Advertisement

ಗ್ರಾಮೀಣ ರಸ್ತೆಯಲ್ಲಿ ಗುಂಡಿಗಳದ್ದೇ ಕಾರುಬಾರು

06:22 PM Jun 10, 2022 | Team Udayavani |

ಬಾಗೇಪಲ್ಲಿ: ತಾಲೂಕಿನ ಬಾಗೇಪಲ್ಲಿ ಗೂಳೂರು-ತಿಮ್ಮಂಪಲ್ಲಿ ಮಾರ್ಗ, ಬಿಳ್ಳೂರು -ಪಾತಪಾಳ್ಯ ಮಾರ್ಗ, ಚಾಕವೇಲು – ರಾಮನುಪಡಿ ಮಾರ್ಗ, ಗೂಳೂರು – ಕೊತ್ತಕೋಟೆ ಮಾರ್ಗ, ಬಾಗೇಪಲ್ಲಿ -ಮಿಟ್ಟೇಮರಿ ಮಾರ್ಗದ ರಸ್ತೆಗಳಿಗೆ ಹಾಕಿರುವ ಡಾಂಬರು ಕಿತ್ತುಹೋಗಿ ಹಲವು ವರ್ಷಗಳೇ ಕಳೆದಿದ್ದು, ಸಂಪೂರ್ಣ ಹದಗೆಟ್ಟಿದೆ.

Advertisement

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ವಿವಿಧ ಯೋಜನೆಗಳಡಿ ಕೋಟ್ಯಂತರ ರೂ. ಹಣ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ವಿಫ‌ಲವಾಗಿದ್ದಾರೆ ಎಂಬುದಕ್ಕೆ ಈ ರಸ್ತೆಗಳೇ ಸಾಕ್ಷಿ.

ಸೈಜುಕಲ್ಲುಗಳಿಂದ ಮುಚ್ಚಿದ್ದಾರೆ: ಈ ರಸ್ತೆಗಳಲ್ಲಿ ಎರಡು ಅಡಿ ಆಳದವರೆಗೆ ಗುಂಡಿಗಳು ಬಿದ್ದಿವೆ. ರಸ್ತೆ ಮಧ್ಯದಲ್ಲಿ ಬಿದ್ದಿರುವ ಬೃಹತ್‌ ಗಾತ್ರದ ಗುಂಡಿಗಳನ್ನು ಸ್ಥಳೀಯರೇ ಸೈಜುಕಲ್ಲುಗಳಿಂದ ಮುಚ್ಚಿದ್ದಾರೆ. ಕಾರು, ದ್ವಿಚಕ್ರ ವಾಹನ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗದ ಮಟ್ಟಿಗೆ ಗುಂಡಿಗಳು ಬಿದ್ದಿವೆ. ಹೊಸ ಕಾರು, ಬೈಕ್‌ ಈ ರಸ್ತೆಗೆ ಬಂದರೆ ರಿಪೇರಿಗೆ ಬರುವುದರಲ್ಲಿ ಸಂದೇಶವಿಲ್ಲ.

ಆಟೋ, ಆ್ಯಂಬುಲೆನ್ಸ್‌ ಬರುವುದೇ ಇಲ್ಲ:
ಗುಂಡಿಗಳು ಕೆಲವು ಕಡೆ ಕಡಿದಾಗಿವೆ, ಇನ್ನೂ ಕೆಲವು ಕಡೆ ಮೊಣಕಾಲುದ್ದ ಇವೆ. ಮಳೆ ಬಂದರೆ ಸಾಕು ಗುಂಡಿ ಯಾವುದು? ರಸ್ತೆ ಯಾವುದು? ತಿಳಿಯುವುದೇ ಇಲ್ಲ. ಈ ರಸ್ತೆಗೆ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಕೂಡ ಬರುವುದಿಲ್ಲ. ಬಾಡಿಗೆ ಆಟೋಗಳು ಈ ರಸ್ತೆ ಬರಲು ಹಿಂದೇಟು ಹಾಕುತ್ತಾರೆ.

ಗುಂಡಿ ರಸ್ತೆಯಲ್ಲಿ ನಿರಂತರ ಬೈಕ್‌ ಓಡಿಸುವುದರಿಂದ ಸೊಂಟ ನೋವು ಕಾಣಿಸಿಕೊಳ್ಳಲಿದೆ. ಬಾಗೇಪಲ್ಲಿ- ಗೂಳೂರು ಮಾರ್ಗದಲ್ಲಿ ದ್ವಿಚಕ್ರ ವಾಹನ ಓಡಿಸುವುದು ಕಷ್ಟದ ಮಾತು. ಗುಂಡಿಗಳನ್ನು ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಕೈಕಾಲು ಮುರಿದು ಕೊಂಡು ಆಸ್ಪತ್ರೆಗೆ ಸೇರುತ್ತಿದ್ದರೂ ಅಧಿಕಾರಿಗಳು, ಶಾಸಕರು ಡಾಂಬರೀಕರಣ ಮಾಡಿಸಿಲ್ಲ.
ರಂಗಾರೆಡ್ಡಿ, ಗೂಳೂರು ಗ್ರಾಮ.

Advertisement

ಶಾಸಕರ ಸ್ವಂತ ಹೋಬಳಿಯ ರಸ್ತೆಗಳ ಪರಿಸ್ಥಿತಿಯೇ ಹೀಗಾದ್ರೆ ಕ್ಷೇತ್ರದ ಪರಿಸ್ಥಿತಿ ಹೇಳತೀರದು. ಹದಗೆಟ್ಟ ರಸ್ತೆ ಸರಿಪಡಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಯಾರೊಬ್ಬರೂ ರಸ್ತೆ ಅಭಿವೃದ್ಧಿಗೆ ಮುಂದಾಗಲಿಲ್ಲ, ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನಾವು ಎಲ್ಲಿಂದ ಕಾಣಬೇಕೆಂಬುದು ಅವರೇ ಹೇಳಬೇಕು? ನಮ್ಮ ರಸ್ತೆಗಳ ಗೋಳು ಕೇಳುವವರು ಯಾರು ಎಂಬುದು ನಮಗೆ ಅರ್ಥವಾಗುತ್ತಿಲ್ಲ.
● ಮಂಜುನಾಥ, ಮದಕವಾರಪಲ್ಲಿ ನಿವಾಸಿ.

ಆರ್ ಎನ್ ಗೋಪಾಲರೆಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next