Advertisement
ಯಾರೇ ನಮ್ಮ ಜೀವನದಲ್ಲಿ ಬಂದು ಹೋದರೂ ಕೊನೆಗೆ ನೋವಾಗುವುದು ಮನಸ್ಸಿಗೆ. ದೇಹಕ್ಕಾದ ಪೆಟ್ಟು ವಾಸಿ ಮಾಡಿಕೊಳ್ಳಬಹುದು, ಆದರೆ ಮನಸ್ಸಿಗಾದ ಗಾಯಗಳನ್ನು ಹೇಗೆ ವಾಸಿ ಮಾಡಿಕೊಳ್ಳುವುದು? ನಮ್ಮ ಮನಸ್ಸಿಗೆ ಗಾಯ ಮಾಡಿದವರನ್ನು ನಾವು ಮರೆತಿದ್ದೇವೆ ಎಂದು ಹೊರಗಿನಿಂದ ತೋರ್ಪಡಿಸಿಕೊಂಡರೂ ಒಳಗಿನ ನೋವು ಇದ್ದೇ ಇರುತ್ತದೆ. ಕಾಲಾಯ ತಸೆ¾„ ನಮಃ, ಕಾಲವೇ ಎಲ್ಲವನ್ನೂ ಕಲಿಸುತ್ತದೆ. ಮರೆಸುತ್ತದೆ ಎಂದು ಧೈರ್ಯಮಾಡಿ ಮುಂದೆ ಸಾಗುತ್ತೇವೆ. ಅದು ನಿಜವೇ. ಕಾಲ ಜೀವನದ ಪಾಠ ಕಲಿಸುತ್ತದೆ, ಆದರೆ ಮನಸ್ಸಿನೊಳಗೆ ಅಡಗಿರುವ ನೋವು ಕಾಲದ ಜೊತೆ ಸಾಯುವುದಿಲ್ಲ. ಅದು ಸಾಯುವುದು ನಾವು ಸತ್ತಾಗಲೇ. ನಾವು ನೋವನ್ನು ಎಷ್ಟೇ ಮರೆತಿದ್ದೇವೆಂದು ಸುಮ್ಮನಿದ್ದರೂ ಒಂದಲ್ಲಾ ಒಂದು ದಿನ ಮನಸ್ಸಿನೊಳಗೆ ತೊಳಲಾಟವನ್ನುಂಟು ಮಾಡುತ್ತದೆ. ಇಷ್ಟು ಹಿಂಸೆ ಕೊಡುವ ನೋವುಗಳಿಗೆ ಉತ್ತರವೇ ಇಲ್ಲವೇ ಅಂತ ಯೋಚಿಸಿದರೆ ಕೆಲವು ನೋವುಗಳಿಗೆ ಉತ್ತರ ಸಿಗುವುದು ಕಷ್ಟವೇ.
Related Articles
Advertisement
ಕೆಲವರು ಕಡು ಬಡತನದಿಂದಾಗಿ ಮಾನಸಿಕ ಖನ್ನತೆಗೊಳಗಾಗುತ್ತಾರೆ. ಇನ್ನು ಕೆಲವರು ರೂಪ, ವಿದ್ಯೆ, ಹಣ ಎಲ್ಲವೂ ಇದ್ದರೂ ಜನರಿಂದ ಮೋಸ ಹೋಗಿ ಅಥವಾ ನಂಬಬಾರದವರ ಮಾತಿಗೆ ಬೆಲೆ ಕೊಟ್ಟು ಮಾನಸಿಕ ರೋಗಕ್ಕೊಳಗಾಗುತ್ತಾರೆ. ಮನಸ್ಸಿನ ನೋವನ್ನು ಮರೆಸಲು ಎಷ್ಟೇ ಸಿನಿಮಾ ತೋರಿಸಿದರೂ, ಬೇರೆ ಬೇರೆ ದೇಶಗಳನ್ನು ಸುತ್ತಿಸಿದರೂ, ಕಲರ್‌ಫುಲ್ ಪಾರ್ಟಿಗಳಿಗೆ ಕರೆದುಕೊಂಡು ಹೋದರೂ ಮನಸ್ಸು ತನಗಾದ ನೋವನ್ನು ಕಿಂಚಿತ್ತೂ ಮರೆಯುವುದಿಲ್ಲ. ಮೆದುಳಿನ ಶಾಶ್ವತ ನೆನಪುಗಳ ಕಂಪಾರ್ಟ್‌ಮೆಂಟಿನಲ್ಲಿ ಅದು ಅಚ್ಚಳಿಯದೆ ಉಳಿದುಬಿಡುತ್ತದೆ. ಆಗಾಗ ಅದನ್ನು ನೆನಪಿಸಿಕೊಂಡು ಮೆಲುಕು ಹಾಕಿ ಒಳಗೊಳಗೇ ಕೊರಗುತ್ತೇವೆ. ಇದೆಲ್ಲಾ ನಮಗೆ ಸಹಾಯ ಮಾಡುತ್ತವೆ ನಿಜ. ಆದರೂ ನಮ್ಮ ಮನಸ್ಸಿನಲ್ಲಿರುವ ನೋವು ಜಿಡ್ಡಿನಂತೆ ಅಂಟಿಕೊಂಡಿರುತ್ತದೆ. ಯಾವ ಸೋಪು ಹಾಕಿ ತೊಳೆದುಕೊಂಡರೂ ಮನಸ್ಸಿನ ಕೊರಗು ಯಾಕೆ ಮಾಯವಾಗುತ್ತಿಲ್ಲ ಎಂಬುದು ಮಾನಸಿಕ ತೊಳಲಾಟದಲ್ಲಿರುವವರ ಪ್ರಶ್ನೆ! ಯಾಕೋ ಏನೂ ಸರಿಹೋಗ್ತಿಲ್ಲ… ಇವತ್ತು ಸರಿಹೋದ್ರೂ ನಾಳೆ ಮತ್ತೆ ನೆನಪಾಗತ್ತೆ, ನಾಳೆ ಹೇಗೆ ಬದುಕೋದು? ಯಾವ ಡಾಕ್ಟರೂ ನನ್ನ ಮನಸ್ಸನ್ನು ಸರಿ ಮಾಡುವುದಿಲ್ಲ ಎನ್ನುವುದು ಅವರ ನೋವು. ಪ್ರೀತಿಯಲ್ಲಿ ಬಿದ್ದಾಗ ಮಾತ್ರ ಮನಸ್ಸಿಗೆ ನೋವಾಗುತ್ತದೆ ಅಂತೇನಿಲ್ಲ. ಕೆಲವು ಸಲ ಮನೆಯಲ್ಲಿ ನಡೆಯುವ ಜಗಳಗಳು, ತಂದೆ, ತಾಯಿ, ಮಕ್ಕಳ ಮನಸ್ತಾಪಗಳು, ಅಣ್ಣ, ತಮ್ಮ, ಅಕ್ಕ, ತಂಗಿ, ಸಂಬಂಧಿಕರು ಇವರನ್ನೆಲ್ಲ ಹೊರತುಪಡಿಸಿ ಬೀದಿಯಲ್ಲಿ ನಡೆಯುವ ಜಗಳಗಳು, ಅಪವಾದಗಳು, ಅವಮಾನಗಳು ಹೀಗೆ ಯಾವ ಸನ್ನಿವೇಶ ಬೇಕಾದರೂ ನಮ್ಮ ಮನಸ್ಸನ್ನು ನೋವು ಮಾಡಬಹುದು. ನಮ್ಮ ಸ್ನೇಹಿತರೇ ನಮ್ಮನ್ನು ಖನ್ನತೆಗೆ ತಳ್ಳಬಹುದು. ನಮ್ಮ ಮನಸ್ಸು ಯಾವುದರಿಂದ ಯಾವಾಗ ನೋವಿನಲ್ಲಿ ಸಿಲುಕಿ ಒದ್ದಾಡುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ನಾವು ತುಂಬಾ ಗಟ್ಟಿ ಮನಸ್ಸಿನವರು ಅಂತ ನಮಗೆ ನಾವೇ ಅಂದೊRಂಡಿರುತ್ತೇವೆ, ಆದರೆ ನೋವಾದಾಗಲೇ ನಮ್ಮ ಮಾನಸಿಕ ಸಾಮರ್ಥ್ಯ ನಮಗೆ ಅರ್ಥವಾಗುವುದು.
ಇದಕ್ಕೇನು ಪರಿಹಾರ?ನಮ್ಮ ಮನಸ್ಸಿನ ನೋವಿಗೆ ನಾವೇ ಮುಲಾಮು ಹಂಚ್ಚಿಕೊಳ್ಳಬೇಕು. ಅದು ಯಾರ ಮಾತನ್ನೂ ಕೇಳುವುದಿಲ್ಲ. ಕಿವಿಕೊಟ್ಟರೂ ಸಹ ಕೊನೆಗೆ ನಾನು ಅಂದಿಕೊಂಡಿದ್ದೇ ಸರಿ ಎಂದು ವಾದಿಸುತ್ತದೆ. ವಾಸ್ತವವಾಗಿ ಅದೇ ಸರಿ. ಆದರೆ, ಅದು ನೆಗೆಟಿವ್ ನಿರ್ಧಾರವಾಗಿದ್ದರೆ ಖಂಡಿತ ತಪ್ಪು! ಪಾಸಿಟಿವ್ ನಿರ್ಧಾರವಾಗಿದ್ದರೆ ಖಂಡಿತ ಸರಿ. ಹೀಗೊಂದು ನಿರ್ಧಾರವನ್ನು ನಮ್ಮೊಳಗೆ ನಾವೇ ಗಟ್ಟಿಮಾಡಿಕೊಂಡರೆ ಎಂಥ ನೋವನ್ನೂ ಮೆಟ್ಟಿ ನಿಲ್ಲಬಹುದು. ಇದೇ ಬದುಕುವ ಕಲೆ ಚೆನ್ನಾಗಿ ಬದುಕುವುದು ಹೇಗೆಂದು ಮ್ಯಾನೇಜ್‌ಮೆಂಟ್ ತಜ್ಞರು ಹೇಳಿಕೊಡಬಹುದು, ಆದರೆ ಎಲ್ಲರಂತೆ ಹೇಗೆ ಬದುಕಬೇಕು ಎಂಬುದನ್ನು ನಾವೇ ಕಂಡುಕೊಳ್ಳಬೇಕು. ಎಷ್ಟೇ ನೋವಾದರೂ ಇದು ನನ್ನ ಬದುಕಿಗಿಂತ ದೊಡ್ಡದಲ್ಲ, ನಾನು ಬದುಕಬೇಕು, ನನಗೆ ನೋವು ಕೊಟ್ಟವರಿಗೆ ಬದುಕಿ ತೋರಿಸಬೇಕು ಎಂಬ ನಿರ್ಧಾರವಷ್ಟೇ ನಮ್ಮ ಕೈಹಿಡಿದು ಕೊನೆಯತನಕ ಮುನ್ನಡೆಸಬಲ್ಲದು.