Advertisement

ಅವಕಾಶವಿದ್ದರೂ ಶಾಶ್ವತ ಕುಡಿಯುವ ನೀರಿನ ಯೋಜನೆ ಸಿಕ್ಕಿಲ್ಲ

07:00 AM Apr 07, 2018 | Team Udayavani |

ಕಾಪು: ಪ್ರತಿ ವರ್ಷದಂತೆ ಈ ವರ್ಷವೂ ತಾಲೂಕಿನ ಮಜೂರು, ಇನ್ನಂಜೆ ಗ್ರಾ.ಪಂ. ವ್ಯಾಪ್ತಿ ಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿದೆ. ಹಲವು ಮನೆಗಳಲ್ಲಿ ಬಾವಿ ನೀರು ತಳಕ್ಕಿಳಿದಿದ್ದು. ಕೆಲವೇ ದಿನಗಳಲ್ಲಿ ಸಮಸ್ಯೆ ಬಿಗಡಾಯಿಸಲಿದೆ.

Advertisement

ಎಲ್ಲೆಲ್ಲಿ  ಸಮಸ್ಯೆ
ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯ ಪಾಂಗಾಳ, ಪಾಂಗಾಳ ಗುಡ್ಡೆ, ಗಾಂಧಿ ನಗರ, ಸರಸ್ವತಿ ನಗರ, ಸದಾಡಿ ಮತ್ತು  ಮಂಡೇಡಿ  ಪರಿಸರದಲ್ಲಿ ಪ್ರತಿ ಬೇಸಗೆಯಲ್ಲೂ ನೀರಿನ ಸಮಸ್ಯೆ ಮಾಮೂಲಿ. ಶೀಲಾಪುರದಲ್ಲಿ ಕೆಲವೊಮ್ಮೆ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮಜೂರು ಗ್ರಾ.ಪಂ. ವ್ಯಾಪ್ತಿಯ ಮಜೂರು, ಕರಂದಾಡಿ, ಪಾದೂರು, ಕೂರಾಲು ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಳೆದ ವರ್ಷ ಇನ್ನಂಜೆಯಲ್ಲಿ ಟಾಸ್ಕ್ಫೋರ್ಸ್‌ ಮೂಲಕ 4.29 ಲಕ್ಷ, ಮಜೂರಿನಲ್ಲಿ  3.22 ಲಕ್ಷ ರೂ. ಅನುದಾನ ಬಳಸಿಕೊಂಡು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗಿತ್ತು. ಇನ್ನಂಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ 2 ತೆರೆದ ಬಾವಿ, 7 ಬೋರ್‌ವೆಲ್‌ಗ‌ಳಿದ್ದು,  1197 ಕುಟುಂಬಗಳಿವೆ. ಅದರಲ್ಲಿ 310 ಮನೆಗಳಿಗೆ ವರ್ಷಪೂರ್ತಿ ಪಂಚಾಯತ್‌ ನೀರು ಪೂರೈಸುತ್ತದೆ. ಪ್ರತಿ ಬೇಸಗೆಯಲ್ಲಿ  ಹಲವು ಕಡೆ ಹೆಚ್ಚುವರಿಯಾಗಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತದೆ. 

ಈ ವರ್ಷ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ನೀರಿನ ಸೆಲೆ ಇರುವ ಸದಾಡಿಯ ಸರಕಾರಿ ಬಾವಿಯನ್ನು ಇನ್ನಷ್ಟು ಆಳಕ್ಕಿಳಿಸುವ ಯೋಜನೆ ಪಂಚಾಯತ್‌ ಹಾಕಿಕೊಂಡಿದೆ ಮತ್ತು ಟ್ಯಾಂಕರ್‌ ನೀರಿನ ಪೂರೈಕೆಗೂ ಟೆಂಡರ್‌ ಕರೆದಿದೆ. ಮಜೂರು ಗ್ರಾ.ಪಂ.ನ ಮಜೂರು, ಪಾದೂರು, ಹೇರೂರು ಗ್ರಾಮಗಳಲ್ಲಿ ಒಟ್ಟು 1353 ಮನೆಗಳಲ್ಲಿ  449 ಮನೆಗಳಿಗೆ ನೀರು ಪೂರೈಸುತ್ತಿದೆ. 1 ತೆರೆದ ಬಾವಿ 8 ಬೋರವೆಲ್‌ಗ‌ಳಿವೆ. ಕಳೆದ ವರ್ಷ ಸಮಸ್ಯೆ ಬಿಗಡಾಯಿಸಿದ್ದರಿಂದ ಕೂರಾಲಿನಲ್ಲಿ ಹೊಸ ಬೋರ್‌ವೆಲ್‌ ತೋಡಲಾಗಿದೆ. 

ಶಾಶ್ವತ ಯೋಜನೆ 
ಮಜೂರು ಮತ್ತು ಇನ್ನಂಜೆ ಗ್ರಾ.ಪಂ.ಗಳ ನಡುವೆ ಹೊಳೆ ಹರಿಯುತ್ತಿದ್ದು, ಹೊಳೆ ತೀರದ‌ ಕೃಷಿಕರಿಗೆ ಇದು ಬಹಳಷ್ಟು ಅನುಕೂಲಕರ. ಮರ್ಕೋಡಿ, ಪಂಜಿತ್ತೂರು, ಜಲಂಚಾರಿನಲ್ಲಿ ಸ್ಥಳೀಯರು ಕಟ್ಟಕಟ್ಟುತ್ತಿರುವುದರಿಂದ  ಸುತ್ತಲಿನ ಪ್ರದೇಶಗಳ ಬಾವಿಯಲ್ಲಿ ನೀರಿನ ಸೆಲೆ ವೃದ್ಧಿಯಾಗಿದೆ. ಈ ಬಗ್ಗೆ  ಸರಕಾರ ಎಚ್ಚೆತ್ತುಕೊಂಡು ನೀರು ನೇರವಾಗಿ ಸಮುದ್ರಕ್ಕೆ ಹರಿದು ಹೋಗದಂತೆ ಮತ್ತು ಹರಿಯುವ ನೀರಿನ ಸಂಗ್ರಹಿಸಿ ಕುಡಿಯುವ ನೀರಿಗೆ ಬಳಸುವ ಶಾಶ್ವತ ಯೋಜನೆಯೊಂದನ್ನು ಅನುಷ್ಠಾನಿಸುವ ಬಗ್ಗೆ ಯೋಜನೆ ರೂಪಿಸಬೇಕಿದೆ. 

Advertisement

ಬೋರ್‌ವೆಲ್‌ನಿಂದ ಬತ್ತಿದ ನೀರು
ಇಲ್ಲಿ ಸ್ಥಾಪನೆಗೊಂಡಿರುವ ಐ.ಎಸ್‌.ಪಿ.ಆರ್‌.ಎಲ್‌. ಯೋಜನೆಯಲ್ಲಿ ತಮ್ಮ ಬಳಕೆಗೆ ಯೋಜನಾ ವ್ಯಾಪ್ತಿಯೊಳಗೆ 8 ಹೊಸ ಬೋರ್‌ವೆಲ್‌ಗ‌ಳನ್ನು ತೋಡಿದ್ದರು. ಇದರಿಂದ ನೀರಿನ ಸೆಲೆ ಬತ್ತಿ ಹೋಗಿ ಗ್ರಾಮಸ್ಥರಿಗೆ ಸಮಸ್ಯೆಯಾಗಿತ್ತು. ಬಳಿಕ ಗ್ರಾಮ ಪಂಚಾಯತ್‌, ಗ್ರಾಮಸ್ಥರ ತೀವ್ರ ಒತ್ತಡದಿಂದ ಐಎಸ್‌ಪಿಆರ್‌ಎಲ್‌ ತನ್ನ ಸಿಎಸ್‌ಆರ್‌ ಅನುದಾನದಲ್ಲಿ ವಳದೂರಿನಲ್ಲಿ ಬಾವಿ ಮತ್ತು ಬೋರ್‌ವೆಲ್‌ ನಿರ್ಮಾಣ ಮಾಡಿದೆ. ಇದು 200ಕ್ಕೂ ಅಧಿಕ ಕುಟುಂಬಗಳಿಗೆ ಪೈಪ್‌ಲೈನ್‌ ಮೂಲಕ ನೀರು ಪೂರೈಕೆಗೆ ಅನುಕೂಲವಾಗಿದೆ.

ಅಗತ್ಯದ ನೀರು ಪೂರೈಕೆಗೆ ಸಿದ್ಧ 
ಕೆಲವೆಡೆ ಕಳೆದ ವರ್ಷ ಎಪ್ರಿಲ್‌ ತಿಂಗಳಿನಲ್ಲಿ ನೀರಿನ ಅಭಾವ ಕಾಣಿಸಿಕೊಂಡಿದ್ದು, ಈ ಬಾರಿ ಇಲ್ಲಿಯವರೆಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ಹೆಚ್ಚಿನ ನೀರಿನ ಸೆಲೆಯ ಪ್ರದೇಶವಾದ ಸದಾಡಿಯಲ್ಲಿ ಬಾವಿ ಕೊರೆಯುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ಆವಶ್ಯಕತೆ ಬಂದರೆ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಚಿಂತನೆ ನಡೆಸಿ ಟೆಂಡರ್‌ ಕರೆಯಲಾಗಿದೆ. 
ರಾಜೇಶ್‌ ಶೆಣೈ, ಪಿಡಿಒ, ಇನ್ನಂಜೆ ಗ್ರಾ.ಪಂ.

ನೀರಿನ ಅಭಾವ ಬಾರದಂತೆ ಎಚ್ಚರ 
ಈ ಬಾರಿ ಸಮಸ್ಯೆ ಪರಿಹಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ಕಳೆದ ವರ್ಷ ನೀರಿನ ಅಭಾವ ಇದ್ದ ಕಡೆಗಳಲ್ಲಿ ಹೊಸ ಬೋರ್‌ವೆಲ್‌ಗ‌ಳನ್ನು ತೋಡಲಾಗಿದೆ. ನೀರಿನ ಸಮಸ್ಯೆ ಕಂಡು ಬಂದರೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಚಿಂತನೆ ನಡೆಸಲಾಗಿದೆ.
ಪ್ರತಾಪ್‌ ಕುಮಾರ್‌, ಪಿಡಿಒ ಮಜೂರು ಗ್ರಾ.ಪಂ.

ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next