Advertisement

ಕೇಂದ್ರದ ಮುಂದೆ ಸಾಲಮನ್ನಾದ ಪ್ರಸ್ತಾಪವಿಲ್ಲ: ರಮೇಶ್‌ ಜಿಗಜಿಣಗಿ

06:00 AM Dec 05, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿನ ಬರ ನಿರ್ವಹಣೆ, ನೆರೆ ಪರಿಹಾರ ಕಾರ್ಯ, ರೈತರ ಸ್ಥಿತಿಗತಿ ಹಾಗೂ ಸಂಕಷ್ಟ ಅರಿಯಲು ಅಧ್ಯಯನ ಪ್ರವಾಸ ಕೈಗೊಂಡಿರುವ ಬಿಜೆಪಿ ನಾಯಕರು, ಮಂಗಳವಾರ ಬಳ್ಳಾರಿ, ದಾವಣಗೆರೆ, ರಾಯಚೂರು, ತುಮಕೂರು ಜಿಲ್ಲೆಗಳಲ್ಲಿ ಬರ
ಪರಿಶೀಲನೆ ನಡೆಸಿದರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ನೇತೃತ್ವದ ತಂಡ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಹಲವೆಡೆ ಬರ ಪರಿಶೀಲನೆ ನಡೆಸಿತು. ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಭೀಕರ ಬರ
ಇದ್ದರೂ ರೈತರ ಕಷ್ಟ ಆಲಿಸಲು ಉಸ್ತುವಾರಿ ಸಚಿವರಾಗಲಿ, ಅಧಿಕಾರಿಗಳಾಗಲಿ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ರೈತರಿಗೆ ತಕ್ಷಣವೇ ಕಬ್ಬಿನ ಬಾಕಿ ಪಾವತಿಸಬೇಕು ಎಂದು ಆಗ್ರಹಿಸಿದರು. ರೈತರ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲು ಡಿ.10ರಂದು ಬೆಳಗಾವಿಯಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು.

Advertisement

ಇದೇ ವೇಳೆ, ಕೇಂದ್ರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ನೇತೃತ್ವದ ತಂಡ ತುಮಕೂರು ತಾಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ, ಬರದ ಪರಿಶೀಲನೆ ನಡೆಸಿತು. ಈ ಮಧ್ಯೆ, ತುಮಕೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರದ ಮುಂದೆ ರಾಜ್ಯದ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಸಾಲಮನ್ನಾ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಕೇವಲ ರಾಜ್ಯದ ರೈತರ ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ. ವಿವಿಧ ರಾಜ್ಯಗಳ ರೈತರ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲಮನ್ನಾ ಮಾಡಲು ಪಕ್ಷದ ಎಲ್ಲಾ ಸಂಸದರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಪ್ರಧಾನಿಯವರು ಈ ಬಗ್ಗೆ ಕ್ರಮ  ಕೈಗೊಳ್ಳುವ ಸಾಧ್ಯತೆ ಇದೆ ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ನೇತೃತ್ವದ 
ತಂಡ, ಹೊಸಪೇಟೆ ಸೇರಿದಂತೆ ಬಳ್ಳಾರಿ ಜಿಲ್ಲೆಯ ವಿವಿಧೆಡೆ ಬರ ಅಧ್ಯಯನ ನಡೆಸಿತು. ಈ ವೇಳೆ ಸುದ್ದಿಗಾರರ ಜೊತೆ 
ಮಾತನಾಡಿದ ಶೆಟ್ಟರ್‌, ರೈತರ ಹಲವು ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಡಿ.10ರಂದು ಸುವರ್ಣಸೌಧ ಮುತ್ತಿಗೆ ಹಾಕಲಿದ್ದೇವೆ ಎಂದು ಹೇಳಿದರು.

ಇದೇ ವೇಳೆ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದ ತಂಡ ದಾವಣಗೆರೆಯ ವಿವಿಧೆಡೆ ಬರ ಅಧ್ಯಯನ ನಡೆಸಿತು. ಈ ವೇಳೆ, ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next