Advertisement

ಜೀವನಕ್ಕೆ ತಿರುವು ಕೊಟ್ಟ ಕಳವು; ಪ್ರಶಸ್ತಿಗಳಿಂದ ದೂರವೇಕೆ?

02:27 PM Apr 16, 2022 | Team Udayavani |
-ಮಟಪಾಡಿ ಕುಮಾರಸ್ವಾಮಿಹಿಂದೆಯೂ ಒಂದು ಅನುಭವ ಆಗಿತ್ತು. ಆದರೆ ಅದು ಬೇರೆಯವರದ್ದು. ಒಬ್ಬರು ಸಿರಿವಂತರ ಮನೆಯಲ್ಲಿ  ಕಳವು ಸಂಭವಿಸಿತ್ತು. ಕಳ್ಳರು ಸಿಕ್ಕಿರಲಿಲ್ಲ. ಒತ್ತಡ ಜಾಸ್ತಿಯಾಯಿತು. ಯಾವುದೋ ಒಂದು ಮಾರ್ಗದಲ್ಲಿ ಪೊಲೀಸರು ಇಬ್ಬರು ನಿರಪರಾಧಿಗಳನ್ನು ಸೆರೆಹಿಡಿದು ಪೊಲೀಸ್‌ ಟ್ರೀಟೆ¾ಂಟ್‌ ಕೊಟ್ಟರು. ಆ ದೂರು ಶ್ಯಾನುಭೋಗರಲ್ಲಿಯೂ ಬಂದಿತ್ತು. ಡಾ| ಶಿವರಾಮ ಕಾರಂತರು ಮಾರ್ಗದರ್ಶಕರು. ಡಾ| ಕಾರಂತರ ಮನೆಯಲ್ಲಿ ವಿಚಾರಣೆ ನಡೆಯಿತು. ಇದರಿಂದ ಆದ ಬದಲಾವಣೆ ಐತಿಹಾಸಿಕ. ಡಿಐಜಿ ಆಗಿದ್ದ ಆಗಿದ್ದ ರೇವಣಸಿದ್ದಯ್ಯನವರು, ಡಿವೈಎಸ್ಪಿ ಆಗಿದ್ದ ನಾರಾಯಣ ನಡುಮನಿವರಿಗೆ ಪೊಲೀಸ್‌ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲು, ಒರಗಿ ಕುಳಿತುಕೊಳ್ಳಲು ಆಗುವ ಆಸನದ ವ್ಯವಸ್ಥೆ ಕಲ್ಪಿಸಲು, ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಸಮಿತಿ ರಚಿಸಲು ಸೂಚಿಸಿದರು. ಈಗ ಜನಸ್ನೇಹಿ...
Now pay only for what you want!
This is Premium Content
Click to unlock
Pay with

ಸಾಧಕರ ಸಾಧನೆಗಳೇ ತೋರುವಾಗ ಆಳ ತೋರುವುದಿಲ್ಲ, ಜನರಿಗೆ ಅದು ಅನಿವಾರ್ಯವೂ ಅಲ್ಲ. ಆಳವನ್ನು ಕೆದಕಿ ನೋಡಿದರೆ ಟರ್ನಿಂಗ್‌ ಪಾಯಿಂಟ್‌ ಆದ ಘಟನೆಯಲ್ಲಿ ಪ್ರಕೃತಿ (ನೇಚರ್‌) ಬೀಜ ರೂಪದಲ್ಲಿ ಹುದುಗಿಸಿದ ಗುಟ್ಟು ಅಚ್ಚರಿ ಮೂಡಿಸುತ್ತದೆ. ಮೊದಲು ಬಳಕೆದಾರರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದ, ಬಳಿಕ ಮಾನವ ಹಕ್ಕುಗಳಿಗಾಗಿ (ವ್ಯಕ್ತಿಗಳು ಘನತೆಯಿಂದ ಬದುಕುವ ಹಕ್ಕು) ಶ್ರಮಿಸುತ್ತಿರುವ ಉಡುಪಿಯ ಡಾ| ರವೀಂದ್ರನಾಥ ಶ್ಯಾನುಭಾಗರು ಇದುವರೆಗೆ ಸ್ವೀಪರ್‌ ಆಗಿದ್ದ ಅಕ್ಕು -ಲೀಲಾರಿಗೆ ಸರ್ವೋಚ್ಚ ನ್ಯಾಯಾಲಯದವರೆಗೆ ಹೋಗಿ ನ್ಯಾಯ ದೊರಕಿಸಿಕೊಟ್ಟದ್ದು, ಎಂಡೋಸಲ್ಫಾನ್‌ ಹೋರಾಟ, ಗಣಿಗಾರಿಕೆ ನಿಲ್ಲಿಸಲು ಪರಿಸರ ಆಂದೋಲನ ಸೇರಿದಂತೆ 38,000 ಪ್ರಕರಣಗಳನ್ನು ತೋಳ್ಬಲವಿಲ್ಲದೆ, ಸಂವಿಧಾನ-ಕಾನೂನು ತೋರಿಸಿದ ಮಾರ್ಗದಿಂದಲೇ ಪರಿಹರಿಸಿದ್ದಾರೆ.

Advertisement

ಇಷ್ಟು ದೊಡ್ಡ ಸಾಧಕನ ಹಿಂದಿರುವ ಟರ್ನಿಂಗ್‌ ಪಾಯಿಂಟ್‌ ತಮ್ಮದೇ ಮನೆಯಲ್ಲಿ, ತಮ್ಮದೇ ಚಿನ್ನ ಕಳವು ಆದದ್ದು. 1991ರಲ್ಲಿ ನಡೆದ ಘಟನೆ ಇದು. ಆಗ ಡಾ| ಶ್ಯಾನುಭಾಗ್‌ ಮಣಿಪಾಲದ ಫಾರ್ಮಸ್ಯೂಟಿಕಲ್‌ ಸೈನ್ಸಸ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಜತೆಗೆ ಬಳಕೆದಾರರ ವೇದಿಕೆ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುತ್ತಿದ್ದರು. ಕಾಲೇಜಿನಲ್ಲಿ ಔಷಧಿ ವಿಜ್ಞಾನದ ಕುರಿತು ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಸಂಘಟಿಸಿದ್ದರು. ಶ್ಯಾನುಭಾಗ್‌ ದಂಪತಿ ಸಮ್ಮೇಳನದಲ್ಲಿ ತೊಡಗಿದ್ದರು. ಸಮಾರೋಪ ಮುಗಿಸಿ ರಾತ್ರಿ ಹೋಗುವಾಗ ಸುಸ್ತಾಗಿತ್ತು. ಶ್ಯಾನುಭಾಗರು ಮರುದಿನ ಸಮ್ಮೇಳನಕ್ಕಾಗಿ ತಂದ ತರಕಾರಿ, ಬೇಳೆಕಾಳುಗಳನ್ನು ಕೆಲಸ ಮಾಡಿದವರಿಗೆ ವಿತರಿಸುತ್ತಿದ್ದರು. ಹೆಂಡತಿ ರಾತ್ರಿ ಮನೆಗೆ ಹೋದವರು ತನ್ನ ಆಭರಣಗಳನ್ನು ಗಂಟು ಕಟ್ಟಿ ಕೈಗೆಟಕುವ ಸ್ಥಳದಲ್ಲಿರಿಸಿದ್ದರು. ಬೆಳಗ್ಗೆ 10 ಗಂಟೆಗೆ ನೋಡುವಾಗ ಚಿನ್ನಾಭರಣ ಇಲ್ಲ. ಲಕ್ಷ ರೂ. ಅಧಿಕ ಮೌಲ್ಯದ ಚಿನ್ನ ಕಳವು ಆಗಿತ್ತು. ಶ್ಯಾನುಭೋಗರಿಗೆ ಪತ್ನಿಯ ಫೋನ್‌ ಕರೆ ಬಂತು. ಒಂದೇ ಸಮನೆ ಅಳು. ಈಗ ಏನು ಮಾಡಬೇಕು?

ಪೊಲೀಸರಿಗೆ ದೂರು ಕೊಡಬೇಕೆ? – ಶ್ಯಾನುಭೋಗರಿಗೆ ಜಿಜ್ಞಾಸೆ ಎದ್ದಿತು. ಯಾರ ಮೇಲೆ ಸಂಶಯ ಬರಬೇಕು? ಮನೆ ಕೆಲಸದವರ ಮೇಲೆ ಸಂಶಯ ಬರಬೇಕು. ಒಂದು ವೇಳೆ ಅವರು ತಪ್ಪು ಮಾಡದೆ ಇದ್ದರೆ ಅವರಿಗೆ ಉಂಟಾಗುವ ಹೊಟ್ಟೆಯುರಿ ನಮ್ಮ ಸಂತಾನನಾಶಕ್ಕೆ ಸಾಕಾಗುತ್ತದೆ. ಗೌಪ್ಯವಾಗಿ ಇಡದೆ ಇದ್ದುದು ನಮ್ಮಿಂದಾದ ತಪ್ಪು. ಒಂದು ವೇಳೆ ಕಪಾಟು ಒಡೆದು ಕಳವು ಮಾಡಿದ್ದರೆ ಅದು ಬೇರೆ ವಿಷಯ…

 ಮಂತ್ರೋಪದೇಶ
ಎಂಜಿಎಂ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಪ್ರೊ| ಯು.ಎಲ್‌.ಆಚಾರ್ಯ ಜೋತಿಷದಲ್ಲಿಯೂ ಪರಿಣಿತರಾಗಿದ್ದು ಡಾ| ಶ್ಯಾನುಭೋಗರಿಗೆ ಗುರುಗಳಾಗಿದ್ದರು. ಕಳವಾದ ವಸ್ತು ಪತ್ತೆ ಹಚ್ಚಲು ಅವರು ಕಾರ್ತ್ಯವೀರ್ಯಾರ್ಜುನ ಮಂತ್ರವನ್ನು ಉಪಯೋಗಿಸುತ್ತಿದ್ದರು. ಡಾ| ಶ್ಯಾನುಭೋಗರಿಗೆ ಇದರಲ್ಲಿ ನಂಬಿಕೆ ಇಲ್ಲದ್ದರಿಂದ ತಾನೇ ಸ್ವತಃ ಪರೀಕ್ಷಿಸಿದ್ದನ್ನು ಮನದಟ್ಟು ಮಾಡಿ  ಮಂತ್ರೋಪದೇಶ ನೀಡಿದರು. “ನಾನು ಅಮೂಲ್ಯವಾದ ವಸ್ತುವನ್ನು ಕಳೆದುಕೊಂಡಿದ್ದೇನೆ. ಅದು ನನ್ನದು ಹೌದಾದಲ್ಲಿ ಹಿಂದಿರುಗಿಸಬೇಕು’- ಮಂತ್ರೋಪದೇಶ ನೀಡುವಾಗ ತಿಳಿಸಿದ ಅರ್ಥವಿದು.

ದೇವರಲ್ಲಿ ಪ್ರಾರ್ಥನೆ-ಫಿಲಾಸಫಿಕಲ್‌ ಜಿಜ್ಞಾಸೆ
ಶುರುವಾಯಿತು ಶ್ಯಾನುಭೋಗರ ಮಂತ್ರ ಯಜ್ಞ. ಕೆಲವು ಸಾವಿರ ಜಪಯಜ್ಞ ನಡೆಯುವಾಗ “ನನ್ನ ಕಳವಾದ ವಸ್ತು ಯಾವುದು? ಒಂದು ಲೋಹ ಮತ್ತು ಒಂದಿಷ್ಟು ಹರಳುಗಳು ತಾನೆ? ನಾನು ಅಮೂಲ್ಯವಾದ ಬಾಲ್ಯವನ್ನು ಕಳೆದುಕೊಂಡಿದ್ದೇನೆ. ಜತೆಗೆ ಇನ್ನೋಸೆನ್ಸ್‌ ಕಳೆದುಕೊಂಡಿದ್ದೇನೆ. ಎಷ್ಟೋ ಜನರಿಗೆ ಸಹಾಯ ಮಾಡುವ ಅವಕಾಶವನ್ನೂ ಕಳೆದುಕೊಂಡಿದ್ದೇನೆ. ಇಷ್ಟೆಲ್ಲ ಕಳೆದುಕೊಂಡಿರುವಾಗ ಚಿಂತೆ ಮಾಡದ ನಾನು ಒಂದಿಷ್ಟು ಲೋಹ, ಹರಳು ಕಳೆದುಕೊಂಡರೆ ದೇವರ ಬಳಿ ಇದಕ್ಕಾಗಿ ಯಾಚಿಸಬೇಕೆ?’ ಎಂಬ ವಿಚಾರಗಳು ಹೊಳೆದವು. ಇನ್ನು ಮುಂದೆ ಇಂತಹ ಲೌಕಿಕ ವಿಷಯಗಳನ್ನು ದೇವರ ಬಳಿ ಯಾಚಿಸುವುದಿಲ್ಲ ಎಂದು ದೇವರಿಗೆ ದೊಡ್ಡ ನಮಸ್ಕಾರ ಮಾಡಿದರು. ಆಗಲೇ ಡಾ| ಶ್ಯಾನುಭೋಗರು ಸಹಜ ಸ್ಥಿತಿಗೆ ಬಂದರು. ಇದ್ದ ಭಾರವೆಲ್ಲ ಮಾಯವಾಗಿ ಮನಸ್ಸು ಸ್ವತ್ಛವಾಯಿತು.

Advertisement

 ಜನಸ್ನೇಹಿ ಪೊಲೀಸ್‌ ನೀತಿ ಹುಟ್ಟು
ಹಿಂದೆಯೂ ಒಂದು ಅನುಭವ ಆಗಿತ್ತು. ಆದರೆ ಅದು ಬೇರೆಯವರದ್ದು. ಒಬ್ಬರು ಸಿರಿವಂತರ ಮನೆಯಲ್ಲಿ  ಕಳವು ಸಂಭವಿಸಿತ್ತು. ಕಳ್ಳರು ಸಿಕ್ಕಿರಲಿಲ್ಲ. ಒತ್ತಡ ಜಾಸ್ತಿಯಾಯಿತು. ಯಾವುದೋ ಒಂದು ಮಾರ್ಗದಲ್ಲಿ ಪೊಲೀಸರು ಇಬ್ಬರು ನಿರಪರಾಧಿಗಳನ್ನು ಸೆರೆಹಿಡಿದು ಪೊಲೀಸ್‌ ಟ್ರೀಟೆ¾ಂಟ್‌ ಕೊಟ್ಟರು. ಆ ದೂರು ಶ್ಯಾನುಭೋಗರಲ್ಲಿಯೂ ಬಂದಿತ್ತು. ಡಾ| ಶಿವರಾಮ ಕಾರಂತರು ಮಾರ್ಗದರ್ಶಕರು. ಡಾ| ಕಾರಂತರ ಮನೆಯಲ್ಲಿ ವಿಚಾರಣೆ ನಡೆಯಿತು. ಇದರಿಂದ ಆದ ಬದಲಾವಣೆ ಐತಿಹಾಸಿಕ. ಡಿಐಜಿ ಆಗಿದ್ದ ಆಗಿದ್ದ ರೇವಣಸಿದ್ದಯ್ಯನವರು, ಡಿವೈಎಸ್ಪಿ ಆಗಿದ್ದ ನಾರಾಯಣ ನಡುಮನಿವರಿಗೆ ಪೊಲೀಸ್‌ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲು, ಒರಗಿ ಕುಳಿತುಕೊಳ್ಳಲು ಆಗುವ ಆಸನದ ವ್ಯವಸ್ಥೆ ಕಲ್ಪಿಸಲು, ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಸಮಿತಿ ರಚಿಸಲು ಸೂಚಿಸಿದರು. ಈಗ ಜನಸ್ನೇಹಿ ಪೊಲೀಸ್‌ ಇತ್ಯಾದಿ ಶಬ್ದಪುಂಜಗಳ ಮೂಲ ಇರುವುದು 1980ರ ದಶಕದಲ್ಲಿ ಆದ ಈ ಬೆಳವಣಿಗೆಯಲ್ಲಿ. ಶ್ಯಾನುಭೋಗರು ಅವೈಜ್ಞಾನಿಕ ಪೊಲೀಸ್‌ ಕ್ರಮವನ್ನು ಪ್ರಶ್ನಿಸಿದಂತೆ  ಪೊಲೀಸರ ನೈತಿಕ ಧೈರ್ಯ ಕುಸಿಯ ಬಾರದೆನ್ನುವ ಎಚ್ಚರ ಸದಾ ವಹಿಸಿದವರು. ಪೊಲೀಸ್‌ ಕುಟುಂಬಕ್ಕೆ ನಿವೃತ್ತಿ ವೇತನ ತೊಂದರೆ ಯಾದಾಗಲೂ ಪ್ರಯತ್ನಿಸಿ ಸಫ‌ಲರಾಗಿದ್ದರು.

ನೈತಿಕ ಹಕ್ಕು-ಸ್ಥೈರ್ಯದ ಬುನಾದಿ
ಈ ಘಟನೆಯಿಂದಲೂ ಪ್ರೇರಿತರಾದ ಡಾ| ಶ್ಯಾನುಭೋಗರು ತನ್ನ ಮನೆಯಲ್ಲಿ ಕಳವು ಆದಾಗ ಮನೆಯ ಸದಸ್ಯರು, ಸ್ನೇಹಿತರ ಒತ್ತಡ ಎಷ್ಟೇ ಇದ್ದರೂ ಸಂಶಯ ವ್ಯಕ್ತಪಡಿಸಿ ದೂರು ನೀಡಲಿಲ್ಲ. ಯಾವುದೇ ದೂರು ನೀಡಿದಾಗಲೂ ಬಡಪಾಯಿಗಳನ್ನು ಪ್ರಶ್ನಿಸುತ್ತಾರೆ ವಿನಾ ಟ್ರಿಮ್‌ ಆಗಿರುವವರನ್ನು ವಿಚಾರಣೆಗೆ ಒಳಪಡಿಸುತ್ತಾರೆಯೆ? – ಇದು ಪ್ರಶ್ನೆ. “ನಾನು ಇದುವರೆಗೆ ಮಾಡಿದ ಪ್ರಯತ್ನಕ್ಕೆ ನನ್ನ ಆಗಿನ ನಿಲುವೇ ಬುನಾದಿ. ಒಂದು ವೇಳೆ ದೂರು ನೀಡಿ ನಿರಪರಾಧಿಗೇನಾದರೂ ಮಾನಸಿಕ ಆಘಾತವಾಗಿದ್ದರೆ ನನಗೆ ಇಷ್ಟು ಕೆಲಸ ಮಾಡಲು ನೈತಿಕ ಹಕ್ಕು- ಸ್ಥೈರ್ಯ ಇರುತ್ತಿರಲಿಲ್ಲ’ ಎನ್ನುತ್ತಾರೆ ಡಾ| ಶ್ಯಾನುಭೋಗ್‌. ಇದು ಎಲ್ಲ ವ್ಯಕ್ತಿಗಳಿಗೆ ಅಗತ್ಯ.

ಪ್ರಶಸ್ತಿಗಳಿಂದ ದೂರವೇಕೆ?
ಇಷ್ಟು ಕೆಲಸ ಮಾಡಿದ ಶ್ಯಾನುಭೋಗರಿಗೆ ಹಲವು ಪ್ರಶಸ್ತಿಗಳ ಪ್ರಸ್ತಾವ ಬಂದವು. “ನಾನು ಮಾಡುವ ಕೆಲಸಕ್ಕೆ ನ್ಯಾಯ ಸಿಕ್ಕಿದರೆ ಅದುವೇ ಪ್ರಶಸ್ತಿ. ಸರಕಾರದಿಂದ ಸರಕಾರದ ಕಾನೂನಿಗೇ ನ್ಯಾಯ ಸಿಗದೆ ಇರುವಾಗ ಆ ಹೆಸರಿನಲ್ಲಿ ನನಗೆ ಸಿಗುವ ಪ್ರಶಸ್ತಿಗೆ ಏನಾದರೂ ಅರ್ಥವಿರುತ್ತದೆಯೋ?’ ಎಂದು ಪ್ರಶಸ್ತಿ ಪ್ರಸ್ತಾವಗಳನ್ನು ನಯವಾಗಿ ನಿರಾಕರಿಸಿದ್ದರು. ಅವರನ್ನು ಮುಖ್ಯ ಅತಿಥಿಯಾಗಿ ಸಭೆಗೆ ಕರೆದರೆ ಸಮಾಜದಲ್ಲಿರುವ  ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ  ಪರಿಹಾರ ಸೂತ್ರದ ಬಗೆಗೆ ಜಾಗೃತಿ ರೂಪಿಸುತ್ತಾರೆ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.