Advertisement

Distant Town: ದೂರದ ಊರಿನ ಬದುಕು

03:08 PM Sep 12, 2024 | Team Udayavani |

ಕಾಯುವಿಕೆಯಲ್ಲೂ ಸುಖವಿದೆ. ಇದರ ಅರಿವಾಗಬೇಕಾದರೆ ಅನಿ ವಾ ಸಿಯಾಗಬೇಕು. ಒಂಟಿತನದ ನೋವು ಅರಿಯಬೇಕಾದರೆ ಆ ಅನಿ ವಾ ಸಿಯ ಪತ್ನಿ ಯಾಗಬೇಕು. ಎಷ್ಟೊಂದು ಅರ್ಥಗರ್ಭಿತ ವಾಕ್ಯವಿದು. ಇದು ನೂರಕ್ಕೆ ನೂರು ಸತ್ಯ. ಅನಿವಾಸಿಯಾದವನು ಬದುಕಿನ ಬಣ್ಣಬಣ್ಣದ ತನ್ನ ಕನಸನ್ನು ನನಸಾಗಿಸಲು ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ಬಿಟ್ಟು ದೂರದ ಮರುಭೂಮಿಗೆ ಕಾಲಿಡುತ್ತಾರೆ.

Advertisement

ಆ ಬಳಿಕ ಅಲ್ಲಿ ಅವರ ವೇದನೆ ಹೇಳತೀರದು. ಪ್ರತೀ ದಿನ ಮನೆಗೆ ಮೊಬೈಲ್‌ ಫೋನ್‌ ಕರೆ, ವೀಡಿಯೋ ಕರೆ ಮಾಡಿ ಸಂಪರ್ಕದಲ್ಲಿರುತ್ತಾರೆ. ಹಬ್ಬ ಹರಿದಿನ ಮತ್ತು ಕುಟುಂಬಿಕರ ಮದುವೆ, ಮುಂಜಿ ಮತ್ತಿತರ ಶುಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದೆ ಎಲ್ಲರನ್ನೂ ನೆನೆದು ಕಣ್ಣೀರಿಡುತ್ತಾರೆ. ಕುಟುಂಬದ, ಊರಿನ, ಪರಿಚಯದ ಯಾರಾದರು ನಿಧನಹೊಂದಿದರೆ ಅಂತಿಮ ದರ್ಶನ ಮಾಡಲಾಗದೆ ಪರಿತಪಿಸುತ್ತಾರೆ. ತಂದೆ, ತಾಯಿ, ಹೆಂಡತಿ, ಮಕ್ಕಳನ್ನು ನೋಡಲಾಗದೆ ಕೊರಗುತ್ತಾರೆ.

ಕೆಲಸದ ನಿಮಿತ್ತ ದೂರದ ಊರಿಗೆ ತೆರಳಿ ಅಲ್ಲಿನ ಅಗ್ನಿ ಪರೀಕ್ಷೆಯೇ ಅನಿವಾಸಿಯ ಬರಡು ಬದುಕಾಗಿರುತ್ತದೆ. ವಿದೇಶಗಳ ದುಬಾರಿ ಖರ್ಚಿನ ನಡುವೆಯೂ ಊರಿಗೆ ತಂದೆ, ತಾಯಿ, ಹೆಂಡತಿಗೆ ಕಳಿಸುವ ಖರ್ಚಿನ ಪಟ್ಟಿಯೂ ಉದ್ದವಾಗಿರುತ್ತದೆ. ಮನೆಯಿಂದಲೂ, ಕುಟುಂಬಸ್ಥರಿಂದಲೂ, ಊರವರಿಂದಲೂ ವರ್ಷಾನುಗಟ್ಟಲೆ ನಿಕಟ ಸಂಪರ್ಕವಿಲ್ಲದಿರುವ ಕಾರಣ ಆಪ್ತರು ಅಂತ ಅಲ್ಲಿ ಯಾರೂ ಇರುವುದಿಲ್ಲ. ತಾನೊಬ್ಬ ಪರಕೀಯ ಎಂಬ ಭಾವನೆ ಬಹುತೇಕ ಕಾಡುವುದು ಸಾಮಾನ್ಯವಾಗುತ್ತದೆ.

ಒಟ್ಟಿನಲ್ಲಿ ಅನಿವಾಸಿಗರ ಬವಣೆಯು ಹೇಳತೀರದು. ತನ್ನ ಆರೋಗ್ಯದಲ್ಲಿ ಏರುಪೇರು ಆದರೂ ಕೂಡ ಅದನ್ನು ಲೆಕ್ಕಿಸದೆ ತನ್ನವರಿಗಾಗಿ, ತನ್ನವರ ಸುಖಕ್ಕಾಗಿ ತ್ಯಾಗ ಮಾಡುತ್ತಾರೆ. ಒಂದೋ ಎರಡೋ ವರ್ಷಕೊಮ್ಮೆ ಊರಿಗೆ ಹೋಗುವ ತವಕದಲ್ಲಿರುವ ಆ ದಿನಕ್ಕಾಗಿ ಸದಾ ಕಾಯುತ್ತಿರುತ್ತಾನೆ. ಆ ಕಾಯುವಿಕೆಯಲ್ಲೇ ದಿನ ದೂಡುತ್ತಾನೆ.

ಇನ್ನು ಅನಿವಾಸಿಯ ಪತ್ನಿಯ ನೋವು ಹೇಳತೀರದು. ಆ ವಿರಹ ವೇದನೆಯು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಸಂಗಾತಿ ಇಲ್ಲದ ಜೀವನದ ಕ್ಷಣಗಳನ್ನು ಊಹಿಸಲು ಸಾಧ್ಯವಿಲ್ಲ. ಏನೇ ನೋವು-ದುಃಖ ಉಂಟಾದರೆ ಪತಿಯ ಸಾಂತ್ವನಿಸುವ ಕೈ ನೆನಪಾಗುತ್ತದೆ. ಪತಿಯ ಎದೆಯಲ್ಲಿ ತಲೆಯಿಟ್ಟು ನೋವ ಮರೆಯುವ ಆ ಘಳಿಗೆ ಅವಿಸ್ಮರಣೀಯ. ಪತಿ ಇಲ್ಲದ ರಾತ್ರಿಯನ್ನು ಕಣ್ಣೀರಲಿ ಕಳೆಯುವುದು ಪತ್ನಿಗೆ ಅನಿವಾರ್ಯವಾಗಿದೆ. ಪತಿ ಮನೆಯವರ ಮತ್ತು ಮಕ್ಕಳ ಪೋಷಣೆಯಲ್ಲಿ. ತನ್ನೆಲ್ಲಾ ನೋವನ್ನು ಮರೆತು ದಿನ ಕಳೆಯುವುದು ಅನಿವಾರ್ಯವಾಗಿದೆ. ಆದರೂ

Advertisement

ಒಂಟಿತನದ ನೋವು ಆ ಹೆಣ್ಣಿಗೆ ಕಾಡುತ್ತಲೇ ಇರುತ್ತದೆ. ತನ್ನ ಇನಿಯನ ಬರುವಿಕೆಗಾಗಿ ದಿನಾ ಕಾಯುವುದು ಹೇಳಿದಷ್ಟು ಸುಲಭವಲ್ಲ. ಯಾವ ಸಮಾಧಾನದ ಮಾತುಗಳಿಗೆ ನಿಲುಕದ ಆ ಕಾಯುವಿಕೆಯ ನೋವಿನಲ್ಲೂ ಆತನಿಗೋಸ್ಕರ ಸದಾ ಪ್ರಾರ್ಥನೆ ಮಾಡುತ್ತಾಳೆ. ಎಲ್ಲಿದ್ದರೂ, ಹೇಗಿದ್ದರೂ ತನ್ನ ಪತಿಯು ಸುಖವಾಗಿರಲಿ ಎಂದು ಆಶಿಸುತ್ತಾಳೆ.

 - ಫೌಝಿಯಾ ಹರ್ಷದ್‌

ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.