Advertisement

ಅಂಡಾರು ಗ್ರಾಮಸ್ಥರಿಗಿಲ್ಲ ತಾ|ಕೇಂದ್ರ ಸಂಪರ್ಕಿಸುವ ಬಸ್‌ ವ್ಯವಸ್ಥೆ

02:45 AM Apr 16, 2021 | Team Udayavani |

ಅಜೆಕಾರು: ವರಂಗ ಗ್ರಾ.ಪಂ. ವ್ಯಾಪ್ತಿಯ ಅಂಡಾರು ಗ್ರಾಮಸ್ಥರಿಗೆ ತಾಲೂಕು ಕೇಂದ್ರ ಹೆಬ್ರಿ ಸಂಪರ್ಕಿಸಲು ಬಸ್‌ ವ್ಯವಸ್ಥೆ ಇಲ್ಲದೆ ಸಂಕಷ್ಟ ಪಡುವಂತಾಗಿದೆ. ತಾಲೂಕು ಕೇಂದ್ರವಾಗಿ ಹೆಬ್ರಿ ಹಲವು ವರ್ಷ ಕಳೆದಿದ್ದರೂ ತಾ| ವ್ಯಾಪ್ತಿಯ ಗ್ರಾಮಗಳನ್ನು ಸಂಪರ್ಕಿಸಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ.

Advertisement

ತಾಲೂಕು ಕೇಂದ್ರಕ್ಕಿಲ್ಲ
ಅಂಡಾರು ಕಾರ್ಕಳ ತಾಲೂಕಿಗೆ ಹತ್ತಿರವಾಗಿದ್ದರೂ ವರಂಗ ಗ್ರಾ.ಪಂ. ವ್ಯಾಪ್ತಿಗೆ ಬರುವುದರಿಂದ ಹೆಬ್ರಿ ತಾಲೂಕಿಗೆ ಸೇರಿಸಲಾಗಿತ್ತು. ಅಂಡಾರು ಗ್ರಾಮ ದಿಂದ ಕಾರ್ಕಳಕ್ಕೆ ಪ್ರತಿ ಅರ್ಧ ಗಂಟೆಗೆ ಒಂದು ಖಾಸಗಿ ಬಸ್‌ ವ್ಯವಸ್ಥೆ ಇತ್ತು ಹಾಗಾಗಿ ಅಂದು ತಾಲೂಕು ಕೇಂದ್ರವಾಗಿದ್ದ ಕಾರ್ಕಳಕ್ಕೆ ಸಂಚರಿಸಲು ಅನುಕೂಲ ವಾಗಿತ್ತು. ಆದರೆ ಹೆಬ್ರಿ ತಾ| ಕೇಂದ್ರವಾದ ಬಳಿಕ ಅಂಡಾರು ಗ್ರಾಮಸ್ಥರು ನೇರವಾಗಿ ತಾ| ಕೇಂದ್ರ ಸಂಪರ್ಕಿಸಲು ಒಂದೂ ಬಸ್‌ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ.

ನಾಗರಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಣ್ಣ ಸಣ್ಣ ತಾಲೂಕು, ಜಿಲ್ಲಾ ಕೇಂದ್ರಗಳನ್ನು ರಚಿಸ ಲಾಗುತ್ತದೆ. ಆದರೆ ಅಂಡಾರು ಗ್ರಾಮಸ್ಥರಿಗೆ ಹೆಬ್ರಿ ತಾಲೂಕು ಕೇಂದ್ರವಾದ ಬಳಿಕ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೋಬಳಿ ಕೇಂದ್ರವೂ ಇಲ್ಲ
ಕಾರ್ಕಳ ತಾ| ಕೇಂದ್ರವಾಗಿದ್ದ ಸಂದರ್ಭ ಅಜೆಕಾರು ಹೋಬಳಿ ಕೇಂದ್ರವಾಗಿದ್ದು ಇದರ ವ್ಯಾಪ್ತಿಯಲ್ಲಿ ಅಂಡಾರು ಗ್ರಾಮವೂ ಇತ್ತು. ಹೋಬಳಿ ಕೇಂದ್ರ ದಲ್ಲಿ ಹಲವು ಕೆಲಸಗಳಾಗುತ್ತಿತ್ತು. ಈಗ ತಾಲೂಕು ಬೇರೆಯಾದ್ದರಿಂದ ಎಲ್ಲದಕ್ಕೂ ಹೆಬ್ರಿಗೇ ಹೋಗಬೇಕು. ಸದ್ಯ ಹೆಬ್ರಿ ತಾ.ಪಂ.ನ 11 ಕ್ಷೇತ್ರಗಳಲ್ಲಿ ಅಂಡಾರು ಸಹ ಒಂದು ಕ್ಷೇತ್ರ ವಾಗಿದ್ದು ಪೂರ್ಣ ಪ್ರಮಾಣದ ತಾ.ಪಂ. ಕ್ಷೇತ್ರಕ್ಕೆ ಬಸ್‌ ಸಂಚಾರ ಭಾಗ್ಯ ಇಲ್ಲದಾಗಿದೆ.

ವಿದ್ಯಾರ್ಥಿಗಳಿಗೆ ಅನುಕೂಲ
ಬಸ್‌ ಸಂಚಾರ ಶುರುವಾದರೆ ಅಂಡಾರು ಗ್ರಾಮಸ್ಥರಿಗಲ್ಲದೆ ಅಂಡಾರು, ಶಿರ್ಲಾಲು, ಕೆರ್ವಾಶೆ ಗ್ರಾಮದ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ. ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಮುನಿಯಾಲಿನ ಸರಕಾರಿ ಪಬ್ಲಿಕ್‌ ಸ್ಕೂಲ್‌ಗೆ ತೆರಳುವುದರಿಂದ ಕಾಡುಹೊಳೆ ಮಾರ್ಗವಾಗಿ ಬಸ್‌ ವ್ಯವಸ್ಥೆ ಆದಲ್ಲಿ ಅನುಕೂಲವಾಗಲಿದೆ.

Advertisement

ಸರಕಾರಿ ಬಸ್‌ ವ್ಯವಸ್ಥೆಗೆ ಆಗ್ರಹ
ಹೆಬ್ರಿ ತಾ| ಕೇಂದ್ರದಿಂದ ವರಂಗ, ಮುನಿಯಾಲು, ಕಾಡುಹೊಳೆ ಮಾರ್ಗವಾಗಿ ಅಂಡಾರಿಗೆ ಸರಕಾರಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಅಲ್ಲದೆ ಹೆಬ್ರಿಯಿಂದ ಅಂಡಾರು ಮಾರ್ಗವಾಗಿ ಧರ್ಮಸ್ಥಳ, ಶೃಂಗೇರಿ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಸಂಚರಿಸಲು ಹತ್ತಿರದ ರಸ್ತೆ ಇರುವುದರಿಂದ, ಇಲ್ಲಿ ಸರಕಾರಿ ಬಸ್‌ ಸಂಚರಿಸಿದರೆ ಅಭಿವೃದ್ಧಿಗೆ
ಪೂರಕವಾಗಲಿದೆ. ಆದ್ದರಿಂದ ಬಸ್‌ ವ್ಯವಸ್ಥೆ ಕಲ್ಪಿಸ ಬೇಕೆನ್ನುವ ಆಗ್ರಹ ಇಲ್ಲಿನವರದ್ದಾಗಿದೆ.

ಸುತ್ತು ಬಳಸಿ ಸಂಚಾರ
ಅಂಡಾರು ಗ್ರಾಮವು ಹೆಬ್ರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು ಬಸ್‌ ವ್ಯವಸ್ಥೆಗೆ ಕಾರ್ಕಳ ತಾಲೂಕಿನ ಅಜೆಕಾರು ಮಾರ್ಗವಾಗಿ ಸುಮಾರು 35 ಕಿ.ಮೀ.ಯಷ್ಟು ಸುತ್ತು ಬಳಸಿ ಸಂಚರಿಸಬೇಕಾಗಿದೆ. ಸದ್ಯ ಅಂಡಾರಿನಿಂದ ಸಂಚರಿಸುವ ಎಲ್ಲ ಬಸ್‌ಗಳೂ ಕಾರ್ಕಳಕ್ಕೆ ಮಾತ್ರ ಹೋಗುತ್ತವೆ. ಎರಡು ಮೂರು ಬಸ್‌ಗಳನ್ನು ಬದಲಾಯಿಸಬೇಕಾದ್ದರಿಂದ ಹಿರಿಯರಿಗೆ ಅನನುಕೂಲವಾಗಿದೆ. ಹೆಬ್ರಿ ತಾ| ಕೇಂದ್ರದಿಂದ ಅಂಡಾರು ಗ್ರಾಮವನ್ನು ಸಂಪರ್ಕಿಸಲು ಕಾಡುಹೊಳೆ ಮಾರ್ಗವಾಗಿ ಉತ್ತಮ ರಸ್ತೆ ವ್ಯವಸ್ಥೆ ಇದ್ದು ಖಾಸಗಿ ಅಥವಾ ಸರಕಾರಿ ಬಸ್‌ ಸಂಚಾರದ ವ್ಯವಸ್ಥೆ ತ್ವರಿತವಾಗಿ ಕಲ್ಪಿಸಬೇಕಾಗಿದೆ.

ಅಧಿಕಾರಿಗಳೊಂದಿಗೆ ಚರ್ಚೆ
ಅಂಡಾರು ಗ್ರಾಮದ ಜನತೆ ತಾಲೂಕು ಕೇಂದ್ರಕ್ಕೆ ತಲುಪಲು ಸುತ್ತು ಬಳಸಿ ಸಂಚರಿಸಬೇಕಾಗಿದೆ. ಗ್ರಾಮಕ್ಕೆ ತಾ| ಕೇಂದ್ರದಿಂದ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.
-ಜ್ಯೋತಿ ಹರೀಶ್‌, ಸದಸ್ಯರು, ಜಿಲ್ಲಾ ಪಂಚಾಯತ್‌

ಸರಕಾರಕ್ಕೆ ಪ್ರಸ್ತಾವನೆ
ಹೆಬ್ರಿ ತಾಲೂಕು ಕೇಂದ್ರದ ಗಡಿ ಗ್ರಾಮವಾಗಿರುವ ಅಂಡಾರು ಗ್ರಾಮಕ್ಕೆ ಬಸ್‌ ಸೌಕರ್ಯ ಅತ್ಯಗತ್ಯ. ಈ ನಿಟ್ಟಿನಲ್ಲಿ ಸರಕಾರಿ ಬಸ್‌ ಸಂಚಾರ ವ್ಯವಸ್ಥೆ ಪ್ರಾರಂಭ ಮಾಡುವಂತೆ ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

-ರಮೇಶ್‌ ಕುಮಾರ್‌, ಅಧ್ಯಕ್ಷರು, ತಾ. ಪಂ., ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next