Advertisement

ಪ್ರಯತ್ನ ಪಡದೆ ಫ‌ಲವಿಲ್ಲ

06:00 AM Aug 30, 2018 | |

ವಿದ್ಯಾರಣ್ಯಪುರ ಎಂಬುದೊಂದು ಊರು. ಅಲ್ಲೊಂದು ಆಶ್ರಮವಿತ್ತು. ಅಲ್ಲೊಬ್ಬ ಸಕಲ ವಿದ್ಯಾಪಾರಂಗತನೂ ಸರ್ವಜ್ಞಾನಿಯೂ ಆದ ಜಗದ್ಗುರು ಒಬ್ಬನಿದ್ದ. ಆತ ಏನೇ ಹೇಳಿದರೂ ಅದು ನಿಜವಾಗುತ್ತದೆಂಬ ನಂಬಿಕೆ ಜನರಲ್ಲಿತ್ತು. ಹಾಗಾಗಿ ವಿದ್ಯಾರಣ್ಯಪುರದ ಜನರು ಮಾತ್ರವಲ್ಲದೆ, ದೂರ ದೂರದ ಊರುಗಳ ಜನರೆಲ್ಲಾ ಆಶ್ರಮಕ್ಕೆ ಬಂದು ತಮ್ಮ ಭವಿಷ್ಯವನ್ನು ಕೇಳುತ್ತಿದ್ದರು. ಯಾರೇ ಬಂದರೂ ಒಂದಿನಿತೂ ಬೇಸರ ಪಟ್ಟುಕೊಳ್ಳದೆ ಬಹಳ ಹಸನ್ಮುಖೀಯಾಗಿ ಅವರ ಕಷ್ಟ ಕಾರ್ಪಣ್ಯಗಳಿಗೆ ಜಗದ್ಗುರು ಸ್ಪಂದಿಸುತ್ತಿದ್ದರು.

Advertisement

ಒಮ್ಮೆ ಮಹೇಶ ಮತ್ತು ಸುರೇಶ ಎಂಬ ಇಬ್ಬರು ವಿದ್ಯಾರ್ಥಿಗಳು ಆಶ್ರಮಕ್ಕೆ ಬಂದು ಜಗದ್ಗುರುವಿನ ಪಾದಗಳಿಗೆ ನಮಸ್ಕಾರ ಮಾಡಿ “ಗುರುಗಳೇ, ನಾವಿಬ್ಬರೂ ಗೆಳೆಯರು. ಒಂದೇ ಶಾಲೆಯಲ್ಲಿ ಓದುತ್ತಿದ್ದೇವೆ. ನಮಗೆ ನಿಮ್ಮ ಆಶೀರ್ವಾದ ಬೇಕು’ ಎಂದು ತಲೆ ಬಾಗಿದರು. ತಕ್ಷಣವೇ ಜಗದ್ಗುರು ಇವರಿಬ್ಬರನ್ನೂ ಒಂದು ಕ್ಷಣ ತದೇಕಚಿತ್ತದಿಂದ ನೋಡಿ “ನೀನು ಪ್ರಥಮ ದರ್ಜೆಯಲ್ಲಿ ಪರೀಕ್ಷೆ ಪಾಸಾಗುತ್ತೀಯಾ’ ಎಂದು ಮಹೇಶನಿಗೆ ಹೇಳಿದರು. ಹಾಗೆಯೇ ಸುರೇಶನಿಗೆ “ಪರೀಕ್ಷೆಯಲ್ಲಿ ನೀನು ಫೇಲಾಗುತ್ತೀಯಾ’ ಅಂದುಬಿಟ್ಟರು.

ತಾನು ಪ್ರಥಮ ದರ್ಜೆಯಲ್ಲಿ ಪಾಸಾಗುವ ಭವಿಷ್ಯ ಕೇಳಿ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ. ಜಗದ್ಗುರುಗಳ ಮಾತನ್ನೇ ನಂಬಿಕೊಂಡ. ಪಠ್ಯವೊಂದನ್ನು ಬಿಟ್ಟು ಮಿಕ್ಕೆಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡ. ಹೇಗಿದ್ದರೂ ಒಳ್ಳೆ ಅಂಕ ಪಡೆದು ಪಾಸಾಗುತ್ತೇನಲ್ಲ ಎಂದುಕೊಂಡು ಪುಸ್ತಕವನ್ನು ತೆರೆಯುವ ಗೋಜಿಗೇ ಹೋಗಲಿಲ್ಲ. ಆದರೆ ಅವನ ಗೆಳೆಯ ಸುರೇಶ ಜಗದ್ಗುರು ತಾನು ಫೇಲಾಗುತ್ತೇನೆಂದು ಹೇಳಿದ್ದರಿಂದ ಬೇಸರ ಪಟ್ಟುಕೊಂಡ. ಫೇಲಾಗುವ ಭಯದಿಂದಲೇ ಕಷ್ಟಪಟ್ಟು ಓದಲು ಶುರುಮಾಡಿದ. ಅಲ್ಲಿ- ಇಲ್ಲಿ, ಅತ್ತ- ಇತ್ತ, ಹಬ್ಬ- ಹರಿದಿನ ಅಂತ ಎಲ್ಲೂ ಅಲೆಯಲಿಲ್ಲ. ಹಗಲು ರಾತ್ರಿಯೆನ್ನದೆ ಏಕಾಗ್ರತೆಯಿಂದ ಚೆನ್ನಾಗಿ ಓದಿದ. 

ಒಂದೆರೆಡು ತಿಂಗಳಲ್ಲಿ ಪರೀಕ್ಷೆ ಬಂತು. ಇಬ್ಬರೂ ಪರೀಕ್ಷೆ ಬರೆದರು. ಕೆಲವೇ ದಿನಗಳಲ್ಲಿ ಫ‌ಲಿತಾಂಶವೂ ಬಂತು. ಜಗದ್ಗುರುವಿನ ಭವಿಷ್ಯ ಸುಳ್ಳಾಗಿತ್ತು. ಪ್ರಥಮ ದರ್ಜೆಯಲ್ಲಿ ಪಾಸಾಗಬೇಕಿದ್ದ ಮಹೇಶ ಅತ್ಯಂತ ಕಡಿಮೆ ಅಂಕ ಪಡೆದಿದ್ದ. ಫೇಲಾಗುವುದಾಗಿ ಭವಿಷ್ಯ ನುಡಿಸಿಕೊಂಡಿದ್ದ ಸುರೇಶ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ. ಕುಪಿತಗೊಂಡ ಮಹೇಶ ಆವೇಶದಿಂದ ಆಶ್ರಮಕ್ಕೆ ಹೋಗಿ ಜಗದ್ಗುರುವನ್ನು ಪ್ರಶ್ನಿಸಿದ. “ಗುರುಗಳೇ, ನೀವು ಪ್ರಥಮ ಶ್ರೇಣಿಯಲ್ಲಿ ಪಾಸಾಗುವೆ ಎಂದು ಆಶೀರ್ವಾದ ಮಾಡಿದ್ದಿರಿ. ಆದರೆ ನಾನು ಜಸ್ಟ್‌ ಪಾಸ್‌ ಆಗಿದ್ದೇನೆ. ನೀವು ಫೇಲಾಗುವುದಾಗಿ ಹೇಳಿದ್ದ ನನ್ನ ಗೆಳೆಯ ಸುರೇಶ ಡಿಸ್ಟಿಂಕ್ಷನ್‌ ಪಡೆದು ಪಾಸಾಗಿಬಿಟ್ಟ. ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ…’ ಎಂದು ಗೋಳಾಡಿದ.

ಜಗದ್ಗುರು ಸಾವಧಾನದಿಂಟ ಅವನಿಗೆ ಅರ್ಥವಾಗುವಂತೆ ಹೇಳಿದರು “ನೋಡು ಮಗೂ, ನೀನು ನನ್ನ ಮಾತನ್ನು ನಂಬಿ ಕುಳಿತೆ. ಶ್ರದ್ಧೆಯಿಂದ ಓದುವ ಪ್ರಯತ್ನವನ್ನು ಮಾಡಲಿಲ್ಲ. ಬರೀ ಮಂತ್ರಕ್ಕೆ ಮರದ ಮೇಲಿನ ಮಾವಿನ ಕಾಯಿ ಕೆಳಕ್ಕೆ ಬೀಳುವುದಿಲ್ಲ. ಪ್ರಯತ್ನವಿಲ್ಲದೆ ಎಂದೂ ಫ‌ಲ ದೊರೆಯದು. ನಿನ್ನ ಸ್ನೇಹಿತ ಸುರೇಶ ನನ್ನ ಮಾತನ್ನು ಲೆಕ್ಕಿಸದೆ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟ. ಕಷ್ಟಪಟ್ಟು ಓದಿದ. ಅದರ ಫ‌ಲ ಅವನಿಗೆ ಸಿಕ್ಕಿತು’.

Advertisement

ಮಹೇಶನಿಗೆ ತನ್ನ ತಪ್ಪಿನ ಅರಿವಾಗಿತ್ತು. ದೇವರೇ ನಮ್ಮ ಪರವಾಗಿದ್ದರೂ ಸ್ವಂತ ಪ್ರಯತ್ನವಿಲ್ಲದೆ ಫ‌ಲ ಸಿಗದು ಎಂಬ ಸತ್ಯ ಅವನಿಗೆ ಅರಿವಾಗಿತ್ತು. ಮುಂದೆಂದೂ ಹೀಗಾಗದಂತೆ ಎಚ್ಚರವಹಿಸುತ್ತೇನೆಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದ.

– ಬನ್ನೂರು ಕೆ. ರಾಜು

Advertisement

Udayavani is now on Telegram. Click here to join our channel and stay updated with the latest news.

Next