Advertisement

ನ್ಯಾಯಾಂಗ, ಕಾರ್ಯಾಂಗ ನಡುವೆ ಹಸ್ತಕ್ಷೇಪ ಸಲ್ಲದು

06:10 AM Nov 27, 2017 | Harsha Rao |

ಹೊಸದಿಲ್ಲಿ: ಪ್ರಜಾಪ್ರಭುತ್ವದ ಮೂರು ಆಧಾರ ಸ್ತಂಭಗಳಾದ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗಗಳು ಪರಸ್ಪರ ಸಹಕಾರದಿಂದ ನವಭಾರತವನ್ನು ಕಟ್ಟಲು ಮುಂದಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Advertisement

ರಾಷ್ಟ್ರೀಯ ಕಾನೂನು ದಿನಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಆಧಾರ ಸ್ತಂಭವೂ ಮತ್ತೂಂದು ಆಧಾರ ಸ್ತಂಭದ ದೌರ್ಬಲ್ಯಗಳ ಕಡೆಗೆ ಬೆರಳು ತೋರದೆ, ಅಸಹಕಾರ ವ್ಯಕ್ತಪಡಿಸದೇ ಒಗ್ಗಟ್ಟಾಗಿ ಹೊಸ ಭಾರತವನ್ನು ಕಟ್ಟುವತ್ತ ಮುಂದಡಿಯಿಡಬೇಕು ಎಂದಿದ್ದಾರೆ. 

ಮೂರೂ ಆಧಾರ ಸ್ತಂಭಗಳ ನಡುವೆ ಪರಸ್ಪರ ಹಸ್ತಕ್ಷೇಪ ಸಲ್ಲದು ಎಂದ ಮೋದಿ, “”ಶಾಸಕಾಂಗವು ಸ್ವತಂತ್ರವಾಗಿ ಕಾನೂನುಗಳನ್ನು ರೂಪಿಸಬೇಕು. ಕಾರ್ಯಾಂಗವು ಸರ್ಕಾರದ ಆಶಯಗಳನ್ನು ಜನರಿಗೆ ಸ್ವತಂತ್ರವಾಗಿ ತಲುಪಿಸಬೇಕು. ಇನ್ನು, ನ್ಯಾಯಾಂಗವು ಸ್ವತಂತ್ರವಾಗಿ ಸಂವಿಧಾನದ ಆಶಯಗಳನ್ನು ಜಾರಿ ಗೊಳಿಸಬೇಕು. ಈ ವಿಚಾರದಲ್ಲಿ ಒಬ್ಬರ ಕೆಲಸಗಳಿಗೆ ಮತ್ತೂಬ್ಬರು ಅಡ್ಡಗಾಲು ಹಾಕಬಾರದು” ಎಂದು ಆಶಿಸಿದ್ದಾರೆ.

ಇದೇ ವೇಳೆ, ಭಾರತದ ಸಂವಿಧಾನವನ್ನು ಕೊಂಡಾಡಿದ ಅವರು, ಸ್ವಾತಂತ್ರಾé ನಂತರ ಭಾರತವು ಅಭಿವೃದ್ಧಿ ಕಾಣುವಲ್ಲಿ ಸಂವಿಧಾನ ಪ್ರಧಾನ ಪಾತ್ರ ವಹಿಸಿದೆ ಎಂದಿದ್ದಾರೆ.

ಸಚಿವರ ಪ್ರಶ್ನೆಗೆ ಸಿಜೆಐ ಉತ್ತರ 
ಸಮಾರಂಭದಲ್ಲಿ, ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ನಡುವೆ ಏಟಿಗೆ ಎದುರೇಟು ಎಂಬಂಥ ಭಾಷಣಗಳು ನಡೆದಿದ್ದು ಕುತೂಹಲಕರವಾಗಿತ್ತು. ಉನ್ನತ ನ್ಯಾಯಾಂಗಕ್ಕೆ ನ್ಯಾಯಮೂರ್ತಿಗಳನ್ನು ನೇಮಿಸಲು ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (ಎನ್‌ಜೆಎಸಿ) ರಚಿಸುವ ಪ್ರಸ್ತಾಪವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ತಮ್ಮ ಭಾಷಣದಲ್ಲಿ ಉಲ್ಲೇಖೀಸಿದ ಸಚಿವ ಪ್ರಸಾದ್‌, “”ನ್ಯಾಯಮೂರ್ತಿಗಳನ್ನು ನೇಮಿಸುವ ವಿಚಾರದಲ್ಲಿ ಪ್ರಧಾನಿ, ಕಾನೂನು ಸಚಿವರನ್ನೇ ನ್ಯಾಯಾಂಗ ಅನುಮಾನಿಸುತ್ತದೆ. ಇದೊಂದು ಗಂಭೀರವಾಗಿ ಆಲೋಚಿಸಬೇಕಾದ ವಿಚಾರ” ಎಂದರು. ಇದಕ್ಕೆ ತಮ್ಮ ಭಾಷಣದಲ್ಲಿ ಉತ್ತರಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, “”ಈವರೆಗೆ ಸುಪ್ರೀಂ ಕೋರ್ಟ್‌ ಕಾನೂನು ಇಲಾಖೆಯನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಸರಕಾರ, ಕಾನೂನು ಇಲಾಖೆ ಹಾಗೂ ಸುಪ್ರೀಂ ಕೋರ್ಟ್‌ ನಡುವೆ ಪಾರಮ್ಯದ ವಿಚಾರವಾಗಿ ಎಂದಿಗೂ ಪೈಪೋಟಿ ಏರ್ಪಡಬಾರದು. ಈ ಮೂರೂ ಶಾಖೆಗಳು ಸಂವಿಧಾನ ಸಾರ್ವಭೌಮತ್ವದಡಿಯಲ್ಲೇ ಕಾರ್ಯ ನಿರ್ವಹಿಸಬೇಕು” ಎಂದು ಕಿವಿಮಾತು ಹೇಳಿದರು. ಇನ್ನು, ರವಿಶಂಕರ್‌ ಪ್ರಸಾದ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೆಚ್ಚಿನ ಪುರಸ್ಕಾರ ಕೊಡುವ ಅಗತ್ಯವಿಲ್ಲ ಎಂಬರ್ಥದ ಟೀಕೆಗೂ ತಮ್ಮ ಭಾಷಣದಲ್ಲಿ ಸೂಚ್ಯವಾಗಿ ಉತ್ತರಿಸಿದ ನ್ಯಾ. ಮಿಶ್ರಾ, ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವಲ್ಲಿ ಯಾವುದೇ ರಾಜಿಯಿಲ್ಲ ಎಂದು ತಿರುಗೇಟು ಕೊಟ್ಟರು. 

Advertisement

ಸಂವಿಧಾನವನ್ನು ಜನಸಾಮಾನ್ಯರ ದೃಷ್ಟಿಯಲ್ಲಿ ಅರ್ಥಪೂರ್ಣವಾಗಿ ಸುವ ಬಗ್ಗೆ ಪ್ರಯತ್ನಗಳು ಆಗಬೇಕಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಸಮತೋಲಿತವಾಗಿ ಕಾರ್ಯನಿರ್ವಹಿಸಬೇಕಿದೆ.  
– ರಾಮನಾಥ್‌ ಕೋವಿಂದ್‌, ರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next