ಬೆಂಗಳೂರು: ಕರ್ನಾಟಕ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೆಷ್ಠತೆಯನ್ನು ವಿಸ್ತರಿಸುವ ವಿಧೇಯಕ-2017ಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಶನಿವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಕಾಯ್ದೆ ರೂಪದಲ್ಲಿ ಅದು ಜಾರಿಯಾದಂತಾಗಿದೆ.
ಇದರೊಂದಿಗೆ ಮೀಸಲು ಬಡ್ತಿ ಕಾಯ್ದೆ ರದ್ದತಿಯಿಂದ ಹಿಂಬಡ್ತಿ ಭೀತಿಗೊಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಸೂಪರ್ ನ್ಯೂಮರರಿ ಕೋಟಾ ಮೂಲಕ ಹಿಂದಿನ ಹುದ್ದೆಯಲ್ಲೇ ಮುಂದುವರಿಯಲು ಅವಕಾಶವಾದಂತಾಗಿದೆ. ಇನ್ನೊಂದೆಡೆ ಅರ್ಹತೆ ಆಧಾರದ ಮೇಲೆ ಬಡ್ತಿ ಹೊಂದಲು ಕಾತುರರಾಗಿದ್ದ ಸಾವಿರಾರು ಮಂದಿ ಸಾಮಾನ್ಯ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರಿಗೂ ನ್ಯಾಯ ಒದಗಿಸಿದಂತಾಗಿದೆ. ಅರ್ಹತೆ ಆಧಾರದ ಮೇಲೆ ಅವರಿಗೂ ಬಡ್ತಿ ಅವಕಾಶ ಸಿಗಲಿದೆ.
ಬಡ್ತಿ ಮೀಸಲಾತಿ ಕಾಯ್ದೆ ರದ್ದುಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರಿಂದ ಹಿಂಬಡ್ತಿಯ ಆತಂಕ ಹೊಂದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿತ ಕಾಪಾಡಲು ಮತ್ತು ಅವರನ್ನು ಆ ಹುದ್ದೆಯಲ್ಲೇ ಮುಂದುವರಿಸಲು ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದಿತ್ತು. ಇದರನ್ವಯ ಕರ್ನಾಟಕ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೆಷ್ಠತೆಯನ್ನು ವಿಸ್ತರಿಸುವ ಕಾಯ್ದೆ ಜಾರಿಗೆ ಬಂದಿದೆ.
ನೂತನ ಕಾಯ್ದೆಯಂತೆ ಮೀಸಲು ಬಡ್ತಿ ಆಧಾರದ ಮೇಲೆ ಬಡ್ತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ತಾವು ಬಡ್ತಿ ಪಡೆದ ಹುದ್ದೆಯಲ್ಲೇ ಸೂಪರ್ ನ್ಯೂಮರರಿ ಕೋಟಾದಲ್ಲಿ ನಿವೃತ್ತರಾಗುವವರೆಗೆ ಮುಂದುವರಿಯಲಿದ್ದಾರೆ. ಅವರ ನಿವೃತ್ತಿ ನಂತರ ಆ ಹುದ್ದೆಗಳು ರದ್ದಾಗುತ್ತವೆ. ಮತ್ತೂಂದೆಡೆ ಮೀಸಲು ಬಡ್ತಿ ಕಾಯ್ದೆ ರದ್ದಾಗಿದ್ದರಿಂದ ಬಡ್ತಿಯ ಅನುಕೂಲ ಪಡೆದ ಮೀಸಲು ಸೌಲಭ್ಯ ರಹಿತ ನೌಕರರು (ಸಾಮಾನ್ಯ, ಹಿಂದುಳಿದ ಮತ್ತು ಅಲ್ಪಸಂಖ್ಯಾತ) ತಮ್ಮ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿಗೆ ಅರ್ಹರಾದಂತಾಗಿದೆ.
ಮತ್ತೆ ಮೀಸಲು ಬಡ್ತಿಗೆ ಹೊಸ ಕಾಯ್ದೆ ಬರಬೇಕು:
ಈ ಕಾಯ್ದೆ ಪ್ರಸ್ತುತ ಮೀಸಲು ಬಡ್ತಿ ಪಡೆದವರನ್ನು ಉಳಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ. ಮತ್ತೆ ಮೀಸಲು ಬಡ್ತಿ ನೀಡಲು ಅವಕಾಶವಿಲ್ಲ. ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಇತ್ತೀಚೆಗೆ ತಾನೇ ಕೇಂದ್ರ ಸರ್ಕಾರ ಹೊಸ ಕಾಯ್ದೆ ರೂಪಿಸಿದ್ದು, ಅದನ್ನು ಆಧರಿಸಿ ರಾಜ್ಯದಲ್ಲೂ ಹೊಸ ಕಾಯ್ದೆ ಜಾರಿಗೊಳಿಸಬೇಕಾಗುತ್ತದೆ.