Advertisement

ಸದ್ಯಕ್ಕೆ ಪ್ರಯಾಣ ದರ ಏರಿಕೆ ಇಲ್ಲ

11:57 AM Jul 06, 2018 | Team Udayavani |

ಬೆಂಗಳೂರು: ಡೀಸೆಲ್‌ ಮೇಲಿನ ಸೆಸ್‌ ಹೆಚ್ಚಳ ಮಾಡಿದ್ದರೂ ಸದ್ಯಕ್ಕೆ ಪ್ರಯಾಣ ದರ ಏರಿಕೆ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಡೀಸೆಲ್‌ ಮೇಲಿನ ಸೆಸ್‌  ಹೆಚ್ಚಿಸಿದ್ದರಿಂದ ಸಾರಿಗೆ ನಿಗಮಗಳ ಮೇಲೆ ಹೊರೆ ಆಗುತ್ತದೆ. ಆದರೆ, ಈ ಕಾರಣಕ್ಕಾಗಿ ಸದ್ಯಕ್ಕೆ ದರ ಏರಿಕೆ ಮಾಡುವುದಿಲ್ಲ. ಈ ಹೊರೆಯನ್ನು ನಿಗಮಗಳು ಸಮರ್ಪಕವಾಗಿ ನಿಭಾಯಿಸಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

Advertisement

ನಾಲ್ಕು ನಿಗಮಗಳಿಂದ ಸುಮಾರು ನಾಲ್ಕುವರೆ ಸಾವಿರ ಬಸ್‌ಗಳ ಖರೀದಿಗೆ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಇದರ ಜತೆಗೆ ಬಿಎಂಟಿಸಿಗೆ 100 ಕೋಟಿ ರೂ. ಸಹಾಯಧನ ನೀಡಿದ್ದಾರೆ. ಬಜೆಟ್‌ ಪೂರ್ವ ಸಭೆಯಲ್ಲಿ ಒಂದು ಸಾವಿರ ಕೋಟಿ ರು. ಅನುದಾನಕ್ಕೆ ಬೇಡಿಕೆ ಇರಿಸಿದ್ದೆವು.

ಆದರೆ, ನಮಗೆ ಸಮಪರ್ಕವಾಗಿ ಇಲಾಖೆಗೆ ಅನುದಾನ ಸಿಕ್ಕಿಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು. ಬಜೆಟ್‌ನಲ್ಲಿ ಖಾಸಗಿ ಬಸ್‌ ಸೇವೆಗಳ ತೆರಿಗೆ ಹೆಚ್ಚಳ ಮಾಡಿದ್ದು, ಇದರಿಂದ  ಇಲಾಖೆಗೆ ವಾರ್ಷಿಕ 56 ಕೋಟಿ ರೂ. ಆದಾಯ ಬರಲಿದೆ. ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ಗಳನ್ನು ಪರಿಚಯಿಸುವ ಉದ್ದೇಶದಿಂದ ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಮುಂದಾಗಿದ್ದೇವೆ.

ನಗರದ ವಾರ್ಡ್‌ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಲಾಗುವುದು. ಸಾರಿಗೆ ಇಲಾಖೆ ಸುಧಾರಣೆಗಾಗಿ ಕೆಲ ಯೋಜನೆಗಳನ್ನು ರೂಪಿಸುವ ಸಂಬಂಧ ಶೀಘ್ರ ಸಭೆ ಕರೆದು ಚರ್ಚಿಸುವುದಾಗಿ ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next