Advertisement

ಥೀಂ ಪಾರ್ಕ್‌: ಕಲಾಕೃತಿ ವೀಕ್ಷಣೆಗೆ ಹೆಚ್ಚುತ್ತಿರುವ ಜನ

10:52 AM Mar 30, 2022 | Team Udayavani |

ಕಾರ್ಕಳ: ಇಲ್ಲಿನ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ನಿರ್ಮಾಣಗೊಂಡ ತುಳುನಾಡ ಸಂಸ್ಕೃತಿಗಳ ಕಲಾಕೃತಿ ವೀಕ್ಷಣೆಗಾಗಿ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Advertisement

ಥೀಮ್‌ ಪಾರ್ಕ್‌ ಹಿಂಭಾಗ ತುಳುನಾಡ ಸಂಸ್ಕೃತಿಯ ದರ್ಶನಕ್ಕೆ 2 ಕೋ.ರೂ. ವೆಚ್ಚದಲ್ಲಿ ತುಳುನಾಡಿನ ಸಂದೇಶ ಸಾರುವ ಹಲವು ಕಲಾಕೃತಿಗಳು ನಿರ್ಮಾಣಗೊಂಡಿವೆ. ಕಾರ್ಕಳ ಉತ್ಸವದ ಸಂದರ್ಭ ಕಲಾಕೃತಿಗಳ ಥೀಂ ಪಾರ್ಕ್‌ ಲೋಕಾರ್ಪಣೆಗೊಂಡಿತ್ತು. ಅದಾದ ಬಳಿಕ ಇಲ್ಲಿಗೆ ಆಗಮಿಸುವವರ ಸಂಖ್ಯೆಯೂ ಹೆಚ್ಚಿದೆ. ಸದ್ಯ ಪಾರ್ಕ್‌ಗಳಾವುದಕ್ಕೂ ಪ್ರವೇಶ ದರ ನಿಗದಿಪಡಿಸಿಲ್ಲ. ಈ ಕಾರಣಕ್ಕೆ ಇಲ್ಲಿಗೆ ವಿವಿಧ ಕಡೆಗಳಿಂದ ಹೆಚ್ಚಿನ ಜನರು ವೀಕ್ಷಣೆಗೆ ಆಗಮಿಸುತ್ತಿದ್ದು ಸಂಜೆಯ ವೇಳೆಗೆ ಹೆಚ್ಚು ಮಂದಿ ಕಂಡುಬರುತ್ತಿದ್ದಾರೆ.

ಭತ್ತದ ಗದ್ದೆ, ಭತ್ತದ ನಾಟಿ ಪದ್ಧತಿ, ಭತ್ತದ ಪೈರನ್ನು ಹೊತ್ತು ತರುವುದು. ಪಡಿಮಂಚದಲ್ಲಿ ಭತ್ತ ಬೇರ್ಪಡಿಸುವಿಕೆ, ಸುಗ್ಗಿ ಗದ್ದೆಗೆ ನೀರು ಹಾಯಿಸುವುದು ಹೀಗೆ ತುಳುನಾಡಿನ ಕೃಷಿಯ ಚಿತ್ರಣ ಕಲಾಕೃತಿಗಳ ಮೂಲಕ ಸುಂದರವಾಗಿ ಮೂಡಿಬಂದಿದೆ. ತುಳುನಾಡ ವೀರಪುರುಷರಾದ ಕೋಟಿ ಚೆನ್ನಯರ ಬಾಲ್ಯದಿಂದ ಬದುಕಿನ ಕೊನೆವರೆಗಿನ ಹೋರಾಟದ ಕಥೆ, ಪರಾಕ್ರಮ, ಜೀವನ ಶೈಲಿಯನ್ನು ಕಟ್ಟಿ ಕೊಡುವ ಅಪರೂಪದ ನೆನಪುಗಳ ಸಂಗ್ರಹ ಚರಿತ್ರೆ ಕೋಟಿ ಚೆನ್ನಯ ಥೀಂ ಪಾರ್ಕ್‌ನಲ್ಲಿ ಇವೆ. ನಿರ್ಮಿತಿ ಕೇಂದ್ರದ ವತಿಯಿಂದ ಕಲಾಕೃತಿಗಳು ನಿರ್ಮಾಣವಾಗಿದ್ದು, ತುಳುನಾಡ ಜೀವನ ಶೈಲಿ, ಸಂಸ್ಕೃತಿಯ ಪ್ರತಿರೂಪವಾಗಿ ಕಂಬಳ, ಗೋಪೂಜೆ, ತೆಂಗಿನಕಾಯಿ ಕುಟ್ಟುವ ಸ್ಪರ್ಧೆ, ನಾಗಸಂದರ್ಶನ, ಕುಸ್ತಿ, ಶೇಂದಿ ಅಂಗಡಿ, ವನೌಷಧ, ಕುಟೀರ, ಕೋಳಿ ಅಂಕ, ಗಿರಣಿ ಎಣ್ಣೆ ಗಿಡ್ಡ, ಭೂತ ನರ್ತನ, ಡೋಲು ಕುಣಿತ, ಹುಲಿವೇಷ, ನೇಯ್ಗೆ, ಆಚಾರಿ ಕೊಟ್ಟಿಗೆ, ಆಟಿ ಕಳಂಜ, ಗೋಂದೂಳು, ಕೊರಗರ ಮನೆ ಇತ್ಯಾದಿ ತುಳುನಾಡಿನ ಹಿಂದಿನ ಜೀವನ ಶೈಲಿ, ಸಂಸ್ಕೃತಿಗಳ ಕಲಾಕೃತಿಗಳು ಈಗ ನೋಡುಗರ ಕಣ್ಮನ ಸೆಳೆಯುತ್ತಿವೆ.

ಹೆಚ್ಚಳಕ್ಕೆ ಕಾರಣವೇನು?

Advertisement

ಕಾರ್ಕಳ ಉತ್ಸವ ಸಂದರ್ಭ ವಿದ್ಯುತ್‌ ದೀಪಾಲಂಕಾರರಿಂದ ಕಾರ್ಕಳ ಭವ್ಯ ವಾಗಿ ಶೋಭಿಸುತ್ತಿತ್ತು. ಲಕ್ಷಾಂತರ ಮಂದಿ ಪಾರ್ಕ್‌ಗೆ ತೆರಳಿ ವೀಕ್ಷಣೆ ನಡೆಸಿದ್ದರು. ಈ ವೇಳೆ ಅನೇಕರು ಕಲಾಕೃತಿ ಗಳ ಮುಂದೆ ನಿಂತು ಫೋಟೋತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿ ಕೊಂಡಿದ್ದರು. ಅದಾದ ಬಳಿಕ ಕುತೂಹಲ ಹೆಚ್ಚಾಗಿ ಬರುವವರ ಸಂಖ್ಯೆಯೂ ಹೆಚ್ಚಿದೆ.

ಆಕರ್ಷಣೆ ಹೆಚ್ಚಳ

ವೀರ ಪುರುಷರ ಶೌರ್ಯ ಸಾಹಸದ ಜತೆಗೆ ತುಳುನಾಡಿನ ಚಾರಿತ್ರಿಕತೆಯನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿಗೆ ಇನ್ನಷ್ಟು ವ್ಯವಸ್ಥೆ ಕಲ್ಪಿಸಲಾಗುವುದು. ಪ್ರವೇಶ ದರ ವಿಧಿಸಿ, ಇನ್ನಷ್ಟು ಆಕರ್ಷಣೆ ಹೆಚ್ಚಿಸಲಾಗುವುದು. -ವಿ. ಸುನಿಲ್‌ಕುಮಾರ್‌, ಇಂಧನ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next