Advertisement

UV Fusion: ಬದುಕಿನ ಸಂತೆಯೊಳಗೆ ನಾನಾ ಮುಖಗಳ ಬೇಗೆ..

02:22 PM Aug 21, 2024 | Team Udayavani |

ಬದುಕಿನ ಸಂತೆಯೊಳಗೆ ಅನೇಕರು ಎದುರಾಗುತ್ತಾರೆ. ಸಮಾಜದ ಒಂದು ಭಾಗವಾದ ನಾವು ವಿಭಿನ್ನ ವ್ಯಕ್ತಿತ್ವ, ವಿವಿಧ ಅಭಿರುಚಿ, ವಿಚಿತ್ರ ಭಾವಗಳು.. ಹೀಗೆ ನಾನಾತರದ ವೈಚಿತ್ಯದಿಂದ ಕೂಡಿದ ಪರಿಸರದೊಳಗೆ ಇಷ್ಟವಿಧ್ದೋ ಇಲ್ಲದೆಯೋ ಬದುಕಲೇಬೇಕಾಗುತ್ತದೆ. ಅನಿವಾರ್ಯತೆ ಮತ್ತು ಅವಶ್ಯಕತೆಗಳು ಕೆಲವೊಂದಕ್ಕೆ ಹೊಂದಿಕೊಳ್ಳಲೆ ಬೇಕಾದ ಸಂಧರ್ಭ ಸೃಷ್ಟಿಸುತ್ತವೆ. ಹೀಗೆ ಸಾಗುವ ಹಾದಿಯಲ್ಲಿ ಕೆಲವರು ಪರಿಚಿತರಾಗುತ್ತಾರೆ, ಕೆಲವು ಪರಿಚಿತರು ಅಪರಿಚಿತರಾಗಿ ಕಣ್ಮರೆಯಾಗುತ್ತಾರೆ. ಒಂದಷ್ಟು ಮನಗಳು, ಗುಣಗಳು ಹೃದಯಕ್ಕೆ ಬೇಗನೆ ಹತ್ತಿರವಾಗಿಬಿಡುತ್ತವೆ. ಮತ್ತೆ ಕೆಲವು ಹೊಸ್ತಿಲಲ್ಲೇ ಉಳಿದುಬಿಡುತ್ತವೆ. ಮತ್ತೂಂದಷ್ಟು ಸಂಬಂಧಗಳು ಪರಿವಾರವೆಂದೊ ಅಥವಾ ಮತ್ಯಾವುದೋ ಹೆಸರಿನಲ್ಲಿಕಾರಣ ನಿಮಿತ್ತ ಬದುಕಿನೊಳಗೆ ತೂರಿಕೊಂಡಿರುತ್ತವೆ.

Advertisement

“ಅಯ್ಯೋ ವಯಸ್ಸಾಯ್ತುಇನ್ಯಾವಾಗ ಮದುವೆ ? ಜೀವನದಲ್ಲಿ ಏನು ಸಾಧಿಸಬೇಕೆಂದಿದ್ದಿ ಇನ್ನೂ ? ನೀನ್ಯಾಕೆ ಹೀಗೆ ಯಾರೊಂದಿಗೂ ಮಾತನಾಡದೆ ಮೂಲೆ ಹಿಡಿದು ಕೂರುತ್ತಿ..? ಮಕ್ಕಳಾಯ್ತಾ ? ನನ್ನ ಮಗ ಪರೀಕ್ಷೆಲಿ ಫಸ್ಟ್ ರ್ಯಂಕ್‌ ಬಂದಾಯ್ತು. ನಿಮ್ಮ ಮಗ ಪಾಸ್‌ ಆದ್ನ? ” ಹೀಗೆ ಅರ್ಥವಿಲ್ಲದ ಪ್ರಶ್ನೆಗಳನ್ನು ಕೇಳಿ ನೆಮ್ಮದಿ ಕೆಡಿಸುವ ಮನಸ್ಥಿತಿಗಳು ಎದುರಾಗುತ್ತವೆ.

ಕೆಲವೊಮ್ಮೆ ಎದುರಾಗುವ ಇಂತ ಪ್ರಶ್ನೆಗಳು ನಮ್ಮೊಳಗಿನ ಉತ್ಸಾಹ ಮತ್ತು ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾಡುತ್ತವೆ. “ಹಾಗೆ ಇನ್ನೊಬ್ಬರ ಮಾತಿಗೆ ತಲೆ ಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವು ಮುಂದೆ ಸಾಗೋಣ ” ಎನ್ನುವ ಗಟ್ಟಿ ಮನಸ್ಥಿತಿ ಎಲ್ಲೋ ಕೆಲವರಿಗೆ ಮಾತ್ರ ಇರುತ್ತದೆ. ಇನ್ನ ಎಷ್ಟೋ ಜನ ಸಮಾಜದ ಬಿರುನುಡಿಗಳಿಗೆ ಸೋತು, ಏನೋ ಕಳೆದುಕೊಂಡವರಂತೆ ಜೀವನವನ್ನೇ ಅವಸಾನದ ಹಾದಿಗೆ ಇಳಿಸಿಕೊಂಡವರಿದ್ದಾರೆ.

ಕೆಲವರಿಗೆ ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರು ಕಂಡವರ ತಟ್ಟೆಯಲ್ಲಿ ನೊಣ ಹುಡುಕುವ ಚಾಳಿ. ಅಂತವರ ಮಾತನ್ನು ಅತಿಯಾಗೆ ಹಚ್ಚಿಕೊಂಡರೆ ನಾವು ಹುಚ್ಚಾಸ್ಪತ್ರೆಯಲ್ಲಿ ಬೆಡ್‌ ರಿಸರ್ವ್‌ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದನ್ನು ಅರಿಯಬೇಕಾದದ್ದು ಇಲ್ಲಿ ಅತೀ ಜರೂರಿನ ವಿಷಯ..!

ಎಲ್ಲರಿಗೂ ನಾವು ನಮ್ಮ ಮರುಉತ್ತರದ ಮೂಲಕವೇ ಅಥವಾ ನಮ್ಮನ್ನ ಸಮರ್ಥಿಸಿಕೊಂಡು ಎದುರಿನವರಿನ ಬಾಯಿ ಮುಚ್ಚಿಸುವ ಅವಶ್ಯಕತೆ ಇಲ್ಲ. ಅಂದುಆಡುವವರಿಗೆ ನಾವು ಪಾಸಿಟಿವ್‌ ಎನ್ನಿಸುವ ಅತ್ಯದ್ಭುತ ಜೀವನ ಶೈಲಿ ರೂಢಿಸಿಕೊಂಡು ಜೀವಿಸುವುದ ಕಲಿತರೆ ಸಾಕು. ಅದೇ ಎಲ್ಲರನ್ನು ಸುಮ್ಮನಾಗಿಸುತ್ತದೆ. ನಮ್ಮದೇ ವೈಯಕ್ತಿಕ ಸಮಸ್ಯೆ ಗೊಂದಲಗಳ ಜೊತೆ ಸೆಣೆಸುತ್ತ ಬದುಕಿನ ಗಮ್ಯದ ಹುಡುಕಾಟದ ಜತೆಗೆ ಒಂದಷ್ಟು ಮಾನಸಿಕ ನೆಮ್ಮದಿ ಸ್ಥಾಪಿಸಿಕೊಳ್ಳಲು ಹೋರಾಡುತ್ತಿರುತ್ತೇವೆ.

Advertisement

ಆ ಹೋರಾಟದ ನಡುವೆಯೂ ದಕ್ಕುವ ಸಣ್ಣ ಸಣ್ಣ ಖುಷಿಗಳನ್ನು ಆಸ್ವಾದಿಸುತ್ತ, ಸಿಹಿ ಕ್ಷಣಗಳನ್ನು ಹೃದಯದ ಜೋಳಿಗೆಗೆ ಪೇರಿಸಿಕೊಳ್ಳುವ, ಬೇಸರವೆನಿಸಿದಾಗ ಮೆಲುಕು ಹಾಕುತ್ತ ಮುಂದೆ ಮುಂದೆ ಸಾಗುವತ್ತ ಗಮನವಿಟ್ಟರೆ ಬದುಕು ಖಂಡಿತ ಆಪ್ಯಾಯವಾಗುವುದರಲ್ಲಿ ಸಂದೇಹವಿಲ್ಲ.

ಮಲಗಿದೋದುಗನ ಕೈಹೊತ್ತಗೆಯು ನಿದ್ದೆಯಲಿ ಕಳಚಿ ಬೀಳ್ವುದು; ಪಕ್ವಫಲವಂತು ತರುವಿಂ ಇಳೆಯ ಸಂಬಂಧಗಳು ಸಂಕಲ್ಪನಿಯಮಗಳು ಸಡಿಲವುವು ಬಾಳ್‌ ಮಾಗೆ ಮಂಕುತಿಮ್ಮ- ಎಂಬ ಕಗ್ಗದ ಮಾತಿನಂತೆ ಇಲ್ಲಿ ಎಲ್ಲರೂ ಅವರವರ ನಿಲ್ದಾಣ ಬಂದಾಗ ಇಳಿದು ಹೋಗುತ್ತಾರೆ. ಜೀವನದ ಹಾದಿಯಿದು ನಿರಂತರ ಅನುಭವಗಳ ಪ್ರವಾಹ. ಆ ಅನುಭವಗಳಿಂದ ಪಾಠ ಕಲಿತು ಪಕ್ವವಾಗುತ್ತ ಸಾಗಿದರೆ, ದೇಹದ ಜೊತೆ ಮನವೂ ಮಾಗಿದರೆ ಬದುಕಿನ ಪಾಕ ದೇವನಿಗೆ ನೈವೇದ್ಯವಾಗೊ ಘಮಿಸುವ ಸಿಹಿ ರಸಾಯನವಾಗುತ್ತದೆ ಅಲ್ಲವೇ..?

-ಪಲ್ಲವಿ ಚೆನ್ನಬಸಪ್ಪ

ವಿಜಾಪುರ

Advertisement

Udayavani is now on Telegram. Click here to join our channel and stay updated with the latest news.

Next