ಸುಳ್ಯ: ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 108 ತುರ್ತು ಆ್ಯಂಬುಲೆನ್ಸ್ ವಾಹನವನ್ನು ಆಸ್ಪತ್ರೆಯ ಶೆಡ್‌ನಲ್ಲಿ ನಿಲುಗಡೆ ಮಾಡದಂತೆ ಸೂಚಿಸಿದ ಬಳಿಕ ಆರಂಭಗೊಂಡ ಗೊಂದಲ ಈಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದ್ದು, ಇದೇ ಕಾರಣ ಮುಂದಿಟ್ಟು 108 ಆ್ಯಂಬುಲೆನ್ಸ್ ಪಡೆದಿದ್ದು, ಸೋಮವಾರ ರೋಗಿಯೋರ್ವರನ್ನು ಮಂಗಳೂರಿಗೆ ರವಾನಿಸಲು ನಿರಾಕರಿಸಲಾದ ಆರೋಪ ಕೇಳಿ ಬಂದಿದೆ.
ಸುಳ್ಯ ಆಸ್ಪತ್ರೆಗೆ ಹೆಚ್ಚುವರಿ ಹೊಸ ಆ್ಯಂಬುಲೆನ್ಸ್ ಬಂದ ಕಾರಣ ಅದರ ನಿಲುಗಡೆಗೆ ಆಸ್ಪತ್ರೆಯ ಶೆಡ್‌ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ 108 ಆ್ಯಂಬುಲೆನ್ಸ್ ವಾಹನಕ್ಕೆ ನಿಲುಗಡೆಗೆ ಜಾಗದ ಕೊರತೆ ಉಂಟಾಗಿ ರಸ್ತೆ ಬದಿಯಲ್ಲೂ ನಿಲ್ಲಿಸಲಾಗಿತ್ತು. ಬಳಿಕದ ದಿನದಲ್ಲಿ ಆಸ್ಪತ್ರೆಯ ಕ್ಯಾಂಟೀನ್ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. 108 ಆ್ಯಂಬುಲೆನ್ಸ್‌ಗೆ ನಿಲುಗಡೆಗೆ ಸೂಕ್ತ ವ್ಯವಸ್ಥೆ, ತಮಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಸಿಬಂದಿ ವರ್ಗವು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿತ್ತು.
ಈ ನಡುವೆ ಸೋಮವಾರ ಬೆಳಗ್ಗೆ ಸುಳ್ಯ ಆಸ್ಪತ್ರೆಯಿಂದ ಮಂಗಳೂರಿಗೆ ರೋಗಿಯೋರ್ವರನ್ನು ಕರೆದೊಯ್ಯಲು 108 ಆ್ಯಂಬುಲೆನ್ಸ್ ಗೆ ಕರೆ ಮಾಡಿದಾಗ, ಅದರ ಪ್ರಧಾನ ಕಚೇರಿಯಿಂದಲೇ ಸುಳ್ಯದ 108 ಆ್ಯಂಬುಲೆನ್ಸ್ ಒದಗಿಸಲು ನಿರಾಕರಿಸಲಾಗಿದೆ. ಇದರಿಂದ ಆಸ್ಪತ್ರೆಯ ಇನ್ನೊಂದು ಆ್ಯಂಬುಲೆನ್ಸ್‌ನಲ್ಲಿ ರೋಗಿಯನ್ನು ಮಂಗಳೂರಿಗೆ ಕೊಂಡೊಯ್ಯಲಾಯಿತು. ಪ್ರಕರಣ ತೀವ್ರತೆಯನ್ನು ಪಡೆಯುತ್ತಿದ್ದಂತೆ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಮುಖರು ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ಹಂತದಲ್ಲಿ ಸಮಸ್ಯೆಯನ್ನು ಬಗೆಹರಿಸಲು ಮೇಲಿನಿಂದ ಆಸ್ಪತ್ರೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
“ಸೋಮವಾರ ಬೆಳಗ್ಗೆ ರೋಗಿಯೋರ್ವರನ್ನು 108 ಆ್ಯಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯಲು ನಿರಾಕರಿಸಿದ್ದಾರೆಂದು ರೋಗಿಯ ಕಡೆಯವರು ನಮಗೆ ತಿಳಿಸಿದ್ದು, ಬಳಿಕ ಅವರಿಗೆ ಬದಲಿ ಆ್ಯಂಬುಲೆನ್ಸ್ ಕಲ್ಪಿಸಲಾಗಿದೆ. ಇನ್ನೋರ್ವ ರೋಗಿಯನ್ನು 108 ಆ್ಯಂಬುಲೆನ್ಸ್ ನಲ್ಲೇ ರವಾನಿಸಲಾಗಿದೆ. ಯಾವ ಕಾರಣಕ್ಕೆ ಹೀಗಾಗಿದೆ ಎಂದು ಗೊತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.”
– ಡಾ| ಕರುಣಾಕರ, ಆಡಳಿತ ವೈದ್ಯಾಧಿಕಾರಿ, ಸುಳ್ಯ ತಾಲೂಕು ಸಾರ್ವಜನಿಕ ಆಸ್ಪತ್ರೆ