Advertisement

ಕರಾವಳಿ: ಕೋವಿಡ್ ವೈರಸ್ ಹೊಸ ಪ್ರಕರಣವಿಲ್ಲ ; ಉಡುಪಿ: 84 ವರದಿಗಳು ನೆಗೆಟಿವ್‌

01:03 AM May 08, 2020 | Hari Prasad |

ಮಂಗಳೂರು/ಉಡುಪಿ/ಕಾಸರಗೋಡು: ಕರಾವಳಿ ಜಿಲ್ಲೆಗಳಲ್ಲಿ ಗುರುವಾರ ಹೊಸ ಕೋವಿಡ್ ವೈರಸ್ ಸೋಂಕು ಪ್ರಕರಣ ಪತ್ತೆಯಾಗದಿರುವುದು ಜನತೆಗೆ ತುಸು ಸಮಾಧಾನ ತಂದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸ್ವೀಕರಿಸಿದ 92 ಗಂಟಲ ದ್ರವ ಮಾದರಿಯ ವರದಿಗಳು ನೆಗೆಟಿವ್‌ ಬಂದಿವೆ.
ಪರೀಕ್ಷೆಗೆ ಕಳುಹಿಸಿದ ಒಟ್ಟು 272 ಗಂಟಲ ದ್ರವ ಮಾದರಿಗಳ ವರದಿ ಬರಲು ಬಾಕಿ ಇದ್ದು, ಈ ಪೈಕಿ ಗುರುವಾರ ಕಳುಹಿಸಿದ 147 ವರದಿಗಳೂ ಸೇರಿವೆ. 13 ಮಂದಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ಉಸಿರಾಟದ ಸಮಸ್ಯೆಗಾಗಿ ದಾಖಲಾಗಿದ್ದಾರೆ.

24 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದೆ. ಪ್ರಸ್ತುತ ಎನ್‌ಐಟಿಕೆಯಲ್ಲಿ 39 ಮಂದಿ ನಿಗಾವಣೆಯಲ್ಲಿದ್ದು, ಈ ಪೈಕಿ 11 ಮಂದಿ ಹೊಸದಾಗಿ ದಾಖಲಾದವರು. 3 ಮಂದಿಯನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಿಕೊಡಲಾಗಿದೆ. 40 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.

10 ಮಂದಿಯ ಆರೋಗ್ಯ ಸ್ಥಿರ
ವೆನ್ಲಾಕ್‌ ಆಸ್ಪತ್ರೆಯಲ್ಲಿ ಒಟ್ಟು 12 ಕೋವಿಡ್ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಲಶೇಖರ ನಿವಾಸಿ 80 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಬೋಳೂರಿನ 58 ವರ್ಷದ ಮಹಿಳೆಯು ಮೆದುಳಿನ ಸೋಂಕಿನಿಂದ ಬಳಲುತ್ತಿದ್ದು, ಐಸಿಯುನಲ್ಲಿ ಕೋವಿಡ್‌ ಚಿಕಿತ್ಸೆ ಪಡೆಯುತ್ತಿ ದ್ದಾರೆ. ಉಳಿದವರ 10 ಮಂದಿಯ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ಬಾಧಿತನ ಸಂಪರ್ಕ: ವ್ಯಕ್ತಿಗೆ ಕ್ವಾರಂಟೈನ್‌
ಹಳೆಯಂಗಡಿ: ಬೋಳಾರದ ವ್ಯಕ್ತಿಯೋರ್ವರಿಗೆ ಕೋವಿಡ್ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದ ಹಳೆಯಂಗಡಿ ಒಳಪ್ರದೇಶದ 41 ವರ್ಷದ ಯುವಕನನ್ನು ಸುರತ್ಕಲ್‌ನ ಎನ್‌ಐಟಿಕೆಯ ಕೋವಿಡ್ ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಗಂಟಲ ದ್ರವ ಮಾದರಿ ಪರೀಕ್ಷೆಯ ಪ್ರಥಮ ವರದಿ ನೆಗೆಟಿವ್‌ ಬಂದಿದೆ. ಮಂಗಳೂರಿನ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದ್ದ ಪಡುಪಣಂಬೂರು ಗ್ರಾ.ಪಂ.ನ ಬೆಳ್ಳಾಯರು ಗ್ರಾಮದ ನಿವಾಸಿಯೊಬ್ಬರು ತಮ್ಮ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

Advertisement

ಉಡುಪಿ: 84 ವರದಿಗಳು ನೆಗೆಟಿವ್‌
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಲಕ್ಷಣದ 84 ವರದಿಗಳು ಗುರುವಾರ ನೆಗೆಟಿವ್‌ ಬಂದಿವೆ. 80 ವರದಿಗಳು ಬರಲು ಬಾಕಿಯಿವೆ. ತೀವ್ರ ಉಸಿರಾಟದ ಸಮಸ್ಯೆಯುಳ್ಳ 7 ಮಂದಿ ಪುರುಷರು, ಓರ್ವ ಮಹಿಳೆ, ಫ್ಲ್ಯೂ ಜ್ವರ ಲಕ್ಷಣವುಳ್ಳ ಓರ್ವ ಪುರುಷ, ಮೂವರು ಮಹಿಳೆಯರು ಸಹಿತ ಒಟ್ಟು 12 ಮಂದಿ ರೋಗಿಗಳು ಗುರುವಾರ ಐಸೊಲೇಶನ್‌ ವಾರ್ಡ್‌ಗೆ ದಾಖಲಾಗಿದ್ದಾರೆ. 10 ಮಂದಿ ಐಸೊಲೇಶನ್‌ ವಾರ್ಡ್‌ನಿಂದ ಬಿಡುಗಡೆ ಹೊಂದಿದ್ದಾರೆ.  ತೀವ್ರ ಉಸಿರಾಟದ ಸಮಸ್ಯೆಯುಳ್ಳ 8 ಮಂದಿ, ಫ್ಲ್ಯೂ ಜ್ವರ ಲಕ್ಷಣದ 6 ಮಂದಿ, ಹಾಟ್‌ಸ್ಪಾಟ್‌ ಸಂಪರ್ಕದ 39 ಮಂದಿ ಸಹಿತ ಒಟ್ಟು 53 ಮಂದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. 103 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. 86 ಮಂದಿ 28 ದಿನಗಳ ನಿಗಾವಣೆ, 85 ಮಂದಿ 14 ದಿನಗಳ ನಿಗಾವಣೆ ಪೂರೈಸಿದ್ದಾರೆ.

ಕಾಸರಗೋಡು: ಮುಕ್ತಿ ಸನ್ನಿಹಿತ
ಜಿಲ್ಲೆಯಲ್ಲಿ ಸತತ ಏಳನೇ ದಿನವಾದ ಗುರುವಾರ ಕೂಡ ಹೊಸದಾಗಿ ಕೋವಿಡ್ ಸೋಂಕು ಪ್ರಕರಣ ದಾಖಲಾಗಿಲ್ಲ.
ಇದೇ ವೇಳೆ ಜಿಲ್ಲೆಯಲ್ಲಿ ಇಬ್ಬರು ಗುಣಮುಖರಾಗಿದ್ದು, ಓರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಚೆಂಗಳ ಪಂಚಾಯತ್ ‌(ವಾರ್ಡ್‌ ನಂ.17 ಮತ್ತು 18), ಚೆಮ್ನಾಡ್‌ ಪಂಚಾಯತ್‌(ವಾರ್ಡ್‌ ನಂ.22) ಮಾತ್ರವೇ ಹಾಟ್‌ಸ್ಪಾಟ್‌ ಯಾದಿಯಲ್ಲಿವೆ. ಜಿಲ್ಲೆಯಲ್ಲಿ ಒಟ್ಟು 178 ಮಂದಿ ಸೋಂಕು ಖಚಿತಗೊಂಡು ಆಸ್ಪತ್ರೆಗಳಿಗೆ ದಾಖಲಾಗಿದ್ದರು.

ಕೇರಳ: ಹೊಸ ಪ್ರಕರಣವಿಲ್ಲ
ಕೇರಳದಲ್ಲಿ ಸತತ ಎರಡನೇ ದಿನವಾದ ಗುರುವಾರ ಹೊಸದಾಗಿ ಕೋವಿಡ್ ಸೋಂಕು ಪ್ರಕರಣ ದಾಖಲಾಗಿಲ್ಲ. ಇದೇ ಸಂದರ್ಭ ಐವರು ಗುಣಮುಖರಾಗಿದ್ದು, ರಾಜ್ಯದಲ್ಲಿ ಕೇವಲ 25 ಮಂದಿ ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಈ ವರೆಗೆ 502 ಮಂದಿಗೆ ಸೋಂಕು ಬಾಧಿಸಿದ್ದು, 474 ಮಂದಿ ಗುಣಮುಖರಾಗಿದ್ದಾರೆ. ಮೂವರು ಸಾವಿಗೀಡಾಗಿದ್ದಾರೆ.

ರಾಜ್ಯದಲ್ಲಿ 16,693 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 16,383 ಮಂದಿ ಮನೆಗಳಲ್ಲೂ, 310 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಒಟ್ಟು 35,171 ಮಂದಿಯ ಸ್ಯಾಂಪಲ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 34,519 ಸ್ಯಾಂಪಲ್‌ಗ‌ಳು ನೆಗೆಟಿವ್‌ ಆಗಿವೆ.

15 ಕೇಸು ದಾಖಲು
ಲಾಕ್‌ಡೌನ್‌ ಉಲ್ಲಂಘನೆ ಆರೋಪದಲ್ಲಿ ಜಿಲ್ಲೆಯಲ್ಲಿ 15 ಕೇಸುಗಳನ್ನು ದಾಖಲಿಸಲಾಗಿವೆ. 38 ಮಂದಿಯನ್ನು ಬಂಧಿಸಲಾಗಿದೆ. 6 ವಾಹನಗಳನ್ನು ವಶಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2,072 ಕೇಸುಗಳನ್ನು ದಾಖಲಿಸಲಾಗಿದ್ದು, 2,671 ಮಂದಿಯನ್ನು ಬಂಧಿಸಲಾಗಿದೆ. 863 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next