ಬೆಂಗಳೂರು: ಇತ್ತೀಚೆಗೆ ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೋಹರ್ ಅವರ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ್ದ ಪ್ರಕರಣ ಪತ್ತೆ ಹಚ್ಚಿರುವ ಪೀಣ್ಯ ಪೊಲೀಸರು, ಉದ್ಯಮಿಯ ಮಾಜಿ ಕಾರಿನ ಚಾಲಕ ಸೇರಿ 11 ಮಂದಿಯನ್ನು ಬಂಧಿಸಿದ್ದಾರೆ.
ಮನೋಹರ್ ಕಾರಿನ ಮಾಜಿ ಚಾಲಕ ನಾಗರಾಜ್ ಮತ್ತು ಆತನ 10 ಮಂದಿ ಸಹಚರರನ್ನು ಬಂಧಿಸಲಾಗಿದೆ. ಆರೋಪಿಗಳು ಡಿ.4ರಂದು ಸಂಜೆ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್‌ಎಂಟಿ ಲೇಔಟ್‌ನಲ್ಲಿರುವ ಕಂಪನಿಯೊಂದರ ಮಾಲೀಕ ಮನೋಹರ್ ಎಂಬವರ ಮನೆಗೆ ನುಗ್ಗಿದ ದುಷ್ಕರ್ಮಿಗಳು 500 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದೋಚಿದ್ದರು. ಈ ಸಂಬಂಧ ಮನೋ ಹರ್ ಪುತ್ರ ರೂಪೇಶ್ ದೂರು ನೀಡಿದ್ದರು.
ಡಿ.4ರಂದು ಸಂಜೆ ಮನೋಹರ್ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಈ ವೇಳೆ ಸಂಜೆ 6 ಗಂಟೆಗೆ ವ್ಯಕ್ತಿಯೊಬ್ಬ ಪೊಲೀಸ್ ಸಮವಸ್ತ್ರದಲ್ಲಿ ಮನೋಹರ್ ಮನೆ ಬಾಗಿಲು ಬಡಿದಿದ್ದಾನೆ. ಆಗ ಮನೋಹರ್ ಪತ್ನಿ ಸುಜಾತ ಬಾಗಿಲು ತೆರೆದಿದ್ದಾರೆ. “ತಾವು ಪೊಲೀಸರು, ಮನೆ ಮಾಲೀಕರ ವಿರುದ್ಧ ದೂರು ದಾಖಲಾಗಿದೆ. ಹೀಗಾಗಿ ಮನೆ ತಪಾಸಣೆ ನಡೆಸಬೇಕಿದೆ’ ಎಂದ ಪೊಲೀಸ್ ವಸ್ತ್ರಧಾರಿ, ತನ್ನ ಐದಾರು ಮಂದಿ ಸಹಚರರನ್ನು ಒಳಗಡೆ ಕರೆಸಿಕೊಂಡಿದ್ದಾನೆ.
ಕೌಟುಂಬಿಕ ವಿಚಾರವಾಗಿ ದಾಯಾದಿ ಕಲಹ ಇದ್ದರಿಂದ ನಿಜವಾದ ಪೊಲೀಸರೇ ಬಂದಿದ್ದಾರೆ ಎಂದು ಭಾವಿಸಿ ಆರೋಪಿಗಳ ಜತೆ ತಾಯಿ, ಮಗ ಮಾತನಾಡಿದ್ದಾರೆ. ಮನೆಯೊಳಗೆ ಬರುತ್ತಿದ್ದಂತೆ ಆರೋಪಿಗಳು ಮಾರಕಾಸ್ತ್ರ ತೋರಿಸಿ ತಾಯಿ, ಮಗನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಮನೆಯಲ್ಲಿಟ್ಟ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ವೇಳೆ ಮನೆಯ ಸಿಸಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿ, ಡಿವಿಆರ್ ಕೊಂಡೊಯ್ದಿದ್ದರು.
ಪ್ರಾಥಮಿಕ ವಿಚಾರಣೆಯಲ್ಲಿ ಮನೋಹರ್ ಅವರ ಕಂಪನಿಯಲ್ಲಿ ಒಂದು ವರ್ಷದ ಹಿಂದೆ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ ನಾಗರಾಜ್ ಎರಡು ತಿಂಗಳ ಕಾಲ ಕೆಲಸ ಮಾಡಿ, ಬಳಿಕ ಕೆಲಸ ಬಿಟ್ಟಿದ್ದ. ಈ ವೇಳೆಯೇ ಮನೋಹರ್ ಅವರ ಆರ್ಥಿಕ ಸ್ಥಿತಿ ಮತ್ತು ಆಸ್ತಿ ವಿಚಾರವಾಗಿ ಕೌಟುಂಬಿಕ ಗಲಾಟೆ ಇರುವ ಬಗ್ಗೆ ತಿಳಿದುಕೊಂಡು ತನ್ನ ಸಹಚರರ ಜತೆ ಸೇರಿ ದರೋಡೆಗೆ ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ಹೇಳಿದರು.