Advertisement

ಥೀಮ್‌ ಪಾರ್ಕ್‌: ಮರು ಟೆಂಡರ್‌ಗೆ ಸೂಚನೆ

09:18 AM Jan 20, 2019 | |

ಕಲಬುರಗಿ: ನಗರದ ದರಿಯಾಪುರ ಕೋಟನೂರ ಪ್ರದೇಶದಲ್ಲಿರುವ ರಾಜೀವಗಾಂಧಿ ಥೀಮ್‌ ಪಾರ್ಕ್‌ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲು ಮರು ಟೆಂಡರ್‌ ಕರೆಯಿರಿ ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾಧವ ಸೂಚಿಸಿದರು.

Advertisement

ಪ್ರಾದೇಶಿಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ರಾಜೀವಗಾಂಧಿ ಥೀಮ್‌ ಪಾರ್ಕ್‌ ಅಭಿವೃದ್ಧಿಗೆ ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೆ ರಾಜೀವಗಾಂಧಿ ಥೀಮ್‌ ಪಾರ್ಕ್‌ನಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನುಕೂಲವಾಗುವ ಹಾಗೆ ತಮ್ಮ ಸ್ವಂತ ಹಣದಲ್ಲಿ ಅಭಿವೃದ್ಧಿಪಡಿಸಿ ನಿರ್ವಹಿಸಲು ಆಸಕ್ತಿ ವ್ಯಕ್ತಪಡಿಸುವ ಟೆಂಡರ್‌ ಕರೆಯಲಾಗಿತ್ತು. ಆದರೆ ಯಾರೂ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಕಾರಣ ಮತ್ತೂಂದು ಬಾರಿ ಮರು ಟೆಂಡರ್‌ ಕರೆಯಬೇಕು ಎಂದರು.

ಪಾರ್ಕ್‌ ಅಭಿವೃದ್ಧಿಗೆ ಆಸಕ್ತಿ ವ್ಯಕ್ತಪಡಿಸುವ ಟೆಂಡರ್‌ ಕರೆದಾಗ ಹೆಚ್ಚು ಗುತ್ತಿಗೆದಾರರು ಭಾಗವಹಿಸಲು ಅನುಕೂಲವಾಗುವ ಹಾಗೆ ಹಣಕಾಸು ಮತ್ತು ತಾಂತ್ರಿಕ ನಿಬಂಧನೆಗಳನ್ನು ಸಾಧ್ಯವಾದಲ್ಲಿ ಸಡಿಲಗೊಳಿಸಬೇಕು. 15 ದಿನಗಳ ಕಾಲಾವಕಾಶ ನೀಡಿ ಟೆಂಡರ್‌ ಕರೆಯಬೇಕು. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅಮ್ಯೂಜ್‌ಮೆಂಟ್ ಪಾರ್ಕ್‌ಗಳಂತಹ ಯೋಜನೆಗಳಲ್ಲಿ ಭಾಗವಹಿಸಿದವರು, ಇಂತಹ ಯೋಜನೆಗಳನ್ನು ನಿರ್ವಹಿಸುವರಿಗೆ ಕಲಬುರಗಿ ಥೀಮ್‌ ಪಾರ್ಕ್‌ ಕುರಿತು ಮಾಹಿತಿ ನೀಡಬೇಕು. ಈಗಾಗಲೇ ರಾಜೀವಗಾಂಧಿ ಥೀಮ್‌ ಪಾರ್ಕ್‌ ಅಭಿವೃದ್ಧಿಗೆ 4 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಹೆ„.ಕ.ಪ್ರ.ಅ. ಮಂಡಳಿ ಅಧಿಧೀಕ್ಷಕ ಇಂಜಿನಿಯರ್‌ ತಿಪ್ಪೇಶ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್‌ ಮುಖ್ತಾರ, ಮಹಾನಗರಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್‌ ಶಿವನಗೌಡ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಗುತ್ತಿಗೆದಾರರಿಗೆ ಷರತ್ತು
ಥೀಮ್‌ ಪಾರ್ಕ್‌ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಆಸಕ್ತಿ ವ್ಯಕ್ತಪಡಿಸುವವರು ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಎರಡು ವರ್ಷ ಆರು ಕೋಟಿ ರೂ.ಗಳ ಹಣಕಾಸು ವಹಿವಾಟು ಮಾಡಿದವರಾಗಿರಬೇಕು. ಟೆಂಡರ್‌ನಲ್ಲಿರುವ ಹಣಕಾಸು ಮತ್ತು ತಾಂತ್ರಿಕ ಅವಶ್ಯಕತೆಗಳೊಂದಿಗೆ ಈ ಹಿಂದಿನ 10 ವರ್ಷಗಳಲ್ಲಿ ಥೀಮ್‌ ಪಾರ್ಕ್‌ಗಳಂತಹ ಯೋಜನೆಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸಿದ ಅನುಭವ ಹೊಂದಿರಬೇಕು. ಆಸಕ್ತಿ ವ್ಯಕ್ತಪಡಿಸಿದ ಯಶಸ್ವಿ ಬಿಡ್ಡುದಾರರು ರಾಜೀವಗಾಂಧಿ ಥೀಮ್‌ ಪಾರ್ಕ್‌ ಅಭಿವೃದ್ಧಿ ಹಾಗೂ ನಿರ್ವಹಣೆ ಕುರಿತು ವಿವರಣೆ ನೀಡಬೇಕಾಗುತ್ತದೆ. ಅದರ ಆಧಾರದ ಮೇಲೆ ಅಂಕ ನೀಡುವ ಮೂಲಕ ಬಿಡ್ಡುದಾರರನ್ನು ಆಯ್ಕೆ ಮಾಡಲಾಗುವುದು. ಥೀಮ್‌ ಪಾರ್ಕ್‌ ಅಭಿವೃದ್ಧಿಗೆ ಆಸಕ್ತಿ ವ್ಯಕ್ತಪಡಿಸಿದವರು ಸುಮಾರು 8 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಅನುದಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು. ಗರಿಷ್ಠ 20 ವರ್ಷಗಳವರೆಗೆ ಥೀಮ್‌ ಪಾರ್ಕ್‌ನ್ನು ಲೀಸ್‌ಗೆ ನೀಡಲಾಗುವುದು. ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿ ಹಾಗೂ ಹೆಚ್ಚಿನ ಬಂಡವಾಳ ಹೂಡಿ ಪಾರ್ಕ್‌ನಿಂದ ಬಂದ ಆದಾಯದಲ್ಲಿ ತಮ್ಮ ಹೂಡಿಕೆ ಪಡೆದು ಮರಳಿ ಪಾರ್ಕ್‌ನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವವರನ್ನು ಆಯ್ಕೆಗೆ ಪರಿಗಣಿಸಲಾಗುವುದು.
•ಸುಬೋಧ ಯಾಧವ, ಪ್ರಾದೇಶಿಕ ಆಯುಕ್ತ

Advertisement
Advertisement

Udayavani is now on Telegram. Click here to join our channel and stay updated with the latest news.

Next