Advertisement

ಜಿಲ್ಲೆಯಲ್ಲಿ ಕಳ್ಳರ ಕೈಚಳಕ; ಆತಂಕದಲ್ಲಿ ಜನತೆ

03:14 PM Jul 23, 2023 | Team Udayavani |

ರಾಮನಗರ: ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಕಳೆದೆರಡು ತಿಂಗಳಿಂದ ವ್ಯಾಪಕವಾಗಿ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಂದ ಜನತೆ ಕಂಗಾಲಾಗಿದ್ದಾರೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆ ಶತಕ ತಲುಪಿದ್ದು, ಕಳ್ಳರ ಹಾವಳಿಯಿಂದ ಜನತೆ ನಿದ್ರೆಗೆಡುವಂತಾಗಿದೆ.

Advertisement

ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ ಬೈಕ್‌ ಕಳವು, ಬಸ್‌ ನಿಲ್ದಾಣದಲ್ಲಿ ಮಹಿಳೆಯರ ಚಿನ್ನಾಭರಣ, ಜೇಬುಗಳವು, ಸಾಕುಪ್ರಾಣಿಗಳ ಕಳವು, ಮನೆ ಕಳವು ಹೀಗೆ ವಿವಿಧ ಕಳ್ಳತನ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಲೇ ಇದ್ದು, ಪ್ರತಿದಿನ ಒಂದಾ ದರೂ ಕಳ್ಳತನ ಪ್ರಕರಣಗಳು ಪೊಲೀಸ್‌ ಠಾಣೆಯಲ್ಲಿ ದಾಖಲಾಗುತ್ತಿವೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಹೆಚ್ಚಿನ ಮನೆ ಕಳವು: ಜಿಲ್ಲೆಯಲ್ಲಿ ಬೀಗ ಹಾಕಿದ ಮನೆಗಳ ಬಾಗಿಲು ಹೊಡೆದು ಮನೆಯಲ್ಲಿರುವ ನಗದು ಮತ್ತು ಚಿನ್ನಾಭರಣ ಕಳವು ಪ್ರಕರಣಗಳು ಕಳೆದ ಎರಡು ತಿಂಗಳಿಂದ ವ್ಯಾಪಕವಾಗಿದೆ. ಜೂನ್‌ ತಿಂಗಳಲ್ಲಿ ಜಿಲ್ಲೆಯಲ್ಲಿ 11 ಮನೆ ಕಳವು ಪ್ರಕರಣಗಳು ನಡೆದಿದ್ದು, ಜುಲೈನಲ್ಲಿ 14 ಮನೆ ಕಳವು ಪ್ರಕರಣಗಳು ನಡೆದಿವೆ. ಕನಿಷ್ಠ 1ಲಕ್ಷದಿಂದ ಗರಿಷ್ಠ 20 ಲಕ್ಷ ರೂ.ವರೆಗೆ ಮನೆ ಕಳವಾಗಿದ್ದು, ಇದೀಗ ನಡೆದಿರುವ ಮನೆ ಕಳವು ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಸಾಕಷ್ಟು ಮನೆ ಕಳವು ಪ್ರಕರಣಗಳು ಬಾಕಿ ಉಳಿದಿವೆ. ಜನತೆ ಮನೆ ಬಾಗಿಲಿಗೆ ಬೀಗ ಹಾಕಿ ಹೋಗಲು ಭಯ ಬೀಳುವಂತಾಗಿದೆ. ಬೀಗ ಹಾಕಿರುವ ಮನೆಗಳನ್ನು ಗುರುತು ಮಾಡಿ ಕಳ್ಳರು ಕೈಚಳಕ ತೋರುತ್ತಿದ್ದಾರೆ.

ಹೆಚ್ಚಿದ ಬೈಕ್‌ ಕಳವು: ಜಿಲ್ಲೆಯಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ಸಾಕಷ್ಟು ನಡೆಯುತ್ತಿದ್ದು, ಇತ್ತೀಚಿಗೆ ರಾಮನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬೈಕ್‌ ಕಳ್ಳನನನ್ನು ಹಿಡಿದು 10 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಪತ್ತೆಯಾಗದ ಬೈಕ್‌ ಕಳವು ಪ್ರಕರಣಗಳು ಸಾಕಷ್ಟಿವೆ. ಬೈಕ್‌ ಕಳ್ಳತನ ಪ್ರಕರಣಗಳ ಜೊತೆಗೆ ಜಿಲ್ಲೆಯಲ್ಲಿ ಸಾಕಷ್ಟು ಇತರ ವಸ್ತುಗಳು, ಹಣ ಕಳವು ಪ್ರಕರಣಗಳು ನಡೆದಿದ್ದು, ಜೂನ್‌ನಲ್ಲಿ 40 ಕಳವು ಪ್ರಕರಣಗಳು ದಾಖಲಾಗಿದ್ದರೆ, ಜುಲೈ ತಿಂಗಳಲ್ಲಿ 31 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಕಳ್ಳತನಗಳಿಂದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಗಂಜಾ, ಜೂಜಿನ ಚಟದಿಂದ ಕಳವು ಪ್ರಕರಣ ಹೆಚ್ಚಳ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಹಿಂದೆ ಗಂಜಾ ವಾಸನೆ ಇದ್ದು, ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಹುತೇಕ ಮಂದಿ ಗಾಂಜಾ ಸೇವನೆಯ ಚಟಕ್ಕೆ ಬಿದ್ದ ಉದಾಹರಣೆ ಇದೆ. ಗಾಂಜಾ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಗಾಂಜಾ ಖರೀದಿ ಮಾಡಲು ಹಣಕ್ಕಾಗಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ನಡೆಯುವ ಜೂಜು ಅಡ್ಡೆಗಳು ಕಳ್ಳರಿಗೆ ದಾರಿ ಮಾಡಿಕೊಟ್ಟಿದ್ದು, ಜೂಜಿನ ಹಣಕ್ಕಾಗಿ ಕಳವು ಮಾಡುವ ಪ್ರಸಂಗಗಳು ನಡೆದಿವೆ.

Advertisement

ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡ ರಚನೆಗೆ ಆಗ್ರಹ: ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್‌ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಸಾರ್ವಜನಿಕರಲ್ಲಿ ಅಪರಾಧ ತಡೆ ಬಗ್ಗೆ ಜಾಗೃತಿ ಮೂಡಿಸುವುದು, ಜನವಸತಿ ಪ್ರದೇಶದಲ್ಲಿ ಗಸ್ತು ತಿರುಗುವುದು. ಪೊಲೀಸ್‌ ಅಧಿಕಾರಿಗಳು ರಾತ್ರಿ ಗಸ್ತು ತಿರುವುದು, ಕಳವು ಪ್ರಕರಣ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡುವುದು ಸೇರಿದಂತೆ ಅಗತ್ಯ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳು ಕಡಿಮೆಯಾಗುವಂತೆ ಪೊಲೀಸ್‌ ಇಲಾಖೆ ಎಚ್ಚರ ವಹಿಸಬೇಕಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಳ್ಳತನಗಳಿಂದ ಜನತೆ ನೆಮ್ಮದಿಯಾಗಿ ನಿದ್ರೆ ಮಾಡದಂ ತಾಗಿದೆ. ಮನೆಯ ಮುಂದೆ ನಿಲ್ಲಿಸಿದ ವಾಹನವನ್ನು ಕಳವು ಮಾಡುತ್ತಿದ್ದಾರೆ. ಪೊಲೀಸರು ಕೂಡಲೇ ಕಳ್ಳತನ ಪ್ರಕರಣಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕಿದೆ. –ರಾಘವೇಂದ್ರ ಮಯ್ನಾ, ನಾಗರಿಕರು, ಚನ್ನಪಟ್ಟಣ

-ಸು.ನಾ. ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next