ಬೆಂಗಳೂರು: ಹಿಂದೂ ಆಧ್ಯಾತ್ಮಿಕತೆಗೂ ಸೂಫಿ ಚಿಂತನೆಗೂ ಹತ್ತಿರದ ನಂಟಿದೆ ಎಂದು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು. ಅಂಕಿತ ಪ್ರಕಾಶನ ಶನಿವಾರ ಬಸವನಗುಡಿಯ ವಾಡಿಯಾ ಸಭಾಂಗಣದಲ್ಲಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದೂ ಆಧ್ಯಾತ್ಮಿಕ ಚಿಂತನೆಗಳು ಮತ್ತು ಸೂಫಿ ಸಂತರ ಚಿಂತನೆಗಳು ಸಂವಾದಿಯಾಗಿವೆ. ಪೂರ್ವಾಗ್ರಹ ಪೀಡಿತರಾಗದೆ ಅಧ್ಯಯನದಲ್ಲಿ ತೊಡಗಿದರೆ, ಎಲ್ಲ ಧರ್ಮಗಳು ಪರಸ್ಪರ ಸಂವಾದ ನಡೆಸಿರುವುದನ್ನು ನಾವು ಕಾಣಬಹುದಾಗಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟಾಡಿ ಮಾತನಾಡಿ, ಗ್ರಂಥಗಳನ್ನು ಓದುವುದರಿಂದ ಸೂಫಿ ಸಂತರಿಗೆ ಜ್ಞಾನ ಬಂದಿಲ್ಲ. ಅವರು ಸದಾ ಪ್ರಯಾಣದಲ್ಲಿದ್ದು, ಜನರ ಸಂಪರ್ಕದಲ್ಲಿ ನಡೆಸಿದ ಮಾತುಕತೆಯ ಅನುಭವದ ಜ್ಞಾನ ಪಡೆದಿದ್ದರು ಎಂದು ಹೇಳಿದರು.
ಸೂಫಿ ಸಂತರು ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುತ್ತಿದ್ದರು. ಹೀಗಾಗಿ ಸೂಫಿ ಚಿಂತನೆಯು ಖುರಾನ್, ಬೈಬಲ್, ವೇದಗಳನ್ನು ಒಳಗೊಂಡಂತೆ ಆಯಾ ಪ್ರದೇಶಗಳ ಆಧ್ಯಾತ್ಮಿಕತೆಯನ್ನು ತನ್ನದಾಗಿಸಿಕೊಂಡು ವಿಶಿಷ್ಟವಾದ ರೀತಿಯಲ್ಲಿ ಹಾಗೂ ಸರಳವಾಗಿ ಆಧ್ಯಾತ್ಮಿಕ ಚಿಂತನೆಯನ್ನು ಪ್ರಸಾರ ಮಾಡುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಲೇಖಕಿ ವಿನಯಾ ಒಕ್ಕುಂದ ಮಾತನಾಡಿ, ಕವಯತ್ರಿ ಪ್ರತಿಭಾ ನಂದಕುಮಾರ್ ನಾಲ್ಕು ದಶಕಗಳಲ್ಲಿ ಬರೆದಿರುವ ಕಾವ್ಯವು, ಕೇವಲ ಸಾಹಿತ್ಯಕ್ಕೆ ಸೀಮಿತವಾಗದೆ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಿಷಯಗಳನ್ನು ಕಾವ್ಯ ರೂಪಕ್ಕೆ ಇಳಿಸಿದ್ದಾರೆ. ವರ್ತಮಾನದ ತಲ್ಲಣಗಳನ್ನು ಕಾವ್ಯದ ಮೂಲಕ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿ ದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಫಕೀರ್ ಮುಹಮ್ಮದ್ ಕಟ್ಟಾಡಿ ಅವರು ರಚಿಸಿದ “ಸೂಫಿ ಅಧ್ಯಾತ್ಮ ಚಿಂತನೆಗಳು’, ಚ.ಹ. ರಘುನಾಥ ಅವರ “ಜಾಮೂನು ಪದ್ಯಗಳು’ ಮಕ್ಕಳ ಕವನ, ಪ್ರತಿಭಾ ನಂದಕುಮಾರ್ ಅವರ “ಕೌಬಾಯ್ಸ ಮತ್ತು ಕಾಮ ಪುರಾಣ’ “ಪ್ರತಿಭಾ ಕಾವ್ಯ’ ಕವಿತೆಗಳು ಹಾಗೂ “ಕಾಗದದ ಸಾಕ್ಷಿ’ ವಿಡಿಯೋ ಆಲ್ಬಂ ಅನ್ನು ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಬಿಡುಗಡೆಗೊಳಿಸಿದರು. ಪತ್ರಕರ್ತ ಎನ್.ಎ.ಎಂ.ಇಸ್ಮಾಯಿಲ್, ಪ್ರತಿಭಾ ನಂದಕುಮಾರ್, ಸೇರಿದಂತೆ ಹಲವರು ಉಪಸ್ಥಿತಿದ್ದರು.