Advertisement

Music: ಸಂಗೀತದ ಹಂಬಲ

03:46 PM Sep 12, 2024 | Team Udayavani |

ಸಂಗೀತ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ; ಮಕ್ಕಳಿಂದ ದೊಡ್ಡವರವರೆಗೂ ಎಲ್ಲರೂ ಸಂಗೀತ ಪ್ರಿಯರೇ ಆಗಿದ್ದಾರೆ. ಸಂಗೀತಕ್ಕೆ ಇರುವ ಶಕ್ತಿಯೇ ಅಂತಹದ್ದು. ಎಲ್ಲರ ಮನಸ್ಸನ್ನು ಗೆಲ್ಲುವಂತಹ ಎಲ್ಲರ ಮನಸ್ಸಿನಲ್ಲಿ ನೆಲೆ ಊರುವಂತಹ ಆ ಪದಗಳ ಜೋಡಣೆ, ಆ ಸ್ವರಗಳ ಪೋಣಿಕೆಯ ವಿನ್ಯಾಸ – ಹೀಗೆ ಜೋಡಿಸಿದ ಪದಗಳು ಸ್ವರಗಳ ಸಹಾಯದಿಂದ ವಿಶೇಷವಾಗಿ ಹೊರಹೊಮ್ಮುತ್ತವೆ.

Advertisement

ಹೀಗೆ ಜೋಡಣೆಯಾದ ಆ ಸಂಗೀತ ಒಬ್ಬರ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಅಂದರೆ ದುಃಖದಲ್ಲಿರುವವರನ್ನು ಖುಷಿಯೆಡೆಗೆ ತರುವಂತೆ, ಖುಷಿಯಲ್ಲಿ ಇದ್ದವರಿಗೆ ಮನಸ್ಸಿಗೆ ಮತ್ತಷ್ಟು ಸಮಾಧಾನಕರವಾಗಿ ಉತ್ಸಾಹವನ್ನು ನೀಡುವಂತೆ, ಜೀವನದ ಸಾರವನ್ನು ತಿಳಿಸುವಲ್ಲಿಯೂ ಸಂಗೀತ ಬಹಳ ಪರಿಣಾಮಕಾರಿಯಾಗಿದೆ.

ಇಂತಹ ಸಂಗೀತದಲ್ಲಿ ನನ್ನನ್ನು ತಲ್ಲೀನವಾಗಿಸಬೇಕು ಎಂಬ ಹಂಬಲ ನನ್ನದಾಗಿತ್ತು. ನಾನು ಐದನೇ ತರಗತಿಯಲ್ಲಿ ಕಲಿಯುತ್ತಿದ್ದೆ. ನನ್ನ ಅಪ್ಪ ಯಾವತ್ತೂ ಹೇಳುತ್ತಿದ್ದರು; ಭಜನೆ ಇದ್ದ ಮನೆಯಲ್ಲಿ ವಿಭಜನೆ ಇರುವುದಿಲ್ಲ ಎಂದು. ಅದು ಆ ಭಜನೆ ಅಥವಾ ಹಾಡಿಗೆ, ಸಂಗೀತಕ್ಕೆ ಇರುವ ಶಕ್ತಿ. ಹಾಗೆ ನನ್ನ ಆಸೆಯಂತೆ ಅಪ್ಪ ನನ್ನನ್ನು ಸಂಗೀತ ತರಗತಿಗೂ ಸೇರಿಸಿದ್ದರು. ನಾವು ಮೂರು ಮಂದಿ ಅಕ್ಕ ತಮ್ಮ ಸಂಗೀತ ತರಗತಿಗೆ ಹೋಗುತ್ತಿದ್ದೆವು.

ವಾರಕ್ಕೆ ಒಂದು ದಿನದಂತೆ ಒಬ್ಬರಿಗೆ ನೂರರ ಹಾಗೆ 300 ಕೊಡಲು ಅಸಾಧ್ಯವಾಗಿತ್ತು. ಅಂತೆಯೇ 3 ಕಿ.ಮೀ.ನಂತೆ ಹೋಗಿ ಬರಲು 6 ಕಿ.ಮೀ. ಆಗುತ್ತಿತ್ತು. ಅಷ್ಟು ದೂರ ನಡೆದೇ ಹೋಗಿ ಬರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಏನು ಮಾಡುವುದು; ಇಷ್ಟೆಲ್ಲಾ ಅಡೆತಡೆಗಳು ಇದ್ದರೂ ತರಗತಿಗೆ ತಪ್ಪದೆ ಹೋಗುತ್ತಿದ್ದೆವು. ಆ ಸೂರ್ಯನ ಅತೀವ ಶಾಖದ ಕಿರಣಗಳು ಹೇಗೆ ಬೀಳುತ್ತಿದ್ದವೆಂದರೆ ನಮ್ಮಲ್ಲಿ ಏನೋ ಸೇಡು ತೀರಿಸಿಕೊಳ್ಳುವಂತೆ ಭಾಸವಾಗುತ್ತಿತ್ತು. ಹಾಗೆ ಬೆವರು ಕಿತ್ತುಕೊಂಡು ಬರುತ್ತಿದ್ದದ್ದು ನೆನಪಿಗೆ ಬರುತ್ತದೆ.

ಮನೆಯಿಂದ ಹೊರಟಾಗ ದೇವರಲ್ಲಿ ಬೇಡಿಕೊಂಡದ್ದು; ದೇವರೇ ನಮ್ಮನ್ನು ಬೇಗ ತರಗತಿಗೆ ತಲುಪಿಸು. ಮತ್ತೆ ತಿರುಗಿ ಬರುವಾಗ ಅಪ್ಪಾ ಬೇಗ ಮನೆಗೆ ಮುಟ್ಟಿಸು, ಹೊಟ್ಟೆ ಖಾಲಿ ಎಂದು ದೇವರನ್ನು ನೆನೆದದ್ದು, ಬೈದದ್ದು ಎಲ್ಲ ನೆನಪಿಗೆ ಬರುತ್ತದೆ. ಹೀಗೆ ನಮ್ಮಲ್ಲಿ ಕಲಿಯುವ ಹಂಬಲ ತೀವ್ರವಾಗಿತ್ತು. ಆದರೆ ಆ ಸಂಗೀತ ತರಗತಿ ಆರು ತಿಂಗಳಿಗಿಂತ ಹೆಚ್ಚು ಇರಲಿಲ್ಲ.

Advertisement

ಅದು ಹಳ್ಳಿ ಪ್ರದೇಶವಾದುದರಿಂದ ಅಲ್ಲಿಯ ಮಕ್ಕಳಿಗೆ ದೂರ ದೂರದಿಂದ ನಡೆದು ಬರುವ ಕಷ್ಟ, ಜೊತೆಗೆ ನಮ್ಮ ಹಾಗೆ ಹಣದ ದೌರ್ಭಾಗ್ಯ – ಇದೆಲ್ಲದರಿಂದ ತರಗತಿಗೆ ಬರುವ ಮಕ್ಕಳ ಸಂಖ್ಯೆಯು ಇಳಿಕೆಯತ್ತ ಮುಖ ಮಾಡಿತ್ತು. ಹೀಗೆ ನಮ್ಮ ಸಂಗೀತ ಕಲಿಯುವ ಹಂಬಲಕ್ಕೆ ದೊಡ್ಡ ಪೆಟ್ಟು ಬಿತ್ತು. ಆದರೆ ಸಂಗೀತದ ಹಂಬಲ ಇಂದೂ ಇದೆ.

ಭುವನ ಎಸ್‌.

ವಿ.ವಿ. ಕಾಲೇಜು, ಹಂಪನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.