ಕೋಲಾರ: ರಸ್ತೆ ಅಭಿವೃದ್ಧಿ ಕಾಮಗಾರಿ ಗುಣಮಟ್ಟ ನಿರ್ವಹಣೆಯಲ್ಲಿ ರಾಜಿಯಿಲ್ಲ, ಗುತ್ತಿಗೆದಾರರು ಎಚ್ಚರಿಕೆಯಿಂದ ಕೆಲಸ ಮಾಡಿ, ತಪ್ಪಿದರೆ ತೊಂದರೆಗೆ ಸಿಲುಕುತ್ತೀರಿ ಎಂದು ಶಾಸಕ ಕೆ.ಶ್ರೀನಿವಾಸಗೌಡ ಎಚ್ಚರಿಕೆ ನೀಡಿದರು. ಭಾನುವಾರ ತಾಲೂಕಿನ ಕ್ಯಾಲನೂರು,ತಿಪ್ಪೇನಹಳ್ಳಿ, ಕರೇನಹಳ್ಳಿ, ಅಮ್ಮನಲ್ಲೂರು ಗ್ರಾಮಗಳಲ್ಲಿ ಸುಮಾರು 1 ಕೋಟಿ ರೂ., ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕಾಮಗಾರಿಗಳು: ಅಮ್ಮನಲ್ಲೂರು ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಾಲಯದಿಂದ ಬಸ್‌ನಿಲ್ದಾಣದವರೆಗೂ ರಸ್ತೆ ದುರಸ್ಥಿಗೆ 5 ಲಕ್ಷ ರೂ, ಕ್ಯಾಲನೂರಿನಿಂದ ಚಿಕ್ಕಬಳ್ಳಾಪುರ ರಸ್ತೆವರೆಗೂ 50 ಲಕ್ಷ ರೂ, ತಿಪ್ಪೇನಹಳ್ಳಿ-ಸೀತಿ ರಸ್ತೆಗೆ ಸುಮಾರು 30 ಲಕ್ಷರೂ. ಸೇರಿ ಸುಮಾರು 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಹಣ ಪೋಲಾಗದಿರಲಿ: ಸರ್ಕಾರದ ಹಣ ಪೋಲಾಗಬಾರದು. ಗುತ್ತಿಗೆದಾರರು ತಪ್ಪು ಮಾಡಿದರೆ ನೋಡಿಕೊಂಡು ಸುಮ್ಮನಿರುವುದು ಉತ್ತಮ ಲಕ್ಷಣವಲ್ಲ,ತನ್ನ ಗಮನಕ್ಕೆ ತನ್ನಿ ಎಂದು ತಾಕೀತು ಮಾಡಿದರು. ಇದು ಹಿಂದೆ ದಿವಂಗತ ಸಿ.ಬೈರೇಗೌಡರ ಕ್ಷೇತ್ರ. ಇಲ್ಲಿ ಭ್ರಷ್ಟತೆಗೆ ಅವಕಾಶವಿಲ್ಲ, ಕಾಮಗಾರಿ ಗುಣಮಟ್ಟವನ್ನು ಸ್ವತಃ ಬೈರೇಗೌಡರೇ ನೋಡಿ ತಪ್ಪಾಗಿದ್ದರೆ ಕ್ರಮ ಕೈಗೊಂಡ ನಿದರ್ಶನಗಳಿವೆ ಎಂದರು.
ಆಕ್ರೋಶ: ಕೆಲವು ಮಹಾನುಭಾವರು ಕ್ಷೇತ್ರಕ್ಕೆ ಬಂದು ಇಲ್ಲಿನ ವಾತಾವರಣವನ್ನೇ ಹಾಳು ಮಾಡಿಬಿಟ್ಟರು. ಹಣವಿಲ್ಲದೇ ಚುನಾವಣೆಯೇ ಸಾಧ್ಯವಿಲ್ಲ ಎಂಬ ವಾತಾವರಣ ಸೃಷ್ಟಿಸಿದರು ಎಂದು ಟೀಕಿಸಿದರು. ಕ್ಯಾಲನೂರು, ತಿಪ್ಪೇನಹಳ್ಳಿ, ಅಮ್ಮನಲ್ಲೂರಿನ ಜನತೆ ಚುನಾವಣೆಯಲ್ಲಿ ತನ್ನ ಕೈಹಿಡಿದಿದ್ದಾರೆ, ಅವರ ಋಣ ತೀರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಸಿಗುವ ಯಾವುದೇ ಯೋಜನೆಯಾದರೂ ಇಲ್ಲಿಗೆ ಮಂಜೂರು ಮಾಡಿಸುತ್ತೇನೆಂದು ತಿಳಿಸಿದರು.
ಬೈರೇಗೌಡರ ಹೆಸರಿಗೆ ಕಳಂಕ ಬೇಡ: ಶಾಸಕರ ನಿಧಿಯ ಹಣದ ಜತೆಗೆ ಸರ್ಕಾರದಿಂದಲೇ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುವುದಾಗಿ ತಿಳಿಸಿದ ಅವರು, ಕ್ಷೇತ್ರದ ಜನತೆ ಮತ ಮಾರಿಕೊಳ್ಳದೇ ಕೆಲಸ ಮಾಡುವವರಿಗೆ ಮತ ನೀಡುವ ಗುಣ ಬೆಳೆಸಿಕೊಳ್ಳಬೇಕು, ಬೈರೇಗೌಡರ ಹೆಸರಿಗೆ ಕಳಂಕ ತರಬಾರದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ನಾಚಹಳ್ಳಿ ಚೌಡರೆಡ್ಡಿ, ಗ್ರಾಪಂ ಉಪಾಧ್ಯಕ್ಷ ಪಾಪಣ್ಣ, ಸದಸ್ಯ ವೀರಪ್ಪರೆಡ್ಡಿ, ಗುತ್ತಿಗೆದಾರ ಸಿ.ನಾರಾಯಣಸ್ವಾಮಿ, ಮಡಿವಾಳ ಗೋಪಾಲಪ್ಪ, ಕಾಮಂಡಹಳ್ಳಿ ಸುರೇಶ್, ಕಡಗಟ್ಟೂರು ಎಸ್‌ಎಫ್‌ಸಿಎಸ್ ನಿರ್ದೇಶಕ ಮುನಿರಾಜು, ಚನ್ನಸಂದ್ರ ವೆಂಕಟೇಶ್ ಇದ್ದರು.