Advertisement

ತೆಕ್ಕಟ್ಟೆ: ಕೆಳಗಿಳಿದರೆ ಕೆಸರು; ಮೇಲೇರಿದರೆ ಡೇಂಜರು!

05:04 PM Jul 04, 2024 | Team Udayavani |

ತೆಕ್ಕಟ್ಟೆ: ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ರಾ.ಹೆ.66ರ ಪ್ರಮುಖ ಭಾಗದಲ್ಲಿ ಅವ್ಯವಸ್ಥಿತ ಒಳಚರಂಡಿಯಿಂದಾಗಿ ಕೃತಕ ನೆರೆ ಸೃಷ್ಟಿಯಾಗುವುದರಿಂದ ರಸ್ತೆ ಸಂಪೂರ್ಣ ಕೆಸರುಮಯ ವಾಗಿದೆ. ಸ್ಥಳೀಯ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಪಾದಚಾರಿಗಳು ಹೆದ್ದಾರಿಯ ಮೇಲೆ ಅಪಾಯದ ನಡುವೆ ಸಂಚರಿಸ ಬೇಕಾದ ಅನಿವಾರ್ಯತೆ ಇದೆ. ನಿತ್ಯ ಜನರ ಗೋಳು ಕೇಳುವವರಿಲ್ಲದಂತಾಗಿದೆ.

Advertisement

ಅಪಾಯಕಾರಿ ಸರ್ಕಲ್‌
ತೆಕ್ಕಟ್ಟೆ ಪ್ರಮುಖ ಸರ್ಕಲ್‌ನಲ್ಲಿ ಸದಾ ಜನ ದಟ್ಟಣೆಯಿಂದ ಕೂಡಿರುತ್ತಿದ್ದು, ಇಲ್ಲಿ ದಬ್ಬೆಕಟ್ಟೆ ಗ್ರಾಮೀಣ ಭಾಗದಿಂದ ಬರುವ ವಾಹನಗಳು ಕುಂದಾಪುರ ಕಡೆಗೆ ಸಾಗಬೇಕಾದ ಸಂದರ್ಭದಲ್ಲಿ ಇಲ್ಲಿನ ಬಸ್‌ ತಂಗುದಾಣದ ಎದುರು ಯಾವುದಾದರೂ ಬಸ್‌ ನಿಂತಿದ್ದರೇ ವಾಹನ ಸವಾರರಿಗೆ ತತ್‌ಕ್ಷಣ ತಿರುವು ಪಡೆಯಲಾಗದೇ ರಾ.ಹೆ.66 ಮಧ್ಯದಲ್ಲೇ ಬಂದು ನಿಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಅದರಂತೆ ಕುಂದಾಪುರದಿಂದ ಉಡುಪಿ ಕಡೆಗೆ ಸಾಗುವ ಎಕ್ಸ್ ಪ್ರೆಸ್‌ ಬಸ್‌ಗಳು ರಾ.ಹೆ.66ರಲ್ಲಿ ಎಲ್ಲೆಂದರಲ್ಲಿ
ನಿಲ್ಲಿಸುವ ಪರಿಣಾಮ ಕೊಮೆ ಭಾಗದಿಂದ ಬರುವ ವಾಹನ ಸವಾರರು ಉಡುಪಿ ಕಡೆಗೆ ಸಾಗಲು ವಾಹನ ತಿರುವು ಪಡೆಯಲಾಗದೇ ಗೊಂದಲ ಏರ್ಪಟ್ಟು ಸಂಭವನೀಯ ಅವಘಡಗಳಿಗೆ ಕಾರಣವಾಗುತ್ತಿದೆ.

ಶಾಸಕರರಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ
ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಶಾಸಕ ಎ.ಕಿರಣ್‌ ಕುಮಾರ್‌ ಕೊಡ್ಗಿ ಅವರು ಜೂ.16ರಂದು ಹೆದ್ದಾರಿ ಪ್ರಾಧಿಕಾರದವರಿಗೆ ರಸ್ತೆಯ ಮೇಲೆ ನೀರು ಹರಿದು ಜನ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದರೂ ಹೆದ್ದಾರಿ ಪ್ರಾಧಿಕಾರ ಮಾತ್ರ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ತೋರಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ವಿರುದ್ಧ ದಿಕ್ಕಿನಲ್ಲಿ ವಾಹನಗಳ ಸಂಚಾರ
ಹೆದ್ದಾರಿಯ ಇಕ್ಕೆಲದಲ್ಲೇ ಇರುವ ಸ್ಥಳಾಂತರಗೊಳ್ಳದ ಹಳೆದಾದ ವಿದ್ಯುತ್‌ ಕಂಬಗಳು ಒಂದೆಡೆಯಾದರೆ ಮತ್ತೊಂದೆಡೆಯಲ್ಲಿ ಹೆದ್ದಾರಿಯನ್ನೇ ಆವರಿಸಿರುವ ಜಾಹೀರಾತು ನಾಮಫಲಕಗಳಿಂದಾಗಿ ರಸ್ತೆಯ ಬದಿಯಲ್ಲಿ ಸುರಕ್ಷಿತವಾಗಿ ಸಂಚರಿಸಬೇಕಾಗಿದ್ದ ಸ್ಥಳೀಯ ಆಟೋ ಹಾಗೂ ಇನ್ನಿತರ ವಾಹನಗಳು ಗ್ರಾಮೀಣ ಸಂಪರ್ಕ ರಸ್ತೆ ಹಾಗೂ ಪೆಟ್ರೋಲ್‌ ಬಂಕ್‌ಗಳಿಗೆ ತೆರಳಲು ಅಪಾಯದ ನಡುವೆ ರಾ.ಹೆದ್ದಾರಿ 66 ರ ವಿರುದ್ಧ ದಿಕ್ಕಿನಲ್ಲೇ ತೆರಳಬೇಕಾದ ಪರಿಸ್ಥಿತಿ ಇದೆ. ಒಟ್ಟಾರೆಯಾಗಿ ದಶಕಗಳೇ ಕಳೆದರೂ ಕೂಡ ರಾಷ್ಟ್ರೀಯ ಹೆದ್ದಾರಿ 66ರ ಸಮಸ್ಯೆಗಳು ಬಗೆಹರಿಯದೇ ಜೀವಂತವಾಗಿದ್ದು, ಸಾಮಾನ್ಯ ಜನರ ಬದುಕಿಗೆ ಮಾರಕವಾಗುತ್ತಿದೆ.

ಸಮಸ್ಯೆಗೆ ಕಾರಣವೇನು?
* ರಾಷ್ಟ್ರೀಯ ಹೆದ್ದಾರಿ 66ರ ಎರಡು ಬದಿಗಳಲ್ಲಿ ಸಮರ್ಪಕ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು.
*ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇಗುಲದ ಮುಂಭಾಗದಿಂದ ಕೊಮೆ ಸಂಪರ್ಕ ಕಲ್ಪಿಸುವ ರಸ್ತೆಯವರೆಗೆ, ತೆಕ್ಕಟ್ಟೆ ಗ್ರಾ.ಪಂ.ನಿಂದ ಹಿಡಿದು ತೆಕ್ಕಟ್ಟೆ ರಾಮರಾಯ ಶಾನುಭಾಗ್‌ ಜನರಲ್‌ ಸ್ಟೋರ್ ವರೆಗಿನ ರಾ.ಹೆ. ಇಕ್ಕೆಲದ ಎರಡು ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲೇ ಹರಿದು ಕೃತಕ ನೆರೆ ಸೃಷ್ಟಿಯಾಗುತ್ತಿರುವುದು.
*ಮಳೆ ನಿಂತ ಬಳಿಕವೂ ನೀರು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲುವುದರಿಂದ ರಸ್ತೆಬದಿ ಕೆಸರಿನಿಂದ ಕೂಡಿದ್ದು ಹೆದ್ದಾರಿ ಮೇಲೆಯೇ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಆಟೋ ಸಂಚಾರಕ್ಕೂ ಕಷ್ಟ
ತೆಕ್ಕಟ್ಟೆ ರಾ.ಹೆ.66 ಎರಡು ಕಡೆಗಳಲ್ಲಿ ಅಲ್ಲಲ್ಲಿ ಹೊಂಡ ಗುಂಡಿಗಳು ಸೃಷ್ಟಿಯಾಗಿ ಕೊಳಚೆ ನೀರು ನಿಂತಿದ್ದು ಆಟೋ ಸಂಚಾರಕ್ಕೂ ಕೂಡ ತೊಂದರೆಯಾಗುತ್ತಿದೆ. ಕೆಲವೊಮ್ಮೆ ರಸ್ತೆ ಬದಿಯಲ್ಲಿ ಘನವಾಹನಗಳು ನಿಂತಿದ್ದು ನಿತ್ಯ ಸ್ಥಳೀಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೆದ್ದಾರಿಯ ಎರಡು ಕಡೆಗಳಲ್ಲಿ ರಸ್ತೆಯನ್ನು ವಿಸ್ತರಿಸಿ, ಅಪಾಯಕಾರಿ ರಸ್ತೆ ಅಂಚಿಗೆ ಸಮರ್ಪಕವಾಗಿ ಮಣ್ಣು ಹಾಕುವ ಮೂಲಕ ತುರ್ತುಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.
*ನರಸಿಂಹ ಕೊಮೆ, ಆಟೋ ಚಾಲಕರು

ರಸ್ತೆ ವಿಸ್ತರಣೆ ನಡೆಸಿ
ಇಲ್ಲಿನ ಸಮಸ್ಯೆಗಳ ಬಗ್ಗೆ ತೆಕ್ಕಟ್ಟೆ ಗ್ರಾ.ಪಂ. ಗಮನಕ್ಕೆ ತಂದರೆ ಅದು ನಮ್ಮ ರಾ.ಹೆ. ಅವರಿಗೆ ಸಂಬಂಧಿಸಿದ್ದು ಅನ್ನುತ್ತಾರೆ. ಈ ಬಗ್ಗೆ ಡಿಸಿ, ಶಾಸಕ ಎ.ಕಿರಣ್‌ ಕುಮಾರ್‌ ಕೊಡ್ಗಿ ಅವರ ಗಮನಕ್ಕೂ ತರಲಾಗಿದೆ. ಅವರು ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ. ಟ್ರೋಲ್‌ ನಿರ್ವಹಿಸುತ್ತಿರುವ ಸಿಬಂದಿ ಕಾಟಾಚಾರಕ್ಕೆ ಜಲ್ಲಿ ಹುಡಿ ತಂದು ಎಲ್ಲೆಂದರಲ್ಲಿ ತಂದು ಎಸೆದು
ಹೋಗಿದ್ದಾರೆ, ತುರ್ತಾಗಿ ತೆಕ್ಕಟ್ಟೆ ರಾ.ಹೆ.66ರ ಬಳಿ ಇರುವ ಹಳೆಯದಾದ ವಿದ್ಯುತ್‌ ಕಂಬಗಳು, ಬಸ್‌ ತಂಗುದಾಣಗಳು ಸ್ಥಳಾಂತರಗೊಳ್ಳಬೇಕು. ಅತಿಕ್ರಮಣವಾಗಿರುವ ಹೆದ್ದಾರಿಯ ಜಾಗವನ್ನು ವಶ ಪಡೆದು ರಸ್ತೆ ವಿಸ್ತರಣೆ ನಡೆಸಬೇಕು.
*ಶ್ರೀನಾಥ ಶೆಟ್ಟಿ ಮೇಲ್ತಾರುಮನೆ, ತೆಕ್ಕಟ್ಟೆ

ಶಾಶ್ವತ ಪರಿಹಾರಕ್ಕೆ ಕ್ರಮ
ತೆಕ್ಕಟ್ಟೆ ರಾ.ಹೆ.66ರ ಇಕ್ಕೆಲದಲ್ಲಿ ಕೆಸರುಮಯವಾಗಿರುವ ಸ್ಥಳಗಳಿಗೆ ಜಲ್ಲಿ ಹುಡಿ ಹಾಕಲಾಗಿದೆ. ಅಲ್ಲದೇ ಚರಂಡಿ ಸಮಸ್ಯೆಯ
ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಎಲ್ಲಿ ಸಮಸ್ಯೆ ಇದೆ ಎನ್ನುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನಮಗೆ ಯಾರ ಒತ್ತಡವು ಇಲ್ಲ, ನಮ್ಮೊಂದಿಗೆ ಗ್ರಾಮ ಪಂಚಾಯತ್‌ ಕೂಡ ಕೈಜೋಡಿಸಲಿ. ಈ ಕುರಿತು ಕಂಪೆನಿಯ ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತೇವೆ.
*ಸುನಿಲ್‌, ರಾ.ಹೆ.66 ರ ಟೋಲ್‌
ಮ್ಯಾನೇಜರ್‌, ಸಾಸ್ತಾನ

*ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next