Advertisement

‘ಶಾಸಕರ ಸುಳ್ಳು ಭರವಸೆ ಒಪ್ಪಲು ಇಲ್ಲಿನವರು ದಡ್ಡರಲ್ಲ’

04:46 PM Oct 19, 2017 | Team Udayavani |

ಸುಳ್ಯ: ಹದಗೆಟ್ಟಿರುವ ಕಾಂತಮಂಗಲ -ಅಜ್ಜಾವರ -ಅ ಡ್ಪಂಗಾಯ -ಮಂಡೆಕೋಲು ಜಿ.ಪಂ. ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಮಂಗಳವಾರ ನಾಗರಿಕ ಹಿತರಕ್ಷಣ ವೇದಿಕೆಯಿಂದ ಕಾಂತಮಂಗಲ ಅಪ್ಪಾಜಿರಾವ್‌ ಸರ್ಕಲ್‌ ಬಳಿ ಪ್ರತಿಭಟನೆ ನಡೆಯಿತು.

Advertisement

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜಯಪ್ರಕಾಶ್‌ ರೈ, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಿಚಾರಗಳಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ. ಆದರೆ ಅಜ್ಜಾವರ, ಮಂಡೆಕೋಲು ಗ್ರಾಮದ ಜನರ ಬಹು ವರ್ಷದ ಬೇಡಿಕೆಯಾದ ರಸ್ತೆ ಅಭಿವೃದ್ಧಿಗೆ ಐದು ಬಾರಿ ಆಯ್ಕೆಯಾಗಿರುವ ಶಾಸಕ ಎಸ್‌. ಅಂಗಾರ ಅವರು ಮನ್ನಣೆ ನೀಡದೆ, ಇದೀಗ ರಾಜ್ಯ ಸರಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಬಿಡುಗಡೆಯಾದ ಅನುದಾನಕ್ಕೆ ರಾಜ್ಯದ ಯಾವ ಇಲಾಖೆ, ಸಚಿವರು, ಜನಪ್ರತಿನಿಧಿಗಳು ತಡೆ ತರುತ್ತಿದ್ದಾರೆ ಎನ್ನುವುದನ್ನು ಬಿಜೆಪಿ ಬಹಿರಂಗಪಡಿಸಿದರೆ, ಶಾಸಕರೊಂದಿಗೆ ಅಂತಹವರ ವಿರುದ್ಧ ಪ್ರತಿಭಟಿಸಲು ನಾವು ಸಿದ್ಧ ಎಂದು ಸವಾಲೆಸೆದರು.

ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಅನುದಾನ ಮಂಜೂ ರಾಗಿದ್ದರೂ ಆ ಪ್ರಸ್ತಾವನೆಯನ್ನು ಬದಲಾಯಿಸಲಾಗಿದೆ. ಕೇಂದ್ರದ ಸಿಆರ್‌ಎಫ್‌ ಯೋಜನೆಯಡಿ 6 ಕೋಟಿ ರೂ. ಬಿಡುಗಡೆ ಆಗಿದ್ದರೂ ಕೆಲಸ ಶುರುವಾಗುವ ಲಕ್ಷಣ ಇಲ್ಲ. ಹಾಗಾಗಿ ಟೆಂಡರ್‌ ಪ್ರಕ್ರಿಯೆಗೆ ರಾಜ್ಯ ಸರಕಾರ ತಡೆ ಒಡ್ಡುತ್ತದೆ ಎಂದು ಹೇಳಿಕೆ ನೀಡಿ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ಜಿ.ಪಂ. ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ ಮಾತನಾಡಿ, ವಾಜಪೇಯಿ ಸರಕಾರದ ಅವಧಿಯಲ್ಲಿ ಸಿಆರ್‌ಎಫ್‌ ಯೋಜನೆಯಡಿ ಜಿಲ್ಲೆಯ ವಿವಿಧ ಶಾಸಕರು ತಮ್ಮ ಕ್ಷೇತ್ರದ ರಸ್ತೆಗಳಿಗೆ ಅನುದಾನ ಬಳಸಿದ್ದಾರೆ. ಆಗಿಂದಲೇ ಸುಳ್ಯ ಶಾಸಕರಾಗಿದ್ದ ಅಂಗಾರ ಈ ಯೋಜನೆಯನ್ನು ಬಳಸಿಕೊಂಡಿಲ್ಲ. ಚುನಾವಣೆಗೆ ಕೆಲವು ತಿಂಗಳು ಮಾತ್ರ ಬಾಕಿ ಇರುವುದರಿಂದ ಈಗ ಸಿಆರ್‌ಎಫ್‌ನಡಿ ಪ್ರಸ್ತಾವನೆ ಸಲ್ಲಿಸಿ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಆಗುತ್ತಿದೆ ಎಂದು ಅಪಾದಿಸಿದರು. ಎಲ್ಲ ಸ್ತರದ ಅಧಿಕಾರವೂ ಬಿಜೆಪಿಗೆ ಸಿಕ್ಕಿದೆ. ಅದನ್ನು ಮರೆತು ಬಿಜೆಪಿ ಮೌನವಾಗಿದೆ ಎಂದರು.

ಶಾಫಿ ದಾರಿಮಿ ಮಾತನಾಡಿ, 19 ವರ್ಷಗಳಿಂದ ಇಲ್ಲಿ ರಸ್ತೆ ದುರಸ್ತಿ ಆಗಿಲ್ಲ. ಪಾದೆಯಾತ್ರೆಯ ಮೂಲಕ ಅಧಿಕಾರಿ, ಜನಪ್ರತಿನಿಧಿಗಳ ಗಮನ ಸೆಳೆದರೂ ಸ್ಪಂದನೆ ಸಿಕ್ಕಿಲ್ಲ. ಇಲ್ಲಿನ ಜನರು ಏನು ತಪ್ಪು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

Advertisement

ಜವಾಬ್ದಾರಿಯಿಂದ ವರ್ತಿಸಲಿ
ನ.ಪಂ. ಸದಸ್ಯ ಗೋಕುಲ್‌ದಾಸ್‌ ಮಾತನಾಡಿ, ಕ್ಷೇತ್ರದ ಶಾಸಕರು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುವುದನ್ನು ಬಿಟ್ಟು, ಜವಾಬ್ದಾರಿಯಿಂದ ವರ್ತಿಸಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅರಂಬೂರು ಪ್ರದೇಶದ ಜನ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಜನಾರ್ದನ ಪೂಜಾರಿ ಅವರು ಚುನಾವಣೆಯಲ್ಲಿ ಸೋತರೂ ಅನುದಾನ ಕೊಡಿಸಿ, ಮಾತು ಉಳಿಸಿಕೊಂಡರು. ಆದರೆ, ಬಿಜೆಪಿ ಇದನ್ನು ರಾಜಕೀಯ ಲಾಭಕ್ಕೆ ಬಳಸುತ್ತಿದೆ ಎಂದು ಆರೋಪಿಸಿದರು.

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್‌ ರೈ ಮೇನಾಲ ಮಾತನಾಡಿ, ಊರಿನ ಜನರಿಗೆ ರಸ್ತೆ ಬೇಕಿದೆ. ಯಾವುದೇ ಪಕ್ಷದ ವಿಚಾರಕ್ಕಿಂತಲೂ ರಸ್ತೆ ಡಾಮರು ಕಾಣುವುದು ಮುಖ್ಯ ಎಂದರು.

ನಾಗರಾಜ ಮುಳ್ಯ, ಅಶೋಕ ಎಡಮಲೆ, ವಿನಯ ಆಳ್ವ, ಚಂದ್ರಶೇಖರ ಮೇನಾಲ ಮಾತನಾಡಿದರು. ಪ್ರತಿಭಟನ ಸಭೆಯಲ್ಲಿ ಮುರಳಿ ಮಾವಂಜಿ, ರಾಹುಲ್‌ ಅಡ್ಪಂಗಾಯ, ನವೀನ್‌ ಪೂಜಾರಿ, ಉದಯ್‌, ಧರ್ಮಪಾಲ ಕೊಯಿಂಗಾಜೆ, ಗಂಗಾಧರ ಮೇನಾಲ, ಶಾಫಿ ಕುತ್ತುಮೊಟ್ಟೆ, ಸುಧೀರ್‌ ರೈ ಮೇನಾಲ, ಸಾಮಾಜಿಕ ಕಾರ್ಯಕರ್ತ ಶಾರೀಖ್‌ ಉಪಸ್ಥಿತರಿದ್ದರು. 

ಮನೆಗೆ ಹೋಗುವ ದಿನ ಬಂದಿದೆ
ನ್ಯಾಯವಾದಿ ಸುಕುಮಾರ್‌ ಕೋಡ್ತುಗುಳಿ ಮಾತನಾಡಿ, ಹದಿನೈದು ವರ್ಷಗಳಿಂದ ನರಕಸದೃಶ ರಸ್ತೆಯಲ್ಲಿ ಸಂಚರಿಸುತ್ತಿದ್ದರೂ ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಐದು ಬಾರಿ ಆಯ್ಕೆಯಾದ ಶಾಸಕ ಅಂಗಾರ ತಾರತಮ್ಯ ಮಾಡುತ್ತಿದ್ದಾರೆ. ರಸ್ತೆ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಶಾಸಕರು ಮಾತನಾಡಬೇಕು. 15 ದಿವಸಗಳಲ್ಲಿ ಗುಂಡಿ ಮುಚ್ಚುವ ಕೆಲಸವಾದರೂ ಆಗಬೇಕು. ಇಲ್ಲದಿದ್ದರೆ ಪಾದಯಾತ್ರೆಯ ಮೂಲಕ ಮುತ್ತಿಗೆ ಹಾಕಬೇಕಾದೀತು ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next