ಈ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕುವುದು ತುಂಬಾ ಸುಲಭ ಎಂದುಕೊಂಡರೆ ಅದು ತಪ್ಪಾಗುತ್ತದೆ . ನೆಮ್ಮದಿಯ ಬದುಕಿಗೆ ಹಲವು ತೊಂದರೆ ತಾಪತ್ರಯಗಳನ್ನು ಎದುರಿಸ ಬೇಕಾಗುತ್ತದೆ. ಹಲವರ ಸ್ವಾರ್ಥಕ್ಕೆ ಬಲಿಯಾಗ ಬೇಕಾಗುತ್ತದೆ. ಎಲ್ಲವನ್ನು ಎದುರಿಸಲು ಜಾಣತನ ಅತೀ ಮುಖ್ಯ.
ಒಂದು ಕಾಡು. ಆ ಕಾಡಿನಲ್ಲಿ ಒಂದು ಪಕ್ಷಿ ವಾಸವಾಗಿತ್ತು. ಅದೇ ಕಾಡಿನ ಒಂದು ಮರದ ಮೇಲೆ ಗೂಡು ಕಟ್ಟಿ, ಮೊಟ್ಟೆಗಳನ್ನು ಇಟ್ಟಿತ್ತು. ಅದೇ ಮರದ ಕೆಳಗೆ ಒಂದು ಹಾವು ವಾಸವಾಗಿತ್ತು. ಸುತ್ತಮುತ್ತಲಿನ ಪಕ್ಷಿಗಳಿಗೆ ಹಾವಿನ ಕಾಟ ವಿಪರೀತವಾಗಿತ್ತು. ಪಕ್ಷಿಗಳ ಗೂಡಿಗೆ ನುಗ್ಗಿ , ಗೂಡಲ್ಲಿರುವ ಮೊಟ್ಟೆಗಳನ್ನು ನುಂಗಿ ಹಾಕುತ್ತಿತ್ತು. ಪಕ್ಷಿಗಳಿಗೆ ಹಾವಿನ ಮೇಲೆ ಸಿಟ್ಟು, ಅಸಹನೆ ಇದ್ದರೂ ಅದಕ್ಕೆ ಬುದ್ಧಿ ಕಲಿಸುವ ಗೋಜಿಗೆ ಹೋಗಿರಲಿಲ್ಲ . ಒಮ್ಮೆ ಅದೇ ಮರದ ಪಕ್ಷಿಯ ಗೂಡಿಗೆ ನುಗ್ಗಿ ಮೊಟ್ಟೆಗಳನ್ನು ತಿಂದು ಹಾಕಿತು. ಪಕ್ಷಿಗೆ ವಿಪರೀತ ದುಃಖವಾಯಿತು . ಹಾವಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಬೇಕು ಎಂದು ತೀರ್ಮಾನಿಸಿತು.
ಒಮ್ಮೆ ಮರದ ಪಕ್ಕದ ನದಿಯಲ್ಲಿ ಸ್ನಾನ ಮಾಡುತ್ತಿದ್ದ ರಾಣಿಯ ಬಂಗಾರವನ್ನು ಪಕ್ಷಿಯೂ ತಂದು ಹಾವು ಇದ್ದ ಹುತ್ತದ ಒಳಗೆ ಹಾಕಿತು. ರಾಜಭಟರು ಹುತ್ತವನ್ನು ಹೊಡೆದು ಹಾಕಿ ಹಾವನ್ನು ಸಾಯಿಸಿ ಬಂಗಾರದ ಸರವನ್ನು ತೆಗೆದುಕೊಂಡು ಹೋಗಿ ರಾಣಿಗೆ ಕೊಟ್ಟರು. ಹೀಗೆ ಪಕ್ಷಿ ಉಪಾಯದಿಂದ ತನ್ನ ಸೇಡನ್ನು ತೀರಿಸಿಕೊಂಡಿತು.
ಇನ್ನಿತರ ಪಕ್ಷಿಗಳು ನಿಟ್ಟುಸಿರು ಬಿಟ್ಟವು. ಇದರಂತೆ ಭೂಮಿಯ ಮೇಲೆ ಸ್ವಾರ್ಥಕ್ಕಾಗಿ ಹಲವರಿಗೆ ತೊಂದರೆ ಕೊಡುವುದು ಕೆಲವರಿಗೆ ತಮಾಷೆಯಾಗಿ ಕಂಡುಬರುತ್ತದೆ. ಶಕ್ತಿಯನ್ನು ಉಪಯೋಗಿಸಿ ಇವರಿಗೆ ಬುದ್ಧಿ ಕಲಿಸಲು ಸಾಧ್ಯವಿಲ್ಲ. ಹಣಬಲ ಅಥವಾ ತೋಳುಬಲದಿಂದ ಸಮಾಜದಲ್ಲಿ ಮೆರೆಯುತ್ತಿರುತ್ತಾರೆ. ಇಂಥವರಿಗೆ ಉಪಾಯದಿಂದಲೇ ಬುದ್ಧಿ ಕಲಿಸುವುದು ಸೂಕ್ತ. ಶಾಂತಿ ನೆಮ್ಮದಿಯಿಂದ ಬದುಕುವುದು ಎಲ್ಲರ ಆಶಯ ಅಲ್ಲವೇ.
-ವೆಂಕಟೇಶ ಚಾಗಿ,
ಕುಷ್ಟಗಿ