Advertisement

ಯಶಸ್ಸಿಗಾಗಿ ನಡೆದಿದೆ ಕಾದಾಟ

10:30 AM Dec 04, 2019 | Team Udayavani |

ಯಶವಂತಪುರ ವಿಧಾನಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೂರೂ
ಪಕ್ಷಗಳಿಂದ ಒಕ್ಕಲಿಗ ಅಭ್ಯರ್ಥಿಗಳೇ ಅಖಾಡಕ್ಕಿಳಿದಿದ್ದು, ಗೆಲುವಿಗಾಗಿ ಬೆವರು ಸುರಿಸುತ್ತಿದ್ದಾರೆ.
ಆಡಳಿತಾರೂಢ ಪಕ್ಷದಲ್ಲಿದ್ದರೂ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಸಿಗುತ್ತಿಲ್ಲ ಎಂದು ರಾಜೀನಾಮೆ ನೀಡಿ ನಂತರದ ರಾಜಕೀಯ ಬೆಳವಣಿಗೆಯಲ್ಲಿ ಮತ್ತೆ ಆಡಳಿತಾರೂಢ ಪಕ್ಷದಿಂದಲೇ ಯಶವಂತಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಎಸ್‌.ಟಿ.ಸೋಮಶೇಖರ್‌ಗೆ ಅನರ್ಹ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ನಾನು ಗೆದ್ದರೆ ಸಚಿವನಾಗಿ ಕ್ಷೇತ್ರದ ಅಭಿವೃದಿಟಛಿ ಮಾಡುತ್ತೇನೆಎನ್ನುತ್ತಿದ್ದಾರೆ.

Advertisement

ಜೆಡಿಎಸ್‌ನ ಟಿ.ಎನ್‌.ಜವರಾಯಿಗೌಡ ಅವರು ಅನುಕಂಪದ ಆಧಾರದಲ್ಲಿ ಒಂದು ಬಾರಿ ಅವಕಾಶ
ನೀಡುವಂತೆ ಮತ ಯಾಚಿಸುತ್ತಿದ್ದಾರೆ. ಪ್ರಚಾರ ಸಂದರ್ಭದಲ್ಲಿ ಕಣ್ಣೀರು ಹಾಕುತ್ತಿದ್ದಾರೆ. ಆರೂವರೆ
ವರ್ಷಗಳಿಂದ ಕಾಂಗ್ರೆಸ್‌ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಪಕ್ಷ ನಿಷ್ಠೆಯನ್ನು ಎತ್ತಿ ಹಿಡಿದು ಅನರ್ಹರಿಗೆ ಪಾಠ
ಕಲಿಸುವಂತೆ ಅಭ್ಯರ್ಥಿ ಪಿ.ನಾಗರಾಜ್‌ ಮನವಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿ- ಜೆಡಿಎಸ್‌ ನಡುವೆ
ನೇರ ಹಣಾಹಣಿ ಕಂಡು ಬರುತ್ತಿದೆ. ಎಸ್‌.ಟಿ.ಸೋಮಶೇಖರ್‌, ತಮ್ಮ ವೈಯಕ್ತಿಕ ವರ್ಚಸ್ಸು, ಜಾತಿ ಬೆಂಬಲ ಹಾಗೂ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರ ವಿಶ್ವಾಸ ಉಳಿಸಿಕೊಂಡು
ಯಶವಂತಪುರದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ವಿಧಾನಸಭಾ
ಚುನಾವಣೆಯ ಪರಾಜಿತ ಅಭ್ಯರ್ಥಿ ಜಗ್ಗೇಶ್‌ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮಾಧಾನಪಡಿಸಿದ್ದು, ಜಗ್ಗೇಶ್‌ ಪ್ರಚಾರಕ್ಕೆ ಇಳಿದಿದ್ದಾರೆ.

ಯಶವಂತಪುರ ಕ್ಷೇತ್ರವನ್ನು ಒಳಗೊಂಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿ
ರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದೆ
ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಸರದಿ ಪ್ರಚಾರ ಮುಂದುವರಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲೂ ಬೆಂಬಲ: ಕ್ಷೇತ್ರ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದಲೂ ತುಸು ಬೆಂಬಲ ಪಡೆಯುವಲ್ಲಿ ಸೋಮಶೇಖರ್‌ ಯಶಸ್ವಿಯಾದಂತಿದೆ. ಬಿಬಿಎಂಪಿಯ ಐದು ವಾರ್ಡ್‌ಗಳ ಪೈಕಿ ಮೂವರು ಕಾಂಗ್ರೆಸ್‌ ಸದಸ್ಯರು, ಇಬ್ಬರು ಬಿಜೆಪಿ ಸದಸ್ಯರಿದ್ದರು. ಸೋಮಶೇಖರ್‌ ಬೆಂಬಲಿಸಿರುವ ಕಾಂಗ್ರೆಸ್‌ ಸದಸ್ಯರಾದ ರಾಜಣ್ಣ , ಆರ್ಯ ಶ್ರೀನಿವಾಸ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ದೊಡ್ಡಬಿದರಕಲ್ಲು ವಾರ್ಡ್‌ ಸದಸ್ಯ ಕಾಂಗ್ರೆಸ್‌ನ ವಾಸುದೇವ್‌ ತಟಸ್ಥರಾಗಿ ಉಳಿದಿದ್ದಾರೆ ಎನ್ನಲಾಗಿದೆ. ಕ್ಷೇತ್ರದಲ್ಲಿ ಬೆಂಗಳೂರು ನಗರ ಜಿಲ್ಲೆಯ 10 ಜಿಲ್ಲಾ ಪಂಚಾಯ್ತಿ ಸ್ಥಾನಗಳಲ್ಲಿ ಕಾಂಗ್ರೆಸ್‌ನ 4, ಜೆಡಿಎಸ್‌
ನ 3, ಬಿಜೆಪಿಯ 2 ಹಾಗೂ ಒಬ್ಬ ಪಕ್ಷೇತರ ಸದಸ್ಯರಿದ್ದು, ಇದರಲ್ಲಿ ಪಕ್ಷೇತರ ಸದಸ್ಯರು, ಕಾಂಗ್ರೆಸ್‌ನ ಮೂವರು ಸದಸ್ಯರು ಸೋಮಶೇಖರ್‌ ಅವರನ್ನು ಬೆಂಬಲಿಸಿದ್ದಾರೆ.

ಅನುಕಂಪದ ಅಲೆಯ ನಿರೀಕ್ಷೆಯಲ್ಲಿ ಜೆಡಿಎಸ್‌: 2013ರಲ್ಲಿ 29,100 ಮತಗಳ ಅಂತರದಿಂದ ಪರಾಭವಗೊಂ ಡಿದ್ದ ಜವರಾಯಿಗೌಡ, 2018ರಲ್ಲಿ 10,711 ಮತಗಳಿಂದ ಎಸ್‌.ಟಿ.ಸೋಮಶೇಖರ್‌ ವಿರುದಟಛಿ ಸೋತಿದ್ದರು. ಈ ಬಾರಿಯಾದರೂ ಜನ ಸೇವೆ ಮಾಡಲು ಅವಕಾಶ ನೀಡುವಂತೆ ಜವರಾಯಿಗೌಡ ಕಣ್ಣೀರಿಡುತ್ತಲೇ ಪ್ರಚಾರ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ,
ಕುಮಾರಸ್ವಾಮಿಯವರು ಅನರ್ಹತೆ ವಿಚಾರವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿ ಪ್ರಚಾರ ನಡೆಸಿದ್ದಾರೆ.

Advertisement

ಗೆಲುವಿಗೆ ಕಾಂಗ್ರೆಸ್‌ ಕಸರತ್ತು: ಕ್ಷೇತ್ರದಲ್ಲಿ ಎರಡು ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಜಯ ಗಳಿಸಿದ್ದು, ಈ ಬಾರಿಯೂ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಯಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್‌ ಶತ ಪ್ರಯತ್ನ ನಡೆಸಿದೆ. ಹಿಂದಿನ ಎರಡು ಗೆಲುವು ವ್ಯಕ್ತಿಗಿಂತ ಪಕ್ಷದ ಗೆಲುವು ಎಂಬುದನ್ನು ಸಾರಲು ನಾಯಕರು ಪ್ರಚಾರ ನಡೆಸಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ನಾಯಕರು ಪ್ರಚಾರ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆಗೆ ಇತರ ವರ್ಗದ ಮತದಾರರ ವಿಶ್ವಾಸ ಗಳಿಸಲು ಅಭ್ಯರ್ಥಿ ಬೆವರು ಹರಿಸುತ್ತಿದ್ದಾರೆ.

ಒಕ್ಕಲಿಗ ಅಭ್ಯರ್ಥಿಗಳ ಸ್ಪರ್ಧೆ: ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದವರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದು, ನಿರ್ಣಾಯಕರೆನಿಸಿದ್ದಾರೆ. ಕಣದಲ್ಲಿರುವ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಒಕ್ಕಲಿಗರೇ ಆಗಿದ್ದು, ಯಾರು ಪ್ರಾಬಲ್ಯ ಮೆರೆಯಲಿದ್ದಾರೆ ಎಂಬ ಕುತೂಹಲವಿದೆ. ಮೂವರು ಅಭ್ಯರ್ಥಿಗಳ ನಡುವೆ ಒಕ್ಕಲಿಗ ಮತಗಳು ವಿಭಜನೆಯಾದರೆ ನಂತರದ ಸ್ಥಾನದಲ್ಲಿರುವ ಲಿಂಗಾಯಿತ, ಪರಿಶಿಷ್ಟ ಜಾತಿ/ಪಂಗಡ ಹಾಗೂ ಕುರುಬ ಸಮುದಾಯದ ಬೆಂಬಲ ಗಳಿಸಿದವರಿಗೆ ಗೆಲುವಿನ ಹಾದಿ ಸುಗಮವಾಗುವ ಸಾಧ್ಯತೆ ಇದೆ. ಇದೀಗ ಸೋಮಶೇಖರ್‌ ಬಿಜೆಪಿ ಸೇರಿರುವುದರಿಂದ ಹಿಂದೆಲ್ಲಾ ಗೆದ್ದವರು, ಸೋತವರೆಲ್ಲಾ ಒಂದೇ
ಪಕ್ಷದಲ್ಲಿದ್ದಂತಾಗಿದ್ದು, ಸಂಘಟಿತವಾಗಿ ಪ್ರಚಾರ ನಡೆಸುತ್ತಿರುವುದು ವಿಶೇಷ.

ಕ್ಷೇತ್ರದ ಇತಿಹಾಸ 2008ರ
ಕ್ಷೇತ್ರ ಪುನರ್‌ವಿಂಗಡನೆ ಬಳಿಕ ಉತ್ತರಹಳ್ಳಿ ಕ್ಷೇತ್ರದ ಬಹಳಷ್ಟು ಪ್ರದೇಶಗಳನ್ನು ಒಳಗೊಂಡ ಯಶವಂತಪುರ ಕ್ಷೇತ್ರ ರಚನೆಯಾಯಿತು. ಆಗ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆಯವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಸ್‌.ಟಿ. ಸೋಮಶೇಖರ್‌ ವಿರುದಟಛಿ ಜಯ ಗಳಿಸಿದ್ದರು. 2013 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದಲೇ ಕಣಕ್ಕಿಳಿದಿದ್ದ ಸೋಮಶೇಖರ್‌ ಅವರು ಜವರಾಯಿಗೌಡರನ್ನು ಪರಾಭವಗೊಳಿಸಿದ್ದರು. ಇದೀಗ ಜೆಡಿಎಸ್‌ನಿಂದ ಮೂರನೇ ಬಾರಿಗೆ ಜವರಾಯಿ ಗೌಡ ಅದೃಷ್ಟ ಪರೀಕ್ಷೆಗಿಳಿದಿದ್ದರೆ ಎಸ್‌.ಟಿ.ಸೋಮಶೇಖರ್‌ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಪ್ರಮುಖ ವಿಷಯ
ಸೋಮಶೇಖರ್‌ ಅಭಿವೃದಿಟಛಿ ಅಜೆಂಡಾ ಇಟ್ಟುಕೊಂಡು ಮತ ಕೇಳುತ್ತಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದವರಿಗೆ ಪಾಠ ಕಲಿಸಿ ಎಂದು ಪಿ.ನಾಗರಾಜ್‌ ಮನವಿ ಮಾಡುತ್ತಿದ್ದಾರೆ. ಐದು ವರ್ಷದ ಅವಧಿಗೆ ಆಯ್ಕೆಯಾದರೂ ರಾಜೀನಾಮೆ ಕೊಟ್ಟು ಅನರ್ಹರಾದವರನ್ನು ಬೆಂಬಲಿಸದೆ ಒಂದು ಬಾರಿ ತಮಗೆ ಅವಕಾಶ ನೀಡುವಂತೆ ಜವರಾಯಿಗೌಡ ಅಳಲು ತೋಡಿಕೊಳ್ಳುತ್ತಿದ್ದಾರೆ.

ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next