ಬೆಂಗಳೂರು: ಚುನಾವಣೆ ಪ್ರಚಾರಕ್ಕೆ ತೆರಳಿದ್ದ ಮಾಜಿ ಮೇಯರ್ ಆರ್.ನಾರಾಯಣಸ್ವಾಮಿ ಅವರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ನಗದು, ಚಿನ್ನಾಭರಣ ಕಳ್ಳತನವಾಗಿರುವ ಘಟನೆ ಸಂಜಯನಗರ ಠಾಣೆ ವ್ಯಾಪ್ತಿಯ ಸಂಜಯನಗರದ ಆರ್‌ಎಂವಿ 2ನೇ ಹಂತದಲ್ಲಿ ನಡೆದಿದೆ.
ಈ ಸಂಬಂಧ ನಾರಾಯಣಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಸೆಕ್ಯೂರಿಟಿ ಗಾರ್ಡ್ ನೇಪಾಳ ಮೂಲದ ನರಬಹುದ್ದೂರ್ ಶಾಯಿ ಎಂಬಾತನ ವಿರುದ್ಧ ಸಂಜಯನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಆತನ ಪತ್ತೆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಮನೆಯಲ್ಲಿದ್ದ 4 ಲಕ್ಷ ರೂ. ನಗದು, 99.75 ಲಕ್ಷ ರೂ. ಮೌಲ್ಯದ 1 ಕೆ.ಜಿ. 425 ಗ್ರಾಂ ತೂಕದ ಚಿನ್ನಾಭರಣಗಳು, 18.92 ಲಕ್ಷ ರೂ. ಮೌಲ್ಯದ 22 ಕೆ.ಜಿ. ಬೆಳ್ಳಿ ವಸ್ತುಗಳು, 6.50 ಲಕ್ಷ ರೂ. ಮೌಲ್ಯದ 3 ವಾಚ್‌ಗಳು ಸೇರಿ ಒಟ್ಟು 1.29 ಕೋಟಿ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿದೆ ಎಂದು ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಏನಿದು ಘಟನೆ?: ಏ.18ರಂದು ಬೆಳಗ್ಗೆ 7.30ಕ್ಕೆ ನಾರಾಯಣಸ್ವಾಮಿ ಮನೆಯಿಂದ ಜಾಲಹಳ್ಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು. ಇನ್ನು ಅವರ ಪತ್ನಿ ಮತ್ತು ಪುತ್ರ ತಮಿಳುನಾಡಿನ ತಿರುವಣ್ಣಾಮಲೈ ದೇವಸ್ಥಾನಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ಮಧ್ಯಾಹ್ನ 3 ಗಂಟೆಗೆ ಮನೆಗೆ ಬಂದಿರುವ ನಾರಾಯಣಸ್ವಾಮಿ ಊಟ ಮಾಡಿ, ಸೆಕ್ಯೂರಿಗಾರ್ಡ್ ನರಬಹುದ್ದೂರ್ ಶಾಯಿಗೂ ಊಟ ನೀಡಿದ್ದಾರೆ. ನಂತರ ಮನೆಗೆ ಬೀಗ ಹಾಕಿಕೊಂಡು ಮಧ್ಯಾಹ್ನ 3.30ಕ್ಕೆ ನಾರಾಯಣಸ್ವಾಮಿ ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿಕೊಂಡು ರಾತ್ರಿ 8 ಗಂಟೆಗೆ ಮನೆಗೆ ವಾಪಾಸ್ ಬಂದಾಗ, ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಕಂಡು ಬಂದಿದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್‌ನನ್ನು ಕೂಗಿದ್ದಾರೆ. ಆತ ಎಲ್ಲಿಯೂ ಕಂಡು ಬಂದಿಲ್ಲ. ಆತನ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು.
ಮನೆಯ ಒಳಗೆ ತೆರಳಿ ನೋಡಿದಾಗ ಮನೆಯ 3 ಕೋಣೆಯ ವಾರ್ಡ್ ರೂಬ್‌ಗಳಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ವಾರ್ಡ್‌ರೂಬ್‌ನಲ್ಲಿ ಇಟ್ಟಿದ್ದ ನಗದು, ಚಿನ್ನಾಭರಣಗಳು, ಬೆಳ್ಳಿವಸ್ತುಗಳು ಸೇರಿ ಬೆಲೆ ಬಾಳು ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾಗಿರುವ ಸೆಕ್ಯೂರಿಗಾರ್ಡ್ ಕಳ್ಳತನ ಮಾಡಿ ಪರಾರಿಯಾಗಿರುವ ಅನುಮಾನ ವ್ಯಕ್ತವಾಗಿದೆ ಎಂದು ನಾರಾಯಣಸ್ವಾಮಿ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಏನಿದು ಘಟನೆ? :
ಮಾಜಿ ಮೇಯರ್ ನಾರಾಯಣಸ್ವಾಮಿ ಮಧ್ಯಾಹ್ನ ಪ್ರಚಾರಕ್ಕೆ ತೆರಳಿದ್ದರು.
ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ ಕಳ್ಳತನ ಬಳಕಿಗೆ
4 ಲಕ್ಷ ರೂ. ನಗದು, 99 ಲಕ್ಷ ಮೌಲ್ಯದ ಚಿನ್ನಾಭರಣ, ವಾಚ್‌ಗಳು ಕಳವು
ಮನೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಪಾರಾರಿ, ಮೊಬೈಲ್ ಸ್ವಿಚ್ಡ್ ಆಫ್
ತಮಿಳುನಾಡಿಗೆ ತೆರಳಿದ್ದ ನಾರಾಯಣಸ್ವಾಮಿ ಪತ್ನಿ, ಪುತ್ರಿ