ಪಡೀಲು: ರಂಗಭೂಮಿ ಕಾರ್ಯ ನಿರಂತರವಾಗುವ ಮೂಲಕ ಜನ ಸಮುದಾಯದ ಪರವಾಗಿ ದೀರ್ಘ ಉಸಿರಾಗಲಿ ಎಂದು ಹಿರಿಯ ನಾಟಕಕಾರ ರಾಮಚಂದ್ರ ಬೈಕಂಪಾಡಿ ಹೇಳಿದರು. ನಗರದ ಪಡೀಲ್ ಅಮೃತ ಕಾಲೇಜಿನಲ್ಲಿ ಸಂಕೇತ ಮಂಗಳೂರು ಹಮ್ಮಿಕೊಂಡ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಹಸಿರು ರಂಗ ಜಾಥಾಕ್ಕೆ ಅವರು ಚಾಲನೆ ನೀಡಿದರು.
ಉದ್ಯಮಿ ಕುಶಲ್‌ಕುಮಾರ್ ಶಕ್ತಿನಗರ ಮಾತನಾಡಿದರು. ಹಿರಿ-ಕಿರಿ ರಂಗಕರ್ಮಿ ಗಳೊಂದಿಗೆ ಅಂಚೆ ಪತ್ರದ ಮೂಲಕ ರಂಗ ಸಂಪರ್ಕ ಸಾಧಿಸುವ ಕಾರ್ಯಕ್ಕೆ ಈ ವೇಳೆ ಚಾಲನೆ ನೀಡಲಾಯಿತು. ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ರಂಗ ಶಿಕ್ಷಣ ಕಾರ್ಯಾಗಾರ ಮಾಡುವ ಬಗ್ಗೆ ಘೋಷಿಸಲಾಯಿತು.
ವಿನೋದ್ ಶೆಟ್ಟಿ ಕೃಷ್ಣಾಪುರ ವಿಶ್ವ ರಂಗಭೂಮಿ ಸಂದೇಶ ವಾಚಿಸಿದರು. ಸಂಚಾಲಕ ಜಗನ್ ಪವಾರ್ ಪ್ರಸ್ತಾವನೆಗೈದರು. ಉಪಾಧ್ಯಕ್ಷ ಹರೀಶ್ ಕೆ. ಶಕ್ತಿನಗರ ಸ್ವಾಗತಿಸಿದರು. ಕಾರ್ಯದರ್ಶಿ ನೀಲಾಧರ್ ರಂಗ ಕಾರ್ಯಾಗಾರ ಘೋಷಣ ಪತ್ರ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಅವರು ನಿರೂಪಿಸಿದರು.
ಶಾಲಿನಿ ಅವರಿಂದ ಏಕವ್ಯಕ್ತಿ ಪ್ರದರ್ಶನ, ವೀಣಾ ಕಾಸರಗೋಡು, ಪ್ರತೀಕ್ಷಾ, ದಿವ್ಯಾ ಅವರಿಂದ ರಂಗ ಗೀತೆಗಳು, ಅಂಜಲಿ, ಪ್ರಜ್ಞಾ ಅವರಿಂದ ರಂಗನೃತ್ಯ ಜರಗಿತು.
ಪುರಸ್ಕಾರ
ಹಿರಿಯ ರಂಗ ಕಲಾವಿದ ರಘುರಾಮ್ ಶೆಟ್ಟಿ ಬೆಳ್ತಂಗಡಿ ಅವರಿಗೆ ರಂಗ ಸಾಧನ ಸಮ್ಮಾನ ಮಾಡಲಾಯಿತು. ಕಲಾವಿದೆ ದೀಕ್ಷಿತಾ ಕೋಳ್ಯೂರು ಅವರಿಗೆ ರಂಗದೀಕ್ಷೆ ನೀಡಿ ಪುರಸ್ಕರಿಸಲಾಯಿತು.