ಬೆಂಗಳೂರು: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್ ಮಾಡಿ ಕನ್ನ ಹಾಕುತ್ತಿದ್ದ ವೃತ್ತಿಪರ ಕಳ್ಳನನ್ನು ಸುಬ್ರಮಣ್ಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಯಶವಂತಪುರ ನಿವಾಸಿ ಅರ್ಜುನ್ ಬಂಧಿತ. ಬಂಧಿತನಿಂದ 4.5 ಲಕ್ಷ ರೂ. ಮೌಲ್ಯದ 68 ಗ್ರಾಂ ಚಿನ್ನಾಭರಣ, 180 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ಜಪ್ತಿ ಮಾಡಲಾಗಿದೆ. 20 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಅರ್ಜುನ್ ಯಶವಂತಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ. ಪ್ರಾರಂಭದಲ್ಲಿ ಕೊರಿಯರ್ ಸರ್ವೀಸ್ ಮಾಡುತ್ತಿದ್ದ ಆರೋಪಿಯು ನಂತರ ಮನೆಗಳ್ಳತನ ಮಾಡಲು ಪ್ರಾರಂಭಿಸಿದ್ದ. ಈ ಹಿಂದೆ ಜೈಲಿಗೆ ಹೋಗಿ ಇತ್ತೀಚೆಗೆ ಹೊರ ಬಂದಿದ್ದ. ಈತನ ವಿರುದ್ಧ ತಲಘಟ್ಟಪುರ, ತಿಲಕ್‌ನಗರ, ಮಹಾಲಕ್ಷ್ಮೀಪುರ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ.
ಬೀಗ ಹಾಕಿರುವ ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಯು, ಕದ್ದ ಚಿನ್ನಾಭರಣಗಳನ್ನು ತನ್ನ ಪರಿಚಿತ ಸೇಟುವೊಬ್ಬರಿಗೆ ಮಾರಾಟ ಮಾಡುತ್ತಿದ್ದ. ಬಂದ ದಡ್ಡಲ್ಲಿ ಮೋಜು-ಮಸ್ತಿ ಮಾಡುತ್ತಿದ್ದ. ಈ ನಡುವೆ ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯನಗರದ ಆರ್.ಪಿ. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ದ್ವಿಚಕ್ರವಾಹನದಲ್ಲಿ ಓಡಾಡುತ್ತಿದ್ದ ಆರೋಪಿ ಅರ್ಜುನ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತ ಕಳ್ಳತನ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.
ಮನೆ ಕೆಲಸದವಳ ಮನೆಗೆ ಕನ್ನ ಹಾಕಿ ಸಿಕ್ಕಿ ಬಿದ್ದ !:
ಗಾಯತ್ರಿನಗರದ ನಿವಾಸಿ ಬಸಮ್ಮ (50) ಎಂಬುವವರು ಮನೆ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿದ್ದರು. ಮನೆ ಕೆಲಸ ಮಾಡಿ ಕೂಡಿಟ್ಟ ದುಡ್ಡಲ್ಲಿ ಚಿನ್ನಾಭರಣ ಖರೀದಿಸಿ ಮನೆಯ ಬೀರುವಿನಲ್ಲಿ ಇಟ್ಟಿದ್ದರು. ಎಂದಿನಂತೆ ಜು.25ರಂದು ಮನೆಗೆ ಬೀಗ ಹಾಕಿ ಮನೆ ಕೆಲಸಕ್ಕೆ ಬಸಮ್ಮ ಹೋಗಿದ್ದರು. ಆ ವೇಳೆ ಅದೇ ರಸ್ತೆಯಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸುತ್ತಿದ್ದ ಆರೋಪಿ ಅರ್ಜುನ್ ಬಸಮ್ಮನ ಮನೆಯ ಬೀಗ ಒಡೆದು ಬೀರುವಿನಲ್ಲಿದ್ದ 4.20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ. ಮಧ್ಯಾಹ್ನ ಬಸಮ್ಮ ಮನೆಗೆ ಬಂದಾಗ ಕಳ್ಳತನವಾಗಿರುವುದು ಆಕೆಯ ಗಮನಕ್ಕೆ ಬಂದು ಸುಬ್ರಹ್ಮಣ್ಯನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.