ಬೆಂಗಳೂರು: 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ 42 ಮಹಿಳಾ ಅಭ್ಯರ್ಥಿಗಳ ಪೈಕಿ ಮೂವರು ಗೆದ್ದಿದ್ದು ಉಳಿದ 39 ಮಹಿಳಾ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ.
ರಾಜ್ಯದಲ್ಲಿರುವ 2.70 ಕೋಟಿ ಮಹಿಳಾ ಮತದಾರರನ್ನು ಲೋಕಸಭೆಯಲ್ಲಿ ಮೂವರು ಮಹಿಳಾ ಸಂಸದರು ಪ್ರತಿನಿಧಿಸಲಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ಶೋಭಾ ಕರಂದ್ಲಾಜೆ ಪ್ರತಿನಿಧಿಸಿದರೆ, ದಾವಣಗೆರೆಯನ್ನು ಕಾಂಗ್ರೆಸ್‌ನ ಪ್ರಭಾ ಮಲ್ಲಿಕಾರ್ಜುನ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರವನ್ನು ಪ್ರಿಯಾಂಕಾ ಜಾರಕಿಹೊಳಿ ಪ್ರತಿನಿಧಿಸಲಿದ್ದಾರೆ.
2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 2.58 ಕೋಟಿ ಮಹಿಳಾ ಪ್ರತಿದಾರರನ್ನು ಶೋಭಾ ಕರಂದ್ಲಾಜೆ ಒಬ್ಬರೇ ಮಹಿಳಾ ಪ್ರತಿನಿಧಿಯಾಗಿ ಪ್ರತಿನಿಧಿಸಿದ್ದರು. ಈ ಬಾರಿ ಸ್ಪರ್ಧಿಸಿದ್ದ 42 ಮಹಿಳಾ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನಿಂದಲೇ ಆರು ಮಹಿಳಾ ಅಭ್ಯರ್ಥಿಗಳು ಮತ್ತು ಬಿಜೆಪಿಯಿಂದ ಇಬ್ಬರು ಸ್ಪರ್ಧಿಸಿದ್ದರು. ಈ ಪೈಕಿ ಬಿಜೆಪಿಯ ಶೋಭಾ ಕರಂದ್ಲಾಜೆ ಗೆದ್ದಿದ್ದು, ದಾವಣಗೆರೆಯ ಗಾಯತ್ರಿ ಸಿದ್ದೇಶ್ವರ್ ಸೋತಿದ್ದಾರೆ.
ಅಂತೆಯೇ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೌಮ್ಯ ರೆಡ್ಡಿ, ಅಂಜಲಿ ನಿಂಬಾಳ್ಕರ್, ಸಂಯುಕ್ತಾ ಪಾಟೀಲ್, ಗೀತಾ ಶಿವರಾಜ್‌ಕುಮಾರ್ ಸೋಲು ಅನುಭವಿಸಿದ್ದು, ಪ್ರಿಯಾಂಕಾ ಜಾರಕಿಹೊಳಿ ಮತ್ತು ಪ್ರಭಾ ಮಲ್ಲಿಕಾರ್ಜುನ ಗೆದ್ದಿದ್ದಾರೆ.
ಒಟ್ಟಾರೆ 18ನೇ ಲೋಕಸಭೆಗೆ ರಾಜ್ಯದಿಂದ ಮೂವರು ಮಹಿಳಾ ಪ್ರತಿನಿಧಿಗಳು ಪ್ರವೇಶಿಸಲಿದ್ದು, ಈ ಮೂಲಕ ಲೋಕಸಭೆಯ ಇತಿಹಾಸದಲ್ಲಿ ಚಿಕ್ಕಮಗಳೂರಿನಿಂದ ಗೆದ್ದಿದ್ದ ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯಿಂದ ಹಿಡಿದು ಈವರೆಗೆ ರಾಜ್ಯದಿಂದ 18 ಮಹಿಳಾ ಸಂಸದರು ಲೋಕಸಭೆ ಪ್ರವೇಶಿಸಿದಂತಾಗಲಿದೆ.
ರಾಜ್ಯದಿಂದ ಈವರೆಗೆ ಆಯ್ಕೆಯಾದ ಒಟ್ಟು 12 ಮಂದಿ ಮಹಿಳಾ ಸಂಸದರ ಪೈಕಿ ಬಸವರಾಜೇಶ್ವರಿ, ಡಿ.ಕೆ.ತಾರಾದೇವಿ, ರತ್ನಮಾಲಾ ಡಿ.ಸವಣೂರು ಮತ್ತು ಮಾರ್ಗರೇಟ್ ಆಳ್ವ, ಶೋಭಾ ಕರಂದ್ಲಾಜೆ ಕೇಂದ್ರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾರ್ಗರೇಟ್ ಆಳ್ವ ಅವರು ರಾಜ್ಯಪಾಲರಾಗಿಯೂ ನೇಮಕಗೊಂಡಿದ್ದರು. ಈ ಬಾರಿ ಮೂವರು ಮಹಿಳೆಯರು ಗೆದ್ದಿದ್ದಾರೆ.