Advertisement

Teacher: ನಾನೂ ಟೀಚರ್‌ ಆದೆ..

02:44 PM Sep 12, 2024 | Team Udayavani |

ಬಾಲ್ಯದಿಂದಲೂ ನನಗೆ ಶಿಕ್ಷಕಿ ಆಗಬೇಕೆಂಬ ಆಸೆ ದೃಢವಾಗಿ ಬೆಳೆದಿತ್ತು. ಚಿಕ್ಕವಳಿದ್ದಾಗ ಹಲವು ಬಾರಿ ಸ್ನೇಹಿತರೊಂದಿಗೆ ಸೇರಿ ಮನೆಯಲ್ಲೇ ಸಣ್ಣ ತರಗತಿಯನ್ನು ಕಟ್ಟಿ, ಗೊಂಬೆಗಳನ್ನು ರಾಶಿ ಹಾಕಿ, ಅಮ್ಮನ ಹಳೆಯ ಶಾಲನ್ನು ಸೀರೆಯಂತೆ ಧರಿಸಿ, ರಾಶಿ ಹಾಕಿದ ಗೊಂಬೆಗಳೇ ಮಕ್ಕಳೆಂದು ನೆನೆದು ಅವುಗಳಿಗೆ ಪಾಠ ಮಾಡುತ್ತಿದ್ದ ದಿನಗಳ ಮೆಲಕು ಹಾಕಿದರೆ ತುಟಿಯಂಚಿನಲ್ಲಿ ಸಣ್ಣ ಮುಗುಳ್ನಗೆ ಮೂಡುತ್ತದೆ.

Advertisement

ಇವುಗಳಿಗೆಲ್ಲ ಪ್ರೇರಣೆಯಾದದ್ದು ನನ್ನ ಪ್ರಾಥಮಿಕ ಶಾಲೆಯ ಶಿಕ್ಷಕರು, ಅವರು ಪಾಠವನ್ನು ಬೋಧಿಸುತ್ತಿದ್ದ ಶೈಲಿ, ಮಕ್ಕಳೊಂದಿಗಿನ  ಒಡನಾಟ, ಎಲ್ಲವೂ ನನ್ನ ಮೇಲೆ ಅಪಾರ ಪ್ರಭಾವ ಬೀರಿತು. ಶಿಕ್ಷಕ ವೃತ್ತಿ ಎಂದರೆ ಅದೊಂದು ಸುಲಭದ ಕೆಲಸ, ಮಕ್ಕಳಿಗೆ ಪಠ್ಯಪುಸ್ತಕದಲ್ಲಿರುವುದನ್ನು ಬೋಧಿಸಿ ಸ್ವಲ್ಪ ಹೋಂವರ್ಕ್‌ ಕೊಟ್ಟು ಬಿಟ್ಟರೆ ಸಾಕು ,ಅಂತ ತಲೆ ಹೋಗೋ ವಿಷ್ಯ ಏನಿಲ್ಲ ಅಂದುಕೊಂಡಿದ್ದ ನನಗೆ ,ಶಿಕ್ಷಕ ವೃತ್ತಿ ನಾನೊಂದು ಕೊಂಡಷ್ಟು ಸುಲಭವಲ್ಲವೆನಿಸಿದ್ದು ಇಂಟರ್ನ್ಶಿಪ್‌ ಸಂದರ್ಭದಲ್ಲಿ.

ಹೌದು! ದ್ವಿತೀಯ ಬಿ.ಎ ವಾರ್ಷಿಕ ಪರೀಕ್ಷೆ ಮುಗಿಸಿ, ಇನ್ನೇನು ಮಾಡುವುದು? ಎಂದು ಯೋಚಿಸಿದಾಗ ಮನಸ್ಸಿಗೆ ಬಂದಂತಹ ವಿಚಾರ ಇಂಟರ್ನ್ಶಿಪ್‌  ಮಾಡಿದರೆ  ಹೇಗೆ ಎನ್ನುವ ಯೋಚನೆ .ಮೊದಲೇ ಭವಿಷ್ಯದಲ್ಲಿ ಶಿಕ್ಷಕಿಯಾಗಬೇಕೆಂದು ಬಯಸಿದ್ದ ನನಗೆ ಇದೊಂದು ರೀತಿಯ ಸುವರ್ಣಾವಕಾಶವೆಂದರಿತು.

ಉಜಿರೆಯಿಂದ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡಿಗೆ ಕಾಲಿಟ್ಟೆ. ಅದು ನಾನು ಕಲಿತ ಶಾಲೆ, ಆ ಶಾಲೆಗೆ ಪುನಃ ಪ್ರವೇಶಿಸುವುದು ನನಗೆ ಒಂದು ರೀತಿಯಲ್ಲಿ ಸಂತೋಷದಾಯಕವೆನಿಸಿತ್ತು. ಹಳೆಯ ಗುರುಗಳು, ನನ್ನ ಕ್ಲಾಸೆ¾àಟ್ಸ… ಮತ್ತು ನಾನು ಓದಿದ ಶಾಲೆಯ ಕೊಠಡಿಗಳು ಎಲ್ಲವೂ ನೆನಪಾಗಿ, ನೆನಪಿನ ಪುಟವನ್ನು ಹಿಂದಿರುಗಿಸಿ ನೋಡಿದಂತೆ ಭಾಸವಾಯಿತು.

5ನೇ ತರಗತಿಯಲ್ಲಿದ್ದಾಗ ಮಾವಿನಕಾಯಿ ಕದ್ದು ತಿಂದು ಟೀಚರ್‌ ಕೈಯಿಂದ ಪೆಟ್ಟು ತಿಂದಿದ್ದು. ಪ್ರತಿಭಾ ಕಾರಂಜಿಯಲ್ಲಿ ಜಾನಪದ ನೃತ್ಯದಲ್ಲಿ ಪ್ರಥಮ ಬಹುಮಾನ ಪಡೆದು ಪೆಟ್ಟು ತಿಂದ ಟೀಚರ್‌ ಕೈಯಲ್ಲೇ “ಭೇಷ್‌! ಎನಿಸಿಕೊಂಡಿದ್ದು. ಹೀಗೆ ನಾವು ಮಾಡಿದ್ದ ತರಲೆ ,ತುಂಟಾಟಗಳು ಹಾಗೆಯೇ ಕಣ್ಣ ಮುಂದೆ ಬಂದು ಮೆಲ್ಲನೆ ಮರೆಯಾದಂತಾಯಿತು. ಸಮಯ ಅದೆಷ್ಟು ಬೇಗ ಕಳೆದು ಹೋಗುತ್ತದೆ ಅಲ್ವಾ ?

Advertisement

ಇಂಟರ್ನ್ಶಿಪ್‌ ಮೊದಲ ದಿನದಿಂದಲೇ ತುಂಬಾ ಉತ್ಸಾಹದಿಂದ ಕೂಡಿದ್ದೆ, ಮನಸಿನಂತರಾಳದಲ್ಲಿ ಸ್ವಲ್ಪಮಟ್ಟಿಗೆ ಭಯವಿದ್ದರೂ ಅದನ್ನು ಹೊರಗಿನ ಪ್ರಪಂಚಕ್ಕೆ ಗೊತ್ತಾಗದ ರೀತಿಯಲ್ಲಿ ಹೇಗೋ ಮ್ಯಾನೇಜ್‌ ಮಾಡಿಕೊಳ್ಳುತ್ತಿದ್ದೆ.

ಮಕ್ಕಳೊಂದಿಗೆ ಪರಿಚಯವನ್ನು ಬೆಳೆಸಲು ಪರಿಚಯಾತ್ಮಕ ಚಟುವಟಿಕೆಗಳನ್ನು ನಡೆಸಿದೆ. ಮಕ್ಕಳ ಹೆಸರು, ಅವರ ಹವ್ಯಾಸಗಳು ಮತ್ತು ಅವರು ಬಯಸುವ ವಿಷಯಗಳನ್ನು ತಿಳಿಯುವ ಮೂಲಕ ಅವರೊಂದಿಗೆ ಸ್ನೇಹ ಭಾವ ಬೆಳೆಸಿದೆ .ನಾನು ಕಲಿತ ಶಿಕ್ಷಕರ ಪಾಠಗಳು ಅವರ ಬೋಧನಾ ತಂತ್ರಗಳು ಮತ್ತು ಅವರು ನನ್ನ ಮೇಲೆ ತೋರಿಸುತ್ತಿದ್ದ ಪ್ರೀತಿ ನೆನಪಿಗೆ ಬಂತು ,ನಾನು ಬೋಧಿಸುತ್ತಿದ್ದ ಸಮಯದಲ್ಲಿ ನನಗೆ ನನ್ನ ಗುರುಗಳು ಹೇಗೆ ಬೋಧಿಸುತ್ತಿದ್ದರು ಎಂಬುದನ್ನು ಹೃದಯವಂತರಾಳದಲ್ಲಿ ಮೆಲಕು ಹಾಕಿದೆ .

ನಲಿಕಲಿ, 5ನೇ ತರಗತಿ ಮತ್ತು 7ನೇ ತರಗತಿಯ ಕನ್ನಡ ಪಾಠ ಮಾಡುತ್ತಿದ್ದ ನನಗೆ ಐದನೇ ಮತ್ತು ಏಳನೇ ತರಗತಿ ಮಕ್ಕಳನ್ನು ನಿಭಾಯಿಸುವುದೇನೂ ಕಷ್ಟಕರವೆನಿಸುತ್ತಿರಲಿಲ್ಲ ಆದರೆ ನಲಿಕಲಿ ಮಕ್ಕಳನ್ನು ಸಂಬಾಳಿಸುವ ಹೊತ್ತಿಗೆ ನನ್ನ ಜೀವ ಬಾಯಿಗೆ ಬರುತ್ತಿತ್ತು. ಒಬ್ಬರೇ ಒಬ್ಬರು ಹೇಳಿದ ಹಾಗೆ ಕೇಳುತ್ತಿರಲಿಲ್ಲ, ಅವರನ್ನೆಲ್ಲ ಒಟ್ಟುಗೂಡಿಸಿ ಪಾಠ ಹೇಳಿಕೊಡುವಷ್ಟರಲ್ಲಿ’ ಸಾಕು ಸಾಕಪ್ಪ, ದೇವರೇ” ಎಂದನಿಸುತ್ತಿತ್ತು.

ಶಿಕ್ಷಕರೆಂದರೆ ಕೇವಲ ಪಠ್ಯ ಬೋಧಸಿ ಸ್ವಲ್ಪ ಹೋಂವರ್ಕ್‌ ಕೊಟ್ಟರೆ ಅವರ ಕೆಲಸ ಮುಗಿಯಿತು ಎಂದು ತಿಳಿದಿದ್ದ ನನಗೆ ,ಈ 10 ದಿನಗಳಲ್ಲಿ ನಲಿ-ಕಲಿ ಮಕ್ಕಳು ಶಿಕ್ಷಕ ವೃತ್ತಿಯ ನಿಜ ದರ್ಶನ ಮಾಡಿಬಿಟ್ಟಿದ್ದರು. ಇದರ ಮಧ್ಯೆ ನನಗೆ ಸಮಸ್ಯೆ ಎಂದು ಕಾಡಿದ ಒಂದೇ ಒಂದು ವಿಚಾರವೆಂದರೆ ಸೀರೆ ಉಡುವುದು .10  ದಿನಗಳ ಕಾಲ ಅದು ಹೇಗೋ ಅಮ್ಮನಿಂದ” ಇಷ್ಟು ದೊಡ್ಡವಳಾದ್ರೂ ಸೀರೆ ಉಡ್ಲಿಕ್ಕೆ ಬರುದಿಲ್ವಾ”ಅನ್ನೋ ಶುಭ ವಾರ್ತೆ ಕೇಳಿ ಹರಸಾಹಸ ಪಟ್ಟು ಸೀರೆಯುಡುತ್ತಿದ್ದೆ.

ವಿದ್ಯಾರ್ಥಿಗಳೆಲ್ಲಾ “ಟೀಚರ್‌- ಟೀಚರ್‌ ಎಂದು ಸಂಬೋಧಿಸುತ್ತಿದ್ದಾಗ ,ಒಂದು ರೀತಿಯ ಸಂತೋಷದ ಭಾವ ಮನದಲ್ಲಿ ಮೂಡುತ್ತಿತ್ತು. ಹತ್ತು ದಿನಗಳು ಅದೆಷ್ಟು ಬೇಗ ಕಳೆಯಿತೆಂಬುದೇ ಅರಿವಾಗಲಿಲ್ಲ. ಇಷ್ಟು ದಿನಗಳಲ್ಲಿ ಮಕ್ಕಳು ನನ್ನ ಮೇಲಿಟ್ಟಿರುವ ಪ್ರೀತಿ, ಗೌರವ ನೆನೆದು ಮನದುಂಬಿ ಬಂತು .ಕೆಲ ಮಕ್ಕಳಂತೂ ಕೊನೆಯ ದಿನ ತಮ್ಮ ಕೈಯಾರೆ ಗ್ರೀಟಿಂಗ್‌ ಕಾರ್ಡ್‌ಸ್‌ ಗಳನ್ನೆಲ್ಲ ಮಾಡಿಕೊಟ್ಟರು. ಆ ನಿಷ್ಕಲ್ಮಶ ಮನಸ್ಸುಗಳ ಪ್ರೀತಿಯ ಉಡುಗೊರೆಗೆ

ಬೆಲೆ ಕಟ್ಟಲು ಅಸಾಧ್ಯವೆನಿಸಿತು. ನನ್ನ ಭವಿಷ್ಯದ’ ಟೀಚರ್‌’ ಆಗುವ ಕನಸಿಗೆ ಇದೊಂದು ರೀತಿಯ ಮುನ್ನುಡಿಯಾಯಿತು.

ಹೀಗೆ ರಜೆಯ ದಿನಗಳು ಅರಿವಿಲ್ಲದಂತೆ ಕಳೆಯಿತು ಆದರೆ ಹೊಸ ತೊಂದನ್ನು ಕಲಿಸಿತು.

- ಹಿಮಾಲಿ  ಮಡ್ತಿಲ

ಎಸ್‌.ಡಿ.ಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next