ಬೆಂಗಳೂರು: ಸಾಲ ತೀರಿಸಲು ಚಿಕ್ಕಪ್ಪನ ಮನೆಯಲ್ಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶ್ರೀರಾಮಪುರದ ಗೌತಮ್‌ನಗರ ನಿವಾಸಿ ಉದಯ್ ಕುಮಾರ್ (33) ಬಂಧಿತ. ಆರೋಪಿ ತಾನು ಮಾಡಿಕೊಂಡಿದ್ದ ಸಾಲ ತೀರಿಸಲು ಚಿಕ್ಕಪ್ಪನ ಮನೆಯಲ್ಲೇ ಚಿನ್ನಾಭರಣ ಕಳ್ಳತನ ಮಾಡಿದ್ದ. ಆರೋಪಿಯಿಂದ 20 ಲಕ್ಷರೂ. ಮೌಲ್ಯದ 726 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಆರೋಪಿ ಉದಯ್ ಕುಮಾರ್ ಅವಿಭಕ್ತ ಕುಟುಂಬದವನಾಗಿದ್ದು, ಮೂರು ಅಂತಸ್ತಿನ ಕಟ್ಟಡದ ಮೊದಲ ಅಂತಸ್ತಿನಲ್ಲಿ ಉದಯ್ ಪೋಷಕರು ವಾಸವಿದ್ದರು. 2ನೇ ಅಂತಸ್ತಿನಲ್ಲಿ ಈತನ ಚಿಕ್ಕಪ್ಪ ವಾಸವಾಗಿದ್ದಾರೆ. ಮೂರನೇ ಅಂತಸ್ತಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ಆರೋಪಿ ವಾಸವಾಗಿದ್ದ.
ಓಮ್ನಿ ಕಾರು ಇಟ್ಟುಕೊಂಡಿರುವ ಆರೋಪಿ ಶಾಲಾ ಮಕ್ಕಳನ್ನು ಕರೆದೊಯ್ಯುವುದು, ಬಿಡುವುದು ಮಾಡುತ್ತಾನೆ. ಈ ಮಧ್ಯೆ ಆರೋಪಿ ಕುದುರೆ ರೇಸ್ ಜೂಜಾಟಕ್ಕೆ ಬಿದ್ದಿದ್ದು, ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಈ ಹಣ ತೀರಿಸಲು ಸಾಧ್ಯವಾಗದೆ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕಾಗಿ ಆರೋಪಿ ಚಿಕ್ಕಪ್ಪನ ಮನೆಯ ಬೀರುವಿನ ಕೀಯನ್ನು ಕದ್ದೊಯ್ದು, ನಕಲಿ ಕೀ ಮಾಡಿಸಿಕೊಂಡಿದ್ದ. ಆಗಾಗ್ಗೆ ಮನೆಗೆ ಹೋದಾಗ 1 ಅಥವಾ 2 ಸಾವಿರ ಹಣ ಕಳವು ಮಾಡುತ್ತಿದ್ದ. ಇತ್ತೀಚೆಗೆ ಚಿಕ್ಕಪ್ಪ ಮನೆಯವರು ಬಾಣಸವಾಡಿಯ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದರು. ಈ ವೇಳೆ ಆರೋಪಿ ಮನೆಗೆ ನುಗ್ಗಿ ಸುಮಾರು 726 ಗ್ರಾಂ ಚಿನ್ನಾಭರಣ ಕಳವು ಮಾಡಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.