹೋಗಿದ್ದು, ಹೊರಗಿನ ಗಾಳಿಯಿಂದಲೂ ಸಮಸ್ಯೆಯಾಗುತ್ತಿದೆ. ಕಿಟಕಿಯೂ ಬಂದ್ ಇಲ್ಲದಿರುವುದರಿಂದ ಈ ಗಾಳಿ ಚಳಿಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಸೊಳ್ಳೆ ಕಾಟವೂ ಹೆಚ್ಚಿದ್ದು, ಶಿಶುಗಳಿಗೆ ತೊಂದರೆಯಾಗುತ್ತಿದೆ. ಪ್ರಸ್ತುತ ಮಲೇರಿಯಾದಂಥ ಸಾಂಕ್ರಾಮಿಕ ರೋಗದ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ತಾಯಂದಿರು.
ಇಲ್ಲಿ ದಾಖಲಾದ ಮಹಿಳೆಯೋರ್ವರು ಹೇಳುವ ಪ್ರಕಾರ, ‘ಸಿಸೇರಿಯನ್ ಹೆರಿಗೆಯಾದವರನ್ನು ಮಾತ್ರ ಹೆರಿಗೆಯಾದ ಒಂದೆರಡು ದಿನಗಳಲ್ಲಿ ವರಾಂಡದಲ್ಲಿರುವ ಹಾಸಿಗೆಗಳಿಗೆ ಸ್ಥಳಾಂತರಿಸಲಾಗುತ್ತದೆ. ಮಳೆ ನೀರು ಕೆಲವೆಡೆ ಒಳಗೆ ಸೋಕಿದರೂ, ಅದರಿಂದ ಅಷ್ಟೇನೂ ಸಮಸ್ಯೆಯಾಗುತ್ತಿಲ್ಲ. ಆದರೆ ಸೊಳ್ಳೆ ಕಾಟ ವಿಪರೀತವಾಗಿದೆ. ಹುಟ್ಟಿದ ಎರಡು ದಿನಗಳಲ್ಲಿ ವರಾಂಡದಲ್ಲಿ ಮಲಗಬೇಕಾದ ಸ್ಥಿತಿ ಈ ಶಿಶುಗಳದ್ದು. ಇದರಿಂದ ಅವುಗಳು ಹೆಚ್ಚು ಅಳುತ್ತಿದ್ದು, ತಾಯಂದಿರಿಗೂ ನೆಮ್ಮದಿಯ ನಿದ್ದೆ ಇಲ್ಲದಂತಾಗಿದೆ. ಇಲ್ಲಿ ಇತರ ರೋಗಿಗಳನ್ನು ನೋಡಲು ಬಂದವರು ಆಚೀಚೆ ಓಡಾಡುತ್ತಿರುವುದರಿಂದ ಮಕ್ಕಳಿಗೆ ಹಾಲುಣಿಸಲೂ ಕಷ್ಟವಾಗುತ್ತಿದೆ’ ಎನ್ನುತ್ತಾರೆ. ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಐದು ವರ್ಷಗಳ ಹಿಂದೆ ಎಸ್‌ಎಲ್‌ಟಿ, ಎಂಎಲ್‌ಟಿ, ಹೆರಿಗೆ ಕೋಣೆ, ಗರ್ಭಿಣಿ ಯರಿಗೆಂದೇ ಇದ್ದ ಎಎಂಸಿ ವಾರ್ಡ್, ನವಜಾತ ಶಿಶುಗಳಿಗಾಗಿ ಇದ್ದ ಒಂದಿಡೀ ಬ್ಲಾಕ್‌ನ್ನೇ ಕೆಡವಲಾಗಿದೆ. ಇದರಿಂದ ಜಾಗದ ಕೊರತೆ ಉದ್ಭವಿಸಿದೆ. ಆಸ್ಪತ್ರೆಯಲ್ಲಿ ಹೆರಿಗೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ನಿಗದಿತ ಹಾಸಿಗೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆಗೆ ಬರುವ ಕಾರಣ ಅವರನ್ನು ಹೊರ ಕಳುಹಿಸಲೂ ಸಾಧ್ಯವಾಗುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ವರಾಂಡದಲ್ಲೇ ಮಂಚ – ಹಾಸಿಗೆ ಹಾಕಿ ಮಲಗಿಸಲಾಗುತ್ತಿದೆ. ಒಟ್ಟು ಸುಮಾರು 12 ಹಾಸಿಗೆಗಳು ವರಾಂಡದಲ್ಲಿವೆ. ಪ್ರಸ್ತುತ ಆಸ್ಪತ್ರೆಯಲ್ಲಿ 250 ಹಾಸಿಗೆ ಸಾಮರ್ಥ್ಯವಿದ್ದು, 12 ನವಜಾತ ಶಿಶುಗಳ ತೀವ್ರ ನಿಗಾ ಘಟಕ ಇದೆ. ಹೊಸ ಕಟ್ಟಡ ಆದ ನಂತರ ಸಮಸ್ಯೆ ನಿವಾರಣೆಯಾಗಲಿದೆ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ | ಸವಿತಾ.
Related Articles
ಐದು ವರ್ಷಗಳಿಂದ ಕುಂಟುತ್ತಲೇ ಸಾಗಿದ್ದ ಹೊಸ ಕಟ್ಟಡ ಕಾಮಗಾರಿ ಮುಗಿದು ಜುಲೈ ತಿಂಗಳಾಂತ್ಯಕ್ಕೆ ಲೋಕಾರ್ಪಣೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಅದು ಅನುಮಾನ. ಆಗಸ್ಟ್ ತಿಂಗಳಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ಆಸ್ಪತ್ರೆ ಸಿಬಂದಿ. ಹೊಸ ಕಟ್ಟಡದ ಕಾಮಗಾರಿ 2013ರ ಆಗಸ್ಟ್ 13ರಂದು ಆರಂಭವಾಗಿತ್ತು. ಈ ಹಿಂದೆ ಸಂಸದ ನಳಿನ್‌ಕುಮಾರ್ ಕಟೀಲು ಅವರು ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿ ಜುಲೈ ತಿಂಗಳಿನಿಂದ ಸಾರ್ವಜನಿಕರ ಸೇವೆಗೆ ಲಭ್ಯ ಎಂದಿದ್ದರು.
Advertisement
ಅಯ್ಯೋ ಎನಿಸುತ್ತದೆಧಾರಾಕಾರ ಮಳೆ ಬಂದಾಗ ಇಲ್ಲಿ ಮಲಗಿರುವ ಬಾಣಂತಿಯರು ಮತ್ತು ಶಿಶುಗಳ ಪರಿಸ್ಥಿತಿ ನೋಡಿ ಅಯ್ಯೋ ಎನಿಸುತ್ತದೆ. ಸೊಳ್ಳೆ ಕಡಿತದಿಂದಾಗಿ ಮಕ್ಕಳು ಅಳುತ್ತಿರುತ್ತಾರೆ. ಮಳೆಯಲ್ಲಿ ಒದ್ದೆಯಾಗಿ ಬಂದು ಆಚೀಚೆ ನಡೆದಾಡುವುದರಿಂದ ಈ ಕಾಲುದಾರಿಯಲ್ಲಿ ನೀರಿರುತ್ತದೆ. ಅದು ಮತ್ತೂಂದು ಸಮಸ್ಯೆ.
– ವಾರಿಜಾ, ರೋಗಿಯೋರ್ವರನ್ನು ನೋಡಿಕೊಳ್ಳಲು ಆಸ್ಪತ್ರೆಗೆ ಬಂದವರು ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ
ಜಾಗದ ಸಮಸ್ಯೆಯಿಂದಾಗಿ ಮತ್ತು ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಒಳಗಿನ ಕಾಲುದಾರಿಯಲ್ಲಿ ಹಾಸಿಗೆ ಹಾಕಿ ಬಾಣಂತಿಯರು ಮತ್ತು ಶಿಶುಗಳನ್ನು ಮಲಗಿಸಲಾಗಿದೆ. ಅವರಿಗೆ ತೊಂದರೆಯಾಗದಂತೆ ವೆರಾಂಡದ ಕಿಟಕಿಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಸಲಾಗಿದೆ. ಪಕ್ಕದಲ್ಲೇ ನಿರ್ಮಾಣವಾಗುತ್ತಿರುವ ಆಸ್ಪತ್ರೆಯ ಹೊಸ ಕಟ್ಟಡ ಜುಲೈ ಅಂತ್ಯಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಉದ್ಘಾಟನೆ ವಿಳಂಬವಾಗುತ್ತಿದೆ. ಬಹುಶಃ ಆಗಸ್ಟ್‌ನಲ್ಲಿ ಹೊಸ ಕಟ್ಟಡ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಆನಂತರ ಈಗ ಉಂಟಾಗಿರುವ ಬಹುತೇಕ ಸಮಸ್ಯೆ ನಿವಾರಣೆಯಾಗಲಿದೆ.
– ಡಾ| ಸವಿತಾ, ವೈದ್ಯಕೀಯ ಅಧೀಕ್ಷಕಿ, ಲೇಡಿಗೋಶನ್ ಆಸ್ಪತ್ರೆ – ಧನ್ಯಾ ಬಾಳೆಕಜೆ