Advertisement

ಉಪ್ಪಿನಂಗಡಿ ಬಸ್‌ ನಿಲ್ದಾಣದೊಳಗೆ ಖಾಸಗಿ ವಾಹನಗಳದ್ದೇ ಕಾರುಬಾರು

09:24 PM Sep 08, 2020 | mahesh |

ಉಪ್ಪಿನಂಗಡಿ: ಇಲ್ಲಿನ ಬಸ್‌ ನಿಲ್ದಾಣದ ಬಹು ಪಾಲನ್ನು ಖಾಸಗಿ ವಾಹನಗಳೇ ಆಕ್ರಮಿಸಿ ಕೊಂಡಿರುವುದರಿಂದ ಬಸ್‌ಗಳಿಗೆ ನಿಲ್ಲಲು ಜಾಗವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಬಸ್‌ ನಿಲ್ದಾಣದೊಳಗೆ ಅಡ್ಡಾದಿಡ್ಡಿ ಖಾಸಗಿ ವಾಹನಗಳ ನಿಲುಗಡೆ, ಓಡಾಟದಿಂದಾಗಿ ಪ್ರಯಾಣಿಕರು ಜೀವ ಭಯದಿಂದ ಓಡಾಡುವ ಸ್ಥಿತಿ ಇದೆ. ಗ್ರಾಮೀಣ ಪ್ರದೇಶ ಮಂಗಳೂರು- ಬೆಂಗಳೂರು, ಧರ್ಮಸ್ಥಳ- ಸುಬ್ರಹ್ಮಣ್ಯ ಸಹಿತ ಹಲವು ಪ್ರಮುಖ ಸ್ಥಳಗಳಿಗೆ ಸಂಪರ್ಕ ಬೆಸೆಯುವ ಪ್ರಮುಖ ಕೊಂಡಿ ಉಪ್ಪಿನಂಗಡಿ. ವಿವಿಧ ಕಡೆಗಳಿಂದ ದಿನನಿತ್ಯ ನೂರಾರು ಪ್ರಯಾಣಿಕರು ಉಪ್ಪಿನಂಗಡಿ ಮೂಲಕವಾಗಿ ಹಲವು ಊರುಗಳಿಗೆ ಪ್ರಯಾಣಿಸುತ್ತಾರೆ. ಆದರೆ ಕೆಎಸ್ಸಾರ್ಟಿಸಿಗೆ ಸ್ವಂತದೆನ್ನುವ ಬಸ್‌ ನಿಲ್ದಾಣ ಇಲ್ಲಿಲ್ಲ. ಉಪ್ಪಿನಂಗಡಿ ಗ್ರಾ.ಪಂ. ಮಾಡಿಕೊಟ್ಟ ಬಸ್‌ ನಿಲ್ದಾಣವನ್ನೇ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳು ಆಶ್ರಯಿಸಬೇಕಾಗಿದೆ. ಮೊದಲೇ ಇಕ್ಕಟ್ಟಾಗಿರುವ ಬಸ್‌ನಿಲ್ದಾಣ ದಲ್ಲಿ ಈಗ ಎಲ್ಲೆಂದರಲ್ಲಿ ಖಾಸಗಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿ ರುವುದರಿಂದ ಬಸ್‌ಗಳಿಗೆ ನಿಲ್ಲಲು ಸ್ಥಳವಿಲ್ಲದಂತಾಗಿದೆ.

Advertisement

ಇಕ್ಕಟ್ಟಾಗಿರುವ ಬಸ್‌ ನಿಲ್ದಾಣ
ಗ್ರಾ.ಪಂ. ಬಸ್‌ ನಿಲ್ದಾಣಕ್ಕೆ ಜಾಗ ಕೊಟ್ಟಿದ್ದರೂ ಅದರ ಸುತ್ತ ವಾಣಿಜ್ಯ ಸಂಕೀರ್ಣ ಗಳನ್ನು ನಿರ್ಮಿಸಿ ಆದಾಯ ಗಳಿಕೆಗೆ ಹೆಚ್ಚು ಮಹತ್ವ ನೀಡಲಾಗಿದೆ. ವಾಣಿಜ್ಯ ಸಂಕೀರ್ಣಗಳ ಮಧ್ಯೆ ಕಿರು ಜಾಗದಲ್ಲಿ ಬಸ್‌ಗಳು ಬಂದು ನಿಲ್ಲಬೇಕು. ಬಸ್‌ಗಳಿಗಾಗಿ ಕಾಯುವ ಪ್ರಯಾಣಿಕರ ಗೋಳು ಕೇಳುವವರಿಲ್ಲವಾಗಿದೆ. ಇಲ್ಲಿ ಬಸ್‌ಗಳನ್ನು ನಿಲ್ಲಿಸುವುದಕ್ಕಾಗಿ ಕೆಎಸ್ಸಾರ್ಟಿಸಿ ಸಂಸ್ಥೆಯವರು ವರ್ಷಕ್ಕೆ ಉಪ್ಪಿ ನಂಗಡಿ ಗ್ರಾಮ ಪಂಚಾಯತ್‌ ಗೆ ಪಾವತಿ ಮಾಡುತ್ತಾರೆ. ಖಾಸಗಿ ಬಸ್‌ ನಿಲುಗಡೆಗೆ ಏಲಂ ಪ್ರಕ್ರಿಯೆ ನಡೆದಿದ್ದು, ಬಸ್‌ ನಿಲ್ದಾಣದೊಳಗೆ ಬರುವ ಒಂದು ಖಾಸಗಿ ಬಸ್‌ಗೆ ಶುಲ್ಕ ನಿಗದಿಪಡಿಸಲಾಗಿದೆ. ಈ ಬಸ್‌ನಿಲ್ದಾಣದಿಂದ ಗ್ರಾಮ ಪಂಚಾಯತ್‌ ಗೆ ಆದಾಯವಿದ್ದರೂ ವ್ಯವಸ್ಥೆ ಸಮರ್ಪಕವಾಗಿಲ್ಲ.

ನಿಯಮ ಉಲ್ಲಂಘನೆ
ಬಸ್‌ ನಿಲ್ದಾಣ ಇಕ್ಕಟ್ಟಾಗಿದ್ದರೂ ಕಳೆದ ಬಾರಿಯ ಚುನಾಯಿತ ಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಕೆಲವು ನಿಯಮ ಗಳನ್ನು ರೂಪಿಸಿ, ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಬಸ್‌ಗಳು ಪ್ರಯಾಣಿಸುವ ಮಾರ್ಗಸೂಚಿಗನುಗುಣವಾಗಿ ಕೆಎಸ್ಸಾ ರ್ಟಿಸಿ ಬಸ್‌, ಖಾಸಗಿ ಬಸ್‌ಗಳ ನಿಲುಗಡೆಗೆ ಜಾಗ ನಿಗದಿಪಡಿಸಿ, ಅಲ್ಲಿ ಗುರುತು ಹಾಕ ಲಾಗಿತ್ತು. ವಾಣಿಜ್ಯ ಸಂಕೀರ್ಣಗಳಿಗೆ ಬರುವ ಖಾಸಗಿ ವಾಹನಗಳ ನಿಲುಗಡೆಗೆ ಬಸ್‌ನಿಲ್ದಾಣದ ಒಂದು ಬದಿ ಪ್ರತ್ಯೇಕ ಜಾಗ ಗುರುತಿಸಲಾಗಿತ್ತು. ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಗ್ರಾಮ ಪಂಚಾಯತ್‌ ದಂಡ ವಿಧಿಸುತ್ತಿತ್ತು. ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿದ ಬಳಿಕ ಉಪ್ಪಿನಂಗಡಿಯ ಬಸ್‌ ನಿಲ್ದಾಣ ಅವ್ಯವಸ್ಥೆಯ ಆಗರವಾದಂತಿದೆ. ನಿಯಮ ಉಲ್ಲಂಘನೆಯಾಗಿ ಸಾರ್ವ ಜನಿಕರಿಗೆ ಸಮಸ್ಯೆಯಾಗುತ್ತಿದ್ದರೂ ಅಧಿ ಕಾರಿಗಳು ಮೌನವಾಗಿದ್ದಾರೆ. ಅಧಿ ಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಪ್ರಯಾಣಿಕರು ಇಲ್ಲಿ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಶೀಘ್ರ ಗಮನ ಹರಿಸಲಿ
ಬಸ್‌ ನಿಲುಗಡೆಗಾಗಿಯೇ ಇರುವ ಉಪ್ಪಿನಂಗಡಿ ಬಸ್‌ ನಿಲ್ದಾಣದೊಳಗೆ ಅಡ್ಡಾದಿಡ್ಡಿಯಾಗಿ ಖಾಸಗಿ ವಾಹನಗಳನ್ನು ಪಾರ್ಕಿಂಗ್‌ ಮಾಡುವುದರಿಂದ ಬಸ್‌ಗಳನ್ನು ನಿಲ್ಲಿಸಲು ಸಮಸ್ಯೆಯಾಗಿದೆ. ಈ ಹಿಂದೆ ಚುನಾಯಿತ ಪ್ರತಿನಿಧಿಗಳು ಖಾಸಗಿ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ಸ್ಥಳವನ್ನು ನೀಡಿದ್ದರಲ್ಲದೆ, ಬಸ್‌ಗಳು ಎಲ್ಲೆಲ್ಲಿ ನಿಲ್ಲಬೇಕು ಎಂಬ ಬಗ್ಗೆ ಗುರುತು ಹಾಕಿದ್ದರು. ಆದ್ದರಿಂದ ಬಸ್‌ ನಿಲ್ದಾಣವು ವ್ಯವಸ್ಥಿತ ರೀತಿಯಲ್ಲಿತ್ತು. ಆದರೆ ಇದೀಗ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಖಾಸಗಿ ವಾಹನಗಳಿಂದಾಗಿ ಬಸ್‌ಗಳನ್ನು ನಿಲ್ಲಿಸಲೂ ಜಾಗವಿಲ್ಲದಂತಾಗಿದೆ ಎಂದು ಖಾಸಗಿ ಬಸ್‌ ಏಜೆಂಟ್‌ ಜಯರಾಮ ಆಚಾರ್ಯ ತಿಳಿಸಿದ್ದಾರೆ.

ಸೂಕ್ತ ಕ್ರಮ
ಮುಂದಿನ ಏಳು ದಿನಗಳ ಒಳಗೆ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ಹೆಚ್ಚುವರಿ ಸಿಬಂದಿಯನ್ನು ನೇಮಿಸಲಾಗುವುದು.
-ನವೀನ್‌ ಭಂಡಾರಿ, ಉಪ್ಪಿನಂಗಡಿ ಪಂ. ಆಡಳಿತಾಧಿಕಾರಿ

Advertisement

ಕ್ರಮ ಅಗತ್ಯ
ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಗೆ ಸಾಕಷ್ಟು ಅವಕಾಶವಿದ್ದರೂ ಖಾಸಗಿ ವಾಹನಗಳನ್ನು ಬೇಕಾಬಿಟ್ಟಿ ನಿಲುಗಡೆಯಿಂದಾಗಿ ಸಮಸ್ಯೆಯಾಗುತ್ತಿದೆ. ಆಡಳಿತ ಅಧಿಕಾರಿಗಳು ಕ್ರಮ ಜರಗಿಸುವ ಅಗತ್ಯ ಇದೆ.
-ಅಬ್ದುಲ್‌ ರಹಿಮಾನ್‌, ನಿಕಟಪೂರ್ವ ಅಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next