Advertisement
ಈ ಕಾರಣದಿಂದಲೇ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳಾದರೂ ಆಯೋಗದ ಅಧ್ಯಕ್ಷರು, ಸದಸ್ಯರ ನೇಮಕವಾಗಿಲ್ಲ. ಸಾವಿರಾರು ಮಂದಿ ಅಮಾಯಕರಿಗೆ ನ್ಯಾಯ ಕೊಡಿಸುವ ಆಯೋಗದ ಕಾರ್ಯನಿರ್ವಹಣೆಗೂ ವಿಪಕ್ಷ ನಾಯಕನ ಅನುಪಸ್ಥಿತಿ ಕಾಡುತ್ತಿದೆ.
Related Articles
ಅಕ್ರಮ ಬಂಧನ, ಬಾಲಕಾರ್ಮಿಕರು, ಅಪಹರಣ, ಲಾಕಪ್ ಡೆತ್, ದೌರ್ಜನ್ಯ ಸೇರಿ 2022ರಲ್ಲಿ ಆಯೋಗಕ್ಕೆ 15 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ. ಈ ಪೈಕಿ 10 ಸಾವಿರ ಪ್ರಕರಣಗಳು ಇತ್ಯರ್ಥವಾಗಿದ್ದು, 5 ಸಾವಿರಕ್ಕೂ ಹೆಚ್ಚು ಬಾಕಿ ಇವೆ. ಈ ಮಧ್ಯೆ ಆಯೋಗದ ಸದಸ್ಯರು ನಿವೃತ್ತಿಗೊಂಡ ಬಳಿಕ 4 ಸಾವಿರ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಪೊಲೀಸರ ವಿರುದ್ಧವೇ ಹೆಚ್ಚಿನ ಪ್ರಮಾಣದಲ್ಲಿ ದೂರುಗಳು ಬಂದಿವೆ. ಆಯೋಗದಲ್ಲಿರುವ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ದೂರುಗಳನ್ನು ಸ್ವೀಕರಿಸಿ ತನಿಖೆ ಪೂರ್ಣಗೊಳಿಸಿ ವರದಿ ಸಿದ್ಧಪಡಿಸಿ ಕೈತೊಳೆದುಕೊಂಡಿದ್ದಾರೆ.
Advertisement
ಮಾನವ ಹಕ್ಕುಗಳ ಕಾಯ್ದೆ ಪ್ರಕಾರ ಆಯೋಗದ ಮುಖ್ಯಸ್ಥರು ಸೇರಿ ಐವರು ಸದಸ್ಯರನ್ನು ನೇಮಿಸಬೇಕು. ಅಧ್ಯಕ್ಷರಾಗಿ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಅಥವಾ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು, ಸದಸ್ಯರಾಗಿ ಹೈಕೋರ್ಟ್ ನ್ಯಾಯಮೂರ್ತಿಗಳು, ಕೆಳ ಹಂತದ ನ್ಯಾಯಾಧೀಶರು ಮತ್ತು ಇತರ ಇಬ್ಬರು ಸದಸ್ಯರು ಮಾನವ ಹಕ್ಕುಗಳ ಆಯ್ಕೆ ಬಗ್ಗೆ ಹೆಚ್ಚಿನ ಜ್ಞಾನವುಳ್ಳ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಈ ಸದಸ್ಯರ ಅಧಿಕಾರಾವಧಿ 3ರಿಂದ 5 ವರ್ಷಗಳು.
ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಅಧ್ಯಕ್ಷರು ಸೇರಿ ಮೂವರು ಸದಸ್ಯರಿದ್ದರು. ಈ ಪೈಕಿ ಫೆ. 17ರಂದು ನಿವೃತ್ತ ನ್ಯಾಯಮೂರ್ತಿ ಕೆ.ಬಿ. ಚಂಗಪ್ಪ, ಫೆ. 24ರಂದು ನಿವೃತ್ತ ಐಪಿಎಸ್ ಅಧಿಕಾರಿ ಆರ್.ಕೆ.ದತ್ತಾ ಹಾಗೂ ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾ| ಡಿ.ಎಚ್. ವಘೇಲಾ ಅವರು ಮಾ. 10ರಂದು ನಿವೃತ್ತಿಯಾಗಿದ್ದಾರೆ.
ವಿಪಕ್ಷ ನಾಯಕನಿಲ್ಲದ ಸಮಿತಿಆಯೋಗದ ಸದಸ್ಯರ ಆಯ್ಕೆ ಸಮಿತಿಯಲ್ಲಿ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ವಿಧಾನ ಪರಿಷತ್ ಸಭಾಪತಿ, ವಿಪಕ್ಷ ನಾಯಕರು ಹಾಗೂ ಗೃಹ ಸಚಿವರು ಇರುತ್ತಾರೆ. ನಿಯಮ ಪ್ರಕಾರ ಈ ಸಮಿತಿ ಆಯೋಗದ ಅಧ್ಯಕ್ಷರು ಅಥವಾ ಸದಸ್ಯರ ನಿವೃತ್ತಿಯ 2ರಿಂದ 3 ತಿಂಗಳು ಮೊದಲೇ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು. ಅನಂತರ ಆ ಆಯ್ಕೆಗೆ ಸಂಪುಟದ ಒಪ್ಪಿಗೆ ಪಡೆಯಬೇಕು. ಬಳಿಕ ರಾಜ್ಯಪಾಲರು ಅಂಗೀಕರಿಸಬೇಕು. ಆದರೆ ಆಯ್ಕೆ ಸಮಿತಿಯಲ್ಲಿ ವಿಪಕ್ಷದ ನಾಯಕರೇ ಇಲ್ಲ. ಒಂದು ವೇಳೆ ಕಾನೂನು ಸಲಹೆ ಪಡೆದುಕೊಂಡು ಆಯ್ಕೆ ಪ್ರಕ್ರಿಯೆ ಆರಂಭಿಸಿದರೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಗೊಂದಲದಲ್ಲಿ ಸರಕಾರ ಇದೆ ಎಂದು ಮೂಲಗಳು ತಿಳಿಸಿವೆ. ವಿಪಕ್ಷದ ನಾಯಕರಿಲ್ಲದ ಆಯ್ಕೆ ಸಮಿತಿಯಿಂದ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನು ನೇಮಿಸಲು ಸಾಧ್ಯವಿಲ್ಲ. ಸಿಎಂ, ಉಭಯ ಸದನಗಳ ಅಧ್ಯಕ್ಷರು, ಗೃಹ ಸಚಿವರು ಹಾಗೂ ವಿಪಕ್ಷ ನಾಯಕ ಆಯ್ಕೆ ಸಮಿತಿಯಲ್ಲಿ ಇರಲೇಬೇಕು ಎಂದು ಮಾನವ ಹಕ್ಕುಗಳ ರಕ್ಷಣ ಕಾಯ್ದೆ ಹೇಳುತ್ತದೆ.
– ಎಸ್. ಉಮಾಪತಿ, ವಕೀಲರು -ಮೋಹನ ಭದ್ರಾವತಿ