ಚಾಮರಾಜನಗರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರ್ಘಟನೆಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಸಾವಿಗೀಡಾದವರ ಕುಟುಂಬ ಸ್ಥರಿಗೆ 50 ಲಕ್ಷ ಪರಿಹಾರ, ಸಂತ್ರಸ್ತ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಈ ದುರ್ಘಟನೆಗೆ ಕಾರಣಕರ್ತರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಎಸ್ ಡಿಪಿಐ ಕಾರ್ಯಕರ್ತರು ಸೋಮವಾರ ರಾತ್ರಿ ಜಿಲ್ಲಾ ಕೋವಿಡ್ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆ ಮುಂದೆ, ಘಟನೆಯಲ್ಲಿ ಮೃತರಾದವರ ಭಾವಚಿತ್ರ ಹಾಗೂ ಮೋಂಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕೆಲವು ಮೃತರ ಕುಟುಂಬದವರೂ ಪಾಲ್ಗೊಂಡಿದ್ದರು.
ಸೂಕ್ತ ಕ್ರಮ ತೆಗೆದುಕೊಂಡಿಲ್ಲ: ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ ಮಾತನಾಡಿ, ಜಿಲ್ಲಾ ಕೋವಿಡ್ ಆಸ್ಪತ್ರೆ ಯಲ್ಲಿ 2021ರ ಮೇ 2ರಂದು ತಡರಾತ್ರಿ ಆಕ್ಸಿಜನ್ ಪೂರೈಕೆಯಾಗದೆ 37 ಮಂದಿ ಮೃತರಾಗಿ ಈಗಾಗಲೇ ಒಂದು ವರ್ಷ ಕಳೆದಿದೆ. ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಅವರು ತಮ್ಮ ಪ್ರಾಥಮಿಕ ತನಿಖಾ ವರದಿಯಲ್ಲಿ ಘಟನೆಗೆ ಆಕ್ಸಿಜನ್ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಅಂದಿನ ಜಿಲ್ಲಾಧಿಕಾರಿಯವರೇ ನೇರ ಹೊಣೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖೀಸಿದ್ದಾರೆ. ಇಷ್ಟಾದರೂ ಸಹ ಜಿಲ್ಲಾಧಿಕಾರಿ ಅಥವಾ ಇನ್ನಾವ ಅಧಿಕಾರಿಯ ವಿರುದ್ಧ ಸಹ ಸರ್ಕಾರ ಇಲ್ಲಿಯವರೆಗೂ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಇನ್ನೊಂದು ಕಡೆ ಸರ್ಕಾರ ನೇಮಕ ಮಾಡಿರುವ ಏಕಸದಸ್ಯ ಬಿ.ಎ.ಪಾಟೀಲ್ ಆಯೋಗದ ವರದಿ ಸಹ ಬಹಿರಂಗಗೊಂಡಿಲ್ಲ. ಒಟ್ಟು 37 ಮೃತರ ಕುಟುಂಬಸ್ಥರ ಪೈಕಿ ಕೇವಲ 24 ಮಂದಿಯ ಕುಟುಂಬಸ್ಥರಿಗೆ ಅಲ್ಪಸ್ವಲ್ಪ ಪರಿಹಾರ ನೀಡಿದೆ. ಇನ್ನು 13 ಸಂತ್ರಸ್ಥ ಕುಟುಂಬಸ್ಥರಿಗೆ ಪರಿಹಾರದ ಒಂದು ನಯಾಪೈಸೆ ಸಹ ಸಿಕ್ಕಿರುವುದಿಲ್ಲ.
ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ: ದುರ್ಘಟನೆಗೆ ಬಲಿಯಾದವರಲ್ಲಿ ಶೇಕಡ 50ಕ್ಕಿಂತ ಹೆಚ್ಚು ಎಸ್.ಸಿ./ ಎಸ್.ಟಿ ಸಮುದಾಯದವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಕುಟುಂಬದ ಆಧಾರ ಸ್ತಂಭವಾಗಿದ್ದ ಮನೆಯ ಯಜಮಾನ ಇಲ್ಲದೇ ಈ ಬಡಪಾಯಿ ಕುಟುಂಬಸ್ಥರ ಜೀವನ ಅಸ್ತವ್ಯಸ್ಥ ವಾಗಿದ್ದು, ಸಂತ್ರಸ್ತರ ಕುಟುಂಬಸ್ಥರಲ್ಲಿ ಮಕ್ಕಳು ಸಹ ಇದ್ದು, ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಆರೈಕೆಗೆ ಬಹಳ ತೊಂದರೆ ಆಗುತ್ತಿದೆ ಎಂದರು.
ಉಪಾಧ್ಯಕ್ಷ ಸೈಯದ್ ಆರೀಫ್ ಪ್ರಧಾನ ಕಾರ್ಯ ದರ್ಶಿ ಮಹೇಶ್, ಕಾರ್ಯದರ್ಶಿ ಜಬೀನೂರ್, ಖಜಾಂಚಿ ನಯಾಜ್ ಉಲ್ಲಾ, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಅಪ್ಸರ್ ಪಾಷಾ, ಪಿಎಫ್ಐ ಅಧ್ಯಕ್ಷ ರಾದ ಕಫೀಲ್ ಅಹಮದ್, ದಲಿತ ಮುಕಂಡ ಸಂಘ ಸೇನಾ, ಸಂತ್ರಸ್ತರ ಕುಟುಂಬದ ಮಂಜುನಾಥ, ರಾಣಿ, ಪುಷ್ಪಾ ಸಿದ್ದರಾಜಮ್ಮ, ಸಂತೋಷ್, ರಮೇಶ್ ಬಾಬು, ಅರುಣ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ನ್ಯಾಯ ಕಲ್ಪಿಸಿಕೊಡುವುದರಲ್ಲಿ ಸರ್ಕಾರ ವಿಫಲ ಸಂತ್ರಸ್ತರ ಈ ದುಸ್ಥಿತಿಯನ್ನು ನೋಡಿಕೊಂಡು ಸರ್ಕಾರ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿರುವುದು ದುರಂತ. ಸಂತ್ರಸ್ತ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ, ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕೋರಿ ಮನವಿ ನೀಡಿರುತ್ತೇವೆ. ಆದರೆ ಸರ್ಕಾರ ಇಲ್ಲಿಯವರೆಗೂ ಸಂತ್ರಸ್ತರಿಗೆ ನ್ಯಾಯ ಕಲ್ಪಿಸಿಕೊಡುವುದರಲ್ಲಿ ವಿಫಲವಾಗಿದೆ. ದುರ್ಘಟನೆ ಆದ
ದಿನದಿಂದಲೂ ನಮ್ಮ ಪಕ್ಷ ನ್ಯಾಯಕ್ಕಾಗಿ ಆಗ್ರಹಿಸಿ ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ಥರ ಪರ ಹೋರಾಟಗಳನ್ನು ಮಾಡಿ ಮನವಿ ನೀಡಿರುತ್ತೇವೆ. ಆದರೆ ನ್ಯಾಯ ಮಾತ್ರ ಮರೀಚಿಕೆಯಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತು ಸಂತ್ರಸ್ತ ಕುಟುಂಬಸ್ಥರಿಗೆ ನ್ಯಾಯ ಕೊಡಿಸಿಕೊಡಬೇಕೆಂದು ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ ಒತ್ತಾಯಿಸಿದರು.