ನಿನ್ನ ಮಾತುಗಳಲ್ಲಿ ಅವನು ಹೊಸತೊಂದು ಬೆರಗಾಗಿ ನಲಿಯುತ್ತಿದ್ದ. ಎಲ್ಲಿಂದ ಮಾತು ಶುರುವಾದರೂ ಅವನತ್ತಲೇ ನಿನ್ನ ಮಾತು ಹೊರಳುತ್ತಿತ್ತು. ನಿನ್ನ ಕಂಗಳು ಹೊಸತೊಂದು ಕನಸು ಕಂಡಂತೆ ಹೊಳೆಯುತ್ತಿದ್ದವು. ನಾನು ರಾತ್ರಿಯಿಡೀ ಉರಿದು ಸೂರ್ಯೋದಯದ ಸಮಯಕ್ಕೆ ಆರಿ ಹೋಗುತ್ತಿರುವ ಹಣತೆಯಂತಾಗಿದ್ದೆ.
ನಿಲುಕದ ನಕ್ಷತ್ರವೇ…
ನನ್ನ ಅಂತರಾಳದಲ್ಲಿ ಒಬ್ಬನೇ ಅದೆಷ್ಟೋ ದಿನಗಳಿಂದ ಅನುಭವಿಸುತ್ತಿದ್ದ ಸಿಹಿ ಸಂಭ್ರಮವೊಂದನ್ನು, ನಿನ್ನ ಮುಖದಲ್ಲಿ ತುಂಬಿ ತುಳುಕುತ್ತಿದ್ದ ಎಂದಿನಂತಿಲ್ಲದ ಹೊಚ್ಚ ಹೊಸ ನಗೆಯೊಂದು ಕೊಂದು ಹಾಕಿತು. ನಾನೋ ಯಾವತ್ತೂ ಒಳಮುಚ್ಚುಗ. ನನ್ನೊಳಗನ್ನೆಲ್ಲಾ ನಿನ್ನೆದುರು ಹೇಳಿಕೊಳ್ಳೋಣ ಅಂದುಕೊಂಡಾಗೆಲ್ಲಾ, ಬರೀ ಒಣ ಶಬ್ಧಗಳಲ್ಲಷ್ಟೇ ನನ್ನ ಆದ್ರì ಪ್ರೀತಿಯನ್ನ ಯಾಕಾದರೂ ನಿವೇದಿಸಬೇಕು? ಅದೇನಿದ್ದರೂ ಕಣ್ಣ ಭಾಷೆ, ತುಟಿಯಂಚಿನ ಕಿರು ನಗೆಯ ಮಿಂಚಿನಾಸೆ. ಮೌನದಲ್ಲೇ ಎಲ್ಲ ಹೇಳಬಹುದಲ್ಲವಾ ಎಂಬ ಜಿಜ್ಞಾಸೆ. ಕಾಯಿ ಹಣ್ಣಾಗುವವರೆಗೆ ಕಾಯಬೇಕೆಂದು ನನಗೆ ನಾನೇ ಮನದೊಳಗೆ ಕೊಟ್ಟುಕೊಂಡ ಭಾಷೆ. ನಿನ್ನೆಡೆಗೆ ನನ್ನೊಳಗೇ ಇಂಥವೇ ಮುಗಿಯದ ನೂರಾರು ಅನುರಾಗದ ಮೂಲರಾಗಗಳ ಆಲಾಪನೆ. ನೀನೆಂದರೆ ನನ್ನೊಳಗೆ ಅದಮ್ಯ ಆರಾಧನೆ.
ಆದರೆ ನೀನೆಂಥಾ ತುಂಟ ಹುಡುಗಿ, ನಿಂಗೆ ಇದ್ಯಾವುದೂ ಅರಿವಿಗೆ ಬರಲೇ ಇಲ್ಲ. ಒಂದು ಪುಟಾಣಿ ಕಾಫಿಬೈಟ್ ಮತ್ತೂಂದು ದೊಡ್ಡ ಡೈರಿ ಮಿಲ್ಕ್ ಚಾಕೋಲೇಟ್ ಇಟ್ಟು , ಯಾವುದು ಬೇಕು ತಗೋ ಎಂದರೆ; ಹೊಳೆಯುವ ಕಂಗಳಿಂದ, ಖುಷಿಖುಷಿಯಾಗಿ, ಒಂದಿಷ್ಟೂ ಯೋಚಿಸದೇ ದೊಡ್ಡ ಡೈರಿ ಮಿಲ್ಕ್ ಚಾಕ್ಲೇಟನ್ನೇ ಎತ್ತಿಟ್ಟುಕೊಂಡ ಮಗುವಿನಂತೆ ನಿನ್ನ ಸಂಭ್ರಮವಿತ್ತು.
ನಿನ್ನ ಮಾತುಗಳಲ್ಲಿ ಅವನು ಹೊಸತೊಂದು ಬೆರಗಾಗಿ ನಲಿಯುತ್ತಿದ್ದ. ಎಲ್ಲಿಂದ ಮಾತು ಶುರುವಾದರೂ ಅವನತ್ತಲೇ ನಿನ್ನ ಮಾತು ಹೊರಳುತ್ತಿತ್ತು . ನಿನ್ನ ಕಂಗಳು ಹೊಸತೊಂತು ಕನಸು ಕಂಡಂತೆ ಹೊಳೆಯುತ್ತಿದ್ದವು. ನಾನು ರಾತ್ರಿಯಿಡೀ ಉರಿದು ಸೂರ್ಯೋದಯದ ಸಮಯಕ್ಕೆ ಆರಿ ಹೋಗುತ್ತಿರುವ ಹಣತೆಯಂತಾಗಿದ್ದೆ. ಭರಿಸಲಾಗದ ಸಂಕಟವನ್ನು ಯಾರೊಂದಿಗೂ ಹಂಚಿಕೊಳ್ಳಲಾಗದ ನಿಸ್ಸಹಾಯಕತೆಯಲ್ಲಿ ನರಳುತ್ತಾ, ನಿನ್ನೆದುರು ನಗುತ್ತಿದ್ದೆ. ಆದರೂ ನಿರ್ಲಜ್ಜ ಮನಸಿಗೆ ನಿನ್ನದೇ ಹುಚ್ಚು. ನಿನಗೆ ಇವತ್ತಲ್ಲ ನಾಳೆ ನನ್ನ ಪ್ರೀತಿ ಅರ್ಥವಾಗುತ್ತದೆಂದು ಕಾಯುತ್ತಿದ್ದೆ. ಈಗ ಆ ಕಾಯುವಿಕೆ ಅರ್ಥ ಕಳೆದುಕೊಂಡಿದೆ. ನಮ್ಮಿಬ್ಬರ ಮಧ್ಯೆ ಮತ್ಯಾರೋ ಇದ್ದಾರೆ ಅನ್ನೋದನ್ನ, ಈ ಮನಸು ಅರಗಿಸಿಕೊಂಡಿತಾದರೂ ಹೇಗೆ?
ನಿನ್ನ ರಾಜ ಕುಮಾರ ಮತ್ತೆಲ್ಲೋ ನಿನಗಾಗಿ ಕಾಯುತ್ತಿದ್ದಾನೆ. ನೀನು ಅವನತ್ತಲೇ ಓಡುವ ನದಿ. ಅವನು ಪಕ್ಕನೆ ಸಿಕ್ಕುವ ಕಡಲು. ನಾನೋ ಅದ್ಯಾವುದೋ ಸಾವಿರಾರು ಮೈಲಿಯಾಚಿನ ಕುದಿಯುವ ಮರುಭೂಮಿ. ನನ್ನ ಬದುಕಿನ ಹಾದಿಯಲ್ಲಿ ನಿನ್ನ ಹೆಜ್ಜೆಗಳು ಇವತ್ತಿಗೆ ಮುಗಿಯಿತು. ಇನ್ನೇನಿದ್ದರೂ ನನ್ನದು ಒಬ್ಬಂಟಿ ಖಾಬೋಜಿ ಜೀವನ. ಈ ಮೊದಲೂ ಒಬ್ಬಂಟಿಯೇ! ಆದರೂ ಯಾವತ್ತಾದರೂ ನೀ ನನ್ನೆಡೆಗೆ ನಡೆದು ಬಂದೀಯೆಂಬ ಹಂಬಲವೊಂದು, ನಿರೀಕ್ಷೆಯ ವೇಷ ತೊಟ್ಟು ಮನದ ಮುಂಬಾಗಿಲು ತೆರೆದು, ಒಳಮನೆಯಲ್ಲಿ ಪದ್ಮಾಸನ ಹಾಕಿಕೊಂಡು ಕುಳಿತಿತ್ತು. ಇದ್ದ ಒಂದು ಆಸೆಯೂ ಇಂದು ಮಣ್ಣು ಪಾಲಾಯಿತು.
ಬದುಕಿನ ಪುಟದಲಿ ಬರೆದಿದ್ದ ಒಂದೇ ಒಂದು ಹೆಸರನ್ನೂ, ಕಾಣದ ಕೈಯೊಂದು ಕಣ್ಣ ಮುಂದೆಯೇ ಅಳಿಸಿ ಹಾಕಿದೆ. ಇಷ್ಟು ದಿನ ನನ್ನೊಳಗಿನ ಪ್ರೀತಿಯನ್ನು ಹೇಳಿಕೊಳ್ಳದೇ ಹೋದದ್ದಕ್ಕೆ, ನೀ ಕೈ ತಪ್ಪಿ ಹೋದೆಯೆಂದು ನನ್ನನ್ನೇ ನಾನು ಶಪಿಸಿಕೊಳ್ಳಲಾ ಅಥವಾ ಹೇಳಿದ್ದರೆ ನಿನ್ನಿಂದ ಆಗುತ್ತಿದ್ದ ನಿರಾಕರಣೆಯ ಶಾಪದಿಂದ ಮುಕ್ತನಾದೆ ಎಂದು ಸಮಾಧಾನ ಹೇಳಿಕೊಳ್ಳಲಾ?
ಪುಟ್ಟ ಹೃದಯ ಕೊಟ್ಟ ನಗುವ
ಕೆಟ್ಟ ವಿಧಿಯು ಸುಟ್ಟಿತು…..
ಕಣ್ಮುಚ್ಚಿ ಕುಳಿತಿದ್ದೇನೆ, ನಾಲ್ಕು ಹನಿಗಳಿಗಾಗಿ ಕಾಯುತ್ತಾ…
ಜೀವ ಮುಳ್ಳೂರು