Advertisement

UV Fusion: ಕಥೆಯಲ್ಲಿ ಕಥೆಯಾದವಳ ಕಥೆ

09:35 PM Sep 10, 2024 | Team Udayavani |

ಮುಗ್ಧ ಮನಸ್ಸಿನ ಹುಡುಗಿ ಸಾಕ್ಷಿ. ಎಲ್ಲದರಲ್ಲೂ ತುಂಬಾ ಚುರುಕು. ಹಾಡುವುದಕ್ಕೂ ಸೈ, ಬರೆಯುವುದಕ್ಕೂ ಸೈ. ಓದುವುದರಲ್ಲೂ ಸದಾ ಮುಂದು. ಕಾಲೇಜು, ಪ್ರಾಧ್ಯಾಪಕರು, ಫ್ರೆಂಡ್ಸ್ ಇಷ್ಟೇ ಅವಳ ಪ್ರಪಂಚ. ಪಿಯುಸಿ ವಿದ್ಯಾಭ್ಯಾಸ ಮುಗಿಸಿ ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ವ್ಯಾಸಂಗ ಆರಂಭಿಸುತ್ತಾಳೆ. ಸಾಕ್ಷಿಯ ಕನಸಿಗೆ ರೆಕ್ಕೆ ಬಂದಂತಾಗುತ್ತದೆ. ಏಕೆಂದರೆ ಅದೆಷ್ಟೋ ಹೊಸ ವಿಷಯಗಳನ್ನು ಕಲಿಯಲು ಅವಕಾಶ ಸಿಗುತ್ತದೆ.

Advertisement

ಕಾಲೇಜಿನಲ್ಲಿ ಸಾಕ್ಷಿಗಾಗಿ ಇರುವ ಮೂರು ಜೀವ ಅವಳ ಜೂನಿಯರ್ಸ್‌. ಸ್ವಂತ ಅಕ್ಕ ಅನ್ನುವುದಕ್ಕಿಂತ ಮಗುವಿನ ತರ ನೋಡಿಕೊಳ್ಳೋ ಮಕ್ಕಳು. ಇವಳ ಪ್ರತಿ ಯಶಸ್ಸನ್ನು ಇವಳಿಗಿಂತ ಜಾಸ್ತಿ ಸಂಭ್ರಮಿಸುವ ಮುಗ್ಧ ಮನಸ್ಸು ಅವರದು. ಹಾಸ್ಟೆಲ್‌ ಅಲ್ಲೇ ಇರುವ ಆ ಮಕ್ಕಳಿಗೆ ಈ ಅಕ್ಕನನ್ನು ನೋಡಿದ್ರೆ ಅಮ್ಮನ ನೋಡಿದ ಹಾಗೆ ಆಗುವುದು. ಸಾಕ್ಷಿಯ ಮನೆಯ ತಿಂಡಿ ತಿನಿಸುಗಳು ಅವರಿಗೆ ಅಚ್ಚು ಮೆಚ್ಚು. ಪ್ರತಿ ವರ್ಷದ ಪರೀಕ್ಷಾ ಸಮಯದಲ್ಲಿ ಯಾವುದಾದರೂ ಒಂದು ದೇವಸ್ಥಾನಕ್ಕೆ ತಪ್ಪದೇ ಹೋಗುವುದು ಇವರ ಹವ್ಯಾಸ ಎಂದೇ ಹೇಳಬಹುದು.

ಇಷ್ಟೇ ಅಲ್ಲದೆ ಏನೇ ತೊಂದರೆಯಾದರೂ, ಸಮಸ್ಯೆಯಾದರೂ ಪರಿಹಾರ ನೀಡುವ, ಸಾಕ್ಷಿಯನ್ನು ಪ್ರೋತ್ಸಾಹಿಸಿ ಹುರಿದುಂಬಿಸುವ ಪುಟ್ಟ ಸೀನಿಯರ್ಷ್‌ ಗುಂಪು. ಇವರೆಲ್ಲರ ಜೊತೆ ಸಂತಸದಿಂದಲೆ ಸಾಗುತಿತ್ತು ಸಾಕ್ಷಿಯ ಪಯಣ.

ಎಲ್ಲದು ಒಳ್ಳೆಯದೇ ಆದರೆ ಕತೆ ಸಪ್ಪೆ ಆಗಬಹುದು ಅಲ್ವಾ? ಕತೆಯಲ್ಲಿ ಟ್ವಿಸ್ಟ್‌ ಇರಲೇಬೇಕು ಏನಂತೀರಾ? ಎಲ್ಲ ಕತೆಯಲ್ಲೂ ವಿಲನ್‌ ಇರ್ತಾರೆ. ಹಾಗೆಯೇ ಸಾಕ್ಷಿಯ ಬದುಕಲ್ಲಿ ಅವಳ ಕುಟುಂಬದವರು, ಅಕ್ಕ ಪಕ್ಕದ ಮನೆಯವರೇ ವಿಲನ್‌. ಅವಳ ಏಳಿಗೆಯನ್ನು ಸಹಿಸಲಾಗದೆ ಏನೇನೋ ಗಾಳಿ ಸುದ್ಧಿ ಹಬ್ಬಿಸಲು ಆರಂಭಿಸುತ್ತಾರೆ. ಕಾಲೇಜಿಗೆ ರಜೆ ಇದ್ದರೂ ಓದಲು ಕಾಲೇಜಿಗೆ ಹೋಗುವ ಸಾಕ್ಷಿ ಲೈಬ್ರರಿಗೆ ಹೋಗುತ್ತಾಳಾ? ಅಥವಾ ಇನ್ಯಾರದೋ ಜೊತೆಯಲ್ಲಿ ಸುತ್ತುತ್ತಾಳಾ! ಹೀಗೆ ಏನೇನೋ  ಹರ ಡಿ ಸುತ್ತಾರೆ. ಮಗಳ ಮೇಲಿನ ನಂಬಿಕೆಗಿಂತ ಬೇರೆಯವರ ಮಾತಿನ ಮೇಲೆ ನಂಬಿಕೆ ಹೆಚ್ಚು ಸಾಕ್ಷಿಯ ಮನೆಯವರಿಗೆ. ಸಾಕ್ಷಿಯ ಪ್ರತಿ ಕೆಲಸವನ್ನು ವಿರೋಧಿಸಲು ಆರಂಭಿಸುತ್ತಾರೆ. “ನಿನ್ನ ಕಾರಣದಿಂದ ಎಲ್ಲರಿಗೂ ಉತ್ತರ ಕೊಡಲು ನಮ್ಮಿಂದ ಸಾಧ್ಯವಿಲ್ಲ. ಮನೆಯಲ್ಲೇ ಇರು, ಎಲ್ಲಿಗೂ ಹೋಗುವುದು ಬೇಡ” ಎಂದು ಬೈಯುತ್ತಾರೆ.

ಇದರಿಂದ ಸಾಕ್ಷಿ ಹಲವಾರು ಸ್ಪರ್ಧೆಗಳಿಗೆ ಹೋಗುವ ಅವಕಾಶಗಳನ್ನು ಕಳೆದುಕೊಳ್ಳುತ್ತಾಳೆ. ಅವಳ ಹಲವು ಲೇಖನಗಳಿಗೆ ಬಹುಮಾನ ಬಂದರೂ ದೂರದ ಊರಿನಲ್ಲಿ ಕಾರ್ಯಕ್ರಮ ಇರುವುದರಿಂದ ಸಾಕ್ಷಿಯನ್ನು ಕಳಿಸುತ್ತಲೆ ಇರಲಿಲ್ಲ ಅವಳ ಹೆತ್ತವರು. ಇದು ಅವಳ ಮೇಲಿನ ಪ್ರೀತಿಯೋ? ಭಯವೋ? ನಂಬಿಕೆಯ ಪ್ರಶ್ನೆಯೋ ಸಾಕ್ಷಿಗೆ ಅರ್ಥವಾಗಲಿಲ್ಲ. ಯಾರ್ಯಾರ ಜೊತೆಯಲ್ಲಿ ಸುತ್ತಾಟ ಮಾಡುತ್ತಿದ್ದರೆ ಅಷ್ಟು ಒಳ್ಳೆ ಅಂಕ ಮಗಳಿಗೆ ಬರಲು ಸಾಧ್ಯನಾ ಎಂಬ ಅರಿವು ಮನೆಯವರಿಗೆ ಇರಲಿಲ್ಲ.

Advertisement

ಕಾಲೇಜಿನಲ್ಲಿ ಎಲ್ಲರ ಮೆಚ್ಚಿನ ವಿದ್ಯಾರ್ಥಿನಿ. ಎಲ್ಲರೂ ಮಗಳಂತೆ ಕಾಣುವ ಸಾಕ್ಷಿ ಮನೆಯಲ್ಲೇ ಮಗಳಾಗಲಿಲ್ಲ. ಅವರ ನಂಬಿಕೆಯನ್ನು ಗಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ಚಾಡಿಕೋರರಿಂದ ಅವಳ ವ್ಯಕ್ತಿತ್ವದ ಕುರಿತು ಪ್ರಶ್ನೆ ಬರುತ್ತದೆ. ಸಾಕ್ಷಿಯ ನಡವಳಿಕೆ, ಮಾತು, ಬರವಣಿಗೆ, ಕಲೆಯನ್ನು ನೋಡಿ ಶಿಕ್ಷಕರು ಎಷ್ಟೇ ಹೆಮ್ಮೆ ಪಟ್ಟರೂ ಮನೆಯವರಿಂದ ಏನೂ ಪ್ರತಿಕ್ರಿಯೆ ಇಲ್ಲ ಎಂಬ ಬೇಸರ ಸಾಕ್ಷಿಗೆ. ಎಲ್ಲಿಗೂ ಹೋಗಬಾರದು, ಹುಡುಗರ ಜೊತೆ ಮಾತಾಡಬಾರದು, ಫೋಟೋ ತೆಗೆದುಕೊಳ್ಳಬಾರದು. ಅವರು ಏನು ಅಂದುಕೊಳ್ಳುವರೋ? ಇವರು ಏನು ಅಂದುಕೊಳ್ಳುವರೋ ಎಂದು ಸಮಾಜಕ್ಕೆ ಹೆದರಿ ಮಗಳನ್ನು ಕಟ್ಟಿ ಹಾಕುವ ಪ್ರಯತ್ನ ಮನೆಯವರದು. ಎಲ್ಲರ ಕುರಿತು ಕತೆ ಬರೆಯುವ ಅವಳ ಬದುಕೇ ಕಥೆಯಾಯಿತು…

-ರಶ್ಮಿ ಉಡುಪ ಮೊಳಹಳ್ಳಿ

ಡಾ| ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next