Advertisement

ಜಿಲ್ಲಾ ಬಸ್‌ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮರಾಗಳೇ ಇಲ್ಲ!

09:57 PM Jan 24, 2020 | Lakshmi GovindaRaj |

ಚಿಕ್ಕಬಳ್ಳಾಪುರ: ನಿತ್ಯ ಈ ನಿಲ್ದಾಣಕ್ಕೆ 35 ಸಾವಿರದಿಂದ 40 ಸಾವಿರದಷ್ಟು ಪ್ರಯಾಣಿಕರು ಬಂದು ಹೋಗುತ್ತಾರೆ ಆದರೆ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳನ್ನು ಒಮ್ಮೆ ಇಣುಕಿ ನೋಡಿದರೆ ಬರೀ ಶೂನ್ಯ..

Advertisement

ಹೌದು ಬರೋಬರಿ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ರಾಜ್ಯದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ಎಂಬ ಹೆಗ್ಗಳಿಕೆ ಇದ್ದರೂ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಸಾರ್ವಜನಿಕ ಬಸ್‌ ನಿಲ್ದಾಣದಲ್ಲಿ ಮಾತ್ರ ಪ್ರಯಾಣಿಕರಿಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿರು ಬಸ್‌ ನಿಲ್ದಾಣದಲ್ಲಿ ಕನಿಷ್ಟ ಸಿ.ಸಿ. ಕ್ಯಾಮರಾಗಳ ಕಣ್ಗಾವಲು ಸಹ ಇಲ್ಲದಿರುವುದು ಪ್ರಯಾಣಿಕರಿಗೆ ಅಭದ್ರತೆ ಕಾಡುವಂತಾಗಿದೆ.

ಕ್ಯಾಮರಾ ಅಳವಡಿಕೆಗೆ ಮುಂದಾಗದ ಇಲಾಖೆ: ಎರಡು ದಿನಗಳ ಹಿಂದೆಯಷ್ಟೆ ಬಸ್‌ ನಿಲ್ದಾಣದಲ್ಲಿ ನಾಲ್ಕೈದು ಬ್ಯಾಗ್‌ಗಳು ನಿಲ್ದಾಣದಲ್ಲಿ ಹೇಳ್ಳೋರು ಕೇಳ್ಳೋರು ಇಲ್ಲದೇ ಅನಾಥವಾಗಿ ಬಿದ್ದು ಬಾಂಬ್‌ ಭೀತಿಯನ್ನು ಸೃಷ್ಟಿಸಿ ಪ್ರಯಾಣಿಕರಲ್ಲಿ ಅಲೋಲ್ಲ ಕಲ್ಲೋಲ ಸೃಷ್ಟಿ ಮಾಡಿ ಎಲ್ಲರೂ ನಿಲ್ದಾಣದಿಂದ ಓಡುವಂತೆ ಮಾಡಿದ್ದವು. ಇತಂಹ ಸಂದರ್ಭದಲ್ಲಿ ಆರೋಪಿಗಳ ಪತ್ತೆಗೆ ನೆರವಾಗುವ ಅಥವಾಅನುಮಾನಸ್ಪದ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ವಹಿಸಲು ಸಿ.ಸಿ. ಕ್ಯಾಮರಾಗಳು ಬಹುಮುಖ್ಯ. ಆದರೆ ಸಾರ್ವಜನಿಕ ಬಸ್‌ ನಿಲ್ದಾಣ ಉದ್ಘಾಟನೆಯಾಗಿ ನಾಲ್ಕೆçದು ವರ್ಷ ಕಳೆದರೂ ಇದುವರೆಗೂ ಸಿ.ಸಿ. ಕ್ಯಾಮರಾಗಳ ಅಳವಡಿಕೆ ಕೆಎಸ್‌ಆರ್‌ಟಿಸಿ ನಿಗಮಕ್ಕೆ ಸಾಧ್ಯವಾಗಿಲ್ಲ.

ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ: ಹೇಳಿ ಕೇಳಿ ಚಿಕ್ಕಬಳ್ಳಾಪುರ ಸಾರ್ವಜನಿಕ ಬಸ್‌ ನಿಲ್ದಾಣ ಆಂಧ್ರಕ್ಕೆ ಕೂಗಳತೆಯ ದೂರದಲ್ಲಿದೆ. ರಾಜ್ಯ ಸಾರಿಗೆ ನಿಗಮದ ಅಧಿಕಾರಿಗಳು ಹೇಳುವ ಪ್ರಕಾರ ನಿತ್ಯ ನಿಲ್ದಾಣಕ್ಕೆ ವಿವಿಧ ಊರುಗಳಿಂದ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ಪ್ರಯಾಣಿಕರು ಬಂದು ಹೋಗುತಾರೆ. ಚಿಕ್ಕಬಳ್ಳಾಪುರದಿಂದ ಹುಬ್ಬಳ್ಳಿ, ಧಾರವಾಡ, ತುಮಕೂರು, ಶಿರಾ, ಪುಟ್ಟಪರ್ತಿ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಮದನಪಲ್ಲಿ, ತಿರುಪತಿ ಹೀಗೆ ವಿವಿಧ ಕಡೆಗಳಿಗೆ ಸಂಪರ್ಕ ಜಾಲ ಇದೆ. ಆದರೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ನಿಲ್ದಾಣದಲ್ಲಿ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾದ ಸಾರಿಗೆ ಇಲಾಖೆ ಪ್ರಯಾಣಿಕರ ಟೀಕೆಗೆ ಗುರಿಯಾಗಿದೆ.

ಕಾಲೇಜು ವಿದ್ಯಾರ್ಥಿಗಳ ಟೈಂಪಾಸ್‌ ಸ್ಥಳ: ಜಿಲ್ಲೆಯ ವಿವಿಧ ತಾಲೂಕುಗಳಿಂದ ಜಿಲ್ಲಾ ಕೇಂದ್ರದ ವಿವಿಧ ಕಾಲೇಜುಗೆ ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜುಗಳಿಗೆ ಹೋಗದೇ ನಿಲ್ದಾಣದಲ್ಲಿಯೇ ಕಾಲ ಕಳೆಯುತ್ತಾರೆಂಬ ಆರೋಪ ಇದೆ. ಇದಕ್ಕೆಲ್ಲಾ ಕಾರಣ ನಿಲ್ದಾಣದಲ್ಲಿ ಸಿ.ಸಿ. ಕ್ಯಾಮರಾ ಸೇರಿದಂತೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದಿರುವುದೇ ಕಾರಣ ಎಂದು ಪ್ರಯಾಣಿಕರು ಆರೋಪ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಾವಿರಾರು ಪ್ರಯಾಣಿಕರು ಬಂದು ಹೋಗುವ ನಿಲ್ದಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯವುದೇ ಮುಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಪ್ರಯಾಣಿಕರ ಆತಂಕ, ಅಭದ್ರತೆಗೆ ಕಾರಣವಾಗಿದ್ದು, ಆದಷ್ಟು ಬೇಗ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತಿಕೊಂಡು ನಿಲ್ದಾಣಕ್ಕೆ ಅವಶ್ಯಕವಾದ ಸಿ.ಸಿ. ಕ್ಯಾಮರಾಗಳ ಜೊತೆಗೆ ಭದ್ರತಾ ಸಿಬ್ಬಂದಿ ನೇಮಿಸಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

Advertisement

ಇಡೀ ನಿಲ್ದಾಣಕ್ಕೆ ಒಬ್ಬ ಸೆಕ್ಯುರಿಟಿ ಗಾರ್ಡ್‌: ನಿತ್ಯ ನೂರಾರು ಬಸ್‌ಗಳ ಸಂಚಾರ ಇರುವ ಜಿಲ್ಲಾ ಕೇಂದ್ರದ ಬಸ್‌ ನಿಲ್ದಾಣಕ್ಕೆ ಅಂತಾರಾಜ್ಯ ಬಸ್‌ಗಳು ಸಹ ಬಂದು ಹೋಗುತ್ತವೆ. ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಮಹಿಳೆಯರು, ಕಾಲೇಜು ವಿದ್ಯಾರ್ಥಿನಿಯರ ಸಂಖ್ಯೆಯು ಹೆಚ್ಚಿರುತ್ತದೆ. ಆದರೆ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ನಿಲ್ಲಿಸಿ ಪ್ರಶ್ನಿಸಲು ಭದ್ರತಾ ಸಿಬ್ಬಂದಿ ಕೊರತೆ ಕೂಡ ಎದ್ದು ಕಾಣುತ್ತಿದೆ. ಆಂಧ್ರ, ತೆಲಂಗಾಣ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಜಿಲ್ಲೆಯಲ್ಲಿ ಹಾದು ಹೋಗಿದೆ. ಆದರೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಿರುವುದು ರಾಜ್ಯ ರಸ್ತೆ ಸಾರಿಗೆ ಇಲಾಖೆ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಆಗಿದೆ. ಇಡೀ ನಿಲ್ದಾಣದಕ್ಕೆ ಒಬ್ಬ ಮಾತ್ರ ಸೆಕ್ಯೂರಿಟಿ ಗಾರ್ಡ್‌ ಇದ್ದರೂ ಇಲ್ಲದಂತಾಗಿದೆ.

ಚಿಕ್ಕಬಳ್ಳಾಪುರ ಘಟಕ ವಿಭಾಗೀಯ ಘಟಕ ಆಗಿರುವುದರಿಂದ ಸಿ.ಸಿ. ಕ್ಯಾಮರಾಗಳ ಅಳವಡಿಕೆಯ ನಿರ್ಧಾರವನ್ನು ನಾವು ತೆಗೆದುಕೊಳ್ಳಲಾಗುವುದಿಲ್ಲ. ಹಲವು ನಿಲ್ದಾಣಗಳನ್ನು ಸೇರಿಸಿಕೊಂಡು ಸಿ.ಸಿ. ಕ್ಯಾಮರಾ ಅಳವಡಿಸಲು ಕೇಂದ್ರ ಕಚೇರಿಯಲ್ಲಿ ಟೆಂಡರ್‌ ಕರೆಯಬೇಕಿದೆ. ಕನಿಷ್ಟ ಹತ್ತು ಸಿ.ಸಿ. ಕ್ಯಾಮರಾಗಳ ಅಳವಡಿಸಬೇಕೆಂದು ಚಿಕ್ಕಬಳ್ಳಾಪುರ ಬಸ್‌ ನಿಲ್ದಾಣದಲ್ಲಿ ಈಗಾಗಲೇ ನಾವು ಸ್ಥಳ ಗುರುತಿಸಲಾಗಿದೆ. ಕೇಂದ್ರ ಕಚೇರಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ಟೆಂಡರ್‌ ತೆರೆದ ಕೂಡಲೇ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು.
-ವಿ.ಬಸವರಾಜ್‌, ವಿಭಾಗೀಯ ನಿಯಂತ್ರಣಾಧಿಕಾರಿ ಕೆಎಸ್‌ಆರ್‌ಟಿಸಿ

ಚಿಕ್ಕಬಳ್ಳಾಪುರ ನಗರದ ಸಾರ್ವಜನಿಕ ಬಸ್‌ ನಿಲ್ದಾಣ ಜಿಲ್ಲಾ ಕೇಂದ್ರದ ಬಸ್‌ ನಿಲ್ದಾಣ ಆಗಿದ್ದು ಸಾವಿರಾರು ಸಂಖ್ಯೆಯಲ್ಲಿ ನಿತ್ಯ ಪ್ರಯಾಣಿಕರು ಬಂದು ಹೋಗುವುದರಿಂದ ರಾಜ್ಯ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕಿದೆ. ನಿಲ್ದಾಣದಲ್ಲಿ ಕನಿಷ್ಟ ಅನುಮಾನಸ್ಪದ ವ್ಯಕ್ತಿಗಳನ್ನು ಹಾಗೂ ಪ್ರಯಾಣಿಕರು ತರುವ ವಸ್ತುಗಳನ್ನು ತಪಾಸಣೆ ಒಳಪಡಿಸುವ ಕೆಲಸ ಮಾಡಬೇಕು.
-ಸುನೀಲ್‌ ಕುಮಾರ್‌, ಪ್ರಯಾಣಿಕ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next