Advertisement

ವಿಶ್ವದ ದೊಡ್ಡ ಕ್ರೀಡಾಂಗಣ “ಭಾರತದ ಹೆಮ್ಮೆ’

10:20 AM Feb 23, 2020 | Lakshmi GovindaRaj |

ಪ್ರೇಕ್ಷಕರ ಸಾಮರ್ಥ್ಯದಲ್ಲಿ ವಿಶ್ವದ ಬೃಹತ್‌ ಕ್ರಿಕೆಟ್‌ ಸ್ಟೇಡಿಯಂ ಅನ್ನು ಭಾರತ ನಿರ್ಮಿಸಿದ್ದು ಫೆ.24ರಂದು ಉದ್ಘಾಟನೆಗೊಳ್ಳುತ್ತಿದೆ. ಈಗ ಗುಜರಾತ್‌ನೆಲ್ಲೆಡೆ ಹಬ್ಬದ ವಾತಾವರಣ. ಸರ್ದಾರ್‌ ಪಟೇಲ್‌ ಸ್ಟೇಡಿಯಂ ನವೀಕರಣಗೊಂಡಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.

Advertisement

ಅಮೆರಿಕದ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌, ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಬೃಹತ್‌ ಕ್ರಿಕೆಟ್‌ ಸ್ಟೇಡಿಯಂ ಲೋಕಾರ್ಪಣೆ­ಗೊಳ್ಳುತ್ತಿರುವುದು ವಿಶೇಷ. ಇಂತಹ ಸುಸಂದರ್ಭದಲ್ಲಿ ಸರ್ದಾರ್‌ ಪಟೇಲ್‌ ಅಥವಾ ಮೊಟೆರಾ ಸ್ಟೇಡಿಯಂನ ವಿಶೇಷತೆಗಳನ್ನು ಇಲ್ಲಿ ಉಲ್ಲೇಖೀಸಬೇಕಿದೆ. ಕ್ರೀಡಾಂಗಣ, ಹಿಂದಿನ ಐತಿಹಾಸಿಕ ಪಂದ್ಯಗಳ ಬಗೆಗಿನ ವಿವರವನ್ನು ಇಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಗವಾಸ್ಕರ್‌, ಕಪಿಲ್‌ಗೆ ಸ್ಮರಣೀಯ ಕ್ರೀಡಾಂಗಣ: ಸರ್ದಾರ್‌ ಪಟೇಲ್‌ ಕ್ರೀಡಾಂಗಣಕ್ಕೆ ಮೊಟೆರಾ ಕ್ರೀಡಾಂಗಣ­ವೆಂದೂ ಕರೆಯುತ್ತಾರೆ. 1983ರಲ್ಲಿ ಭಾರತ -ವೆಸ್ಟ್‌ ಇಂಡೀಸ್‌ ಮೊದಲ ಟೆಸ್ಟ್‌ ಪಂದ್ಯಕ್ಕೆ ಸರ್ದಾರ್‌ ಪಟೇಲ್‌ ಕ್ರೀಡಾಂಗಣ ಆತಿಥ್ಯವಹಿಸಿತ್ತು. 19868-7ರಲ್ಲಿ ನಡೆದಿದ್ದ ಪಾಕಿಸ್ತಾನ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಸುನಿಲ್‌ ಗವಾಸ್ಕರ್‌ ಟೆಸ್ಟ್‌ನಲ್ಲಿ ಒಟ್ಟಾರೆ 10 ಸಾವಿರ ರನ್‌ ಬಾರಿಸಿದ ಸಾಧನೆ ಮಾಡಿದ್ದರು.

ಇದಾದ ಏಳು ವರ್ಷದ ಬಳಿಕ ಭಾರತ ತಂಡದ ಖ್ಯಾತ ನಾಯಕರಲ್ಲಿ ಒಬ್ಬರಾಗಿರುವ ಕಪಿಲ್‌ದೇವ್‌ ಕೂಡ ಇಲ್ಲಿ ಸ್ಮರಣೀಯ ದಾಖಲೆ ನಿರ್ಮಿಸಿದ್ದರು. ಕಪಿಲ್‌ದೇವ್‌ ವೃತ್ತಿ ಜೀವನದ 432ನೇ ಟೆಸ್ಟ್‌ ವಿಕೆಟ್‌ ಅನ್ನು ಪಡೆದರು. ರಿಚರ್ಡ್‌ ಹ್ಯಾಡ್ಲಿ ದಾಖಲೆ ಮುರಿದು ಟೆಸ್ಟ್‌ನಲ್ಲಿ ಭಾರತೀಯರೊಬ್ಬರ ಮೊದಲ ಸಾಧನೆಯನ್ನು ಬರೆದರು. ಈ ಕ್ರೀಡಾಂಗಣದ ವಿಶೇಷವೆಂದರೆ ಆತಿಥ್ಯವಹಿಸಿದ ಆರಂಭದ 4 ಟೆಸ್ಟ್‌ನಲ್ಲಿ ಮೂರು ಪಂದ್ಯದಲ್ಲಿ ಪೂರ್ಣ ಫ‌ಲಿತಾಂಶ ಸಿಕ್ಕಿದೆ.

ಸಚಿನ್‌, ಎಬಿಡಿ ವಿಲಿಯರ್ಗೆ ಅದೃಷ್ಟದ ತಾಣ: 1999 ಅಕ್ಟೋಬರ್‌ನಲ್ಲಿ ಭಾರತ -ನ್ಯೂಜಿಲೆಂಡ್‌ ನಡುವೆ ಟೆಸ್ಟ್‌ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಸಚಿನ್‌ ತೆಂಡುಲ್ಕರ್‌ ಮೊದಲ ದ್ವಿಶತಕ ಬಾರಿಸಿ ಸಂಭ್ರಮಿಸಿದ್ದರು. 2009ರಲ್ಲಿ ಸಚಿನ್‌ ತೆಂಡುಲ್ಕರ್‌ ಶ್ರೀಲಂಕಾ ವಿರುದ್ಧ ನ.16ರಂದು ಆಡುವ ಮೂಲಕ 20 ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನವನ್ನು ಪೂರೈಸಿದರು. ಮಾತ್ರವಲ್ಲ, 30 ಸಾವಿರ ಅಂತಾರಾಷ್ಟ್ರೀಯ ಕ್ರಿಕೆಟ್‌ ರನ್‌ ಅನ್ನು ಕೂಡ ಪೂರೈಸಿದರು. 2011 ವಿಶ್ವಕಪ್‌ ಏಕದಿನ ಕ್ರಿಕೆಟ್‌ ಕೂಟದ ಫೈನಲ್‌ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದು ವಿಶೇಷ.

Advertisement

ಈ ವೇಳೆ ಸಚಿನ್‌ ತೆಂಡುಲ್ಕರ್‌ ಆಸ್ಟ್ರೇಲಿಯ ವಿರುದ್ಧ ಆಡುವ ಮೂಲಕ 18 ಸಾವಿರ ರನ್‌ ಪೂರೈಸಿದರು. ವಿದೇಶಿ ಕ್ರಿಕೆಟಿಗರಿಗೂ ಹಲವು ನೆನಪಿನ ಬುತ್ತಿಯನ್ನು ಸರ್ದಾರ್‌ ಪಟೇಲ್‌ ಕ್ರೀಡಾಂಗಣ ಕಟ್ಟಿಕೊಟ್ಟಿದೆ. ಅದರಲ್ಲಿ ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿಡಿ ವಿಲಿಯರ್ಗೆ, ಹೌದು, 2008ರಲ್ಲಿ ಭಾರತದ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಎಬಿಡಿ ವಿಲಿಯರ್ ದ್ವಿಶತಕ ಹೊಡೆದಿದ್ದರು. ಹೀಗಾಗಿ ಅವರ ಪಾಲಿಗೂ ಈ ಕ್ರೀಡಾಂಗಣ ಅದೃಷ್ಟದ ತಾಣ.

ದೊಡ್ಡ ಸಂಖ್ಯೆಯ ಪ್ರೇಕ್ಷಕರ ಸಾಮರ್ಥ್ಯ: ಸರ್ದಾರ್‌ ಪಟೇಲ್‌ ಸ್ಟೇಡಿಯಂ ಒಟ್ಟಾರೆ 63 ಎಕರೆ ವ್ಯಾಪ್ತಿ ಹೊಂದಿದೆ. 1985ರಿಂದ 2015ರ ತನಕ ಈ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಆಸನದ ಒಟ್ಟು ಸಂಖ್ಯೆ ಇದ್ದದ್ದು 49 ಸಾವಿರ. 1982ರಲ್ಲಿ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿತ್ತು. 2015ರಲ್ಲಿ ಈ ಕ್ರೀಡಾಂಗಣವನ್ನು ಒಡೆದು ಹಾಕಿ ಹೊಸದಾಗಿ ಕಟ್ಟಲು ನಿರ್ಧರಿಸಲಾಯಿತು.

ಸುಮಾರು 700 ಕೋಟಿ ರೂ.ಗೂ ಹೆಚ್ಚು ಹಣವನ್ನು ವಿನಿಯೋಗಿಸಿ 2017ರಿಂದ 2020ರ ಅವಧಿಯಲ್ಲಿ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಲಾಗಿತ್ತು. ವಿಶೇಷವೆಂದರೆ ಪ್ರೇಕ್ಷಕರ ಆಸನದ ಸಾಮರ್ಥ್ಯದಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್‌ ಕ್ರೀಡಾಂಗಣ (ಎಂಸಿಜಿ)ಗಿಂತ ವಿಶ್ವದ ದೊಡ್ಡ ಕ್ರೀಡಾಂಗಣವಾಗಿದೆ. ನವೀಕರಣಗೊಂಡ ಸರ್ದಾರ್‌ ಪಟೇಲ್‌ ಕ್ರೀಡಾಂಗಣದಲ್ಲಿ 1,10,000 ಸಾವಿರ ಮಂದಿ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಮೆಲ್ಬರ್ನ್ ಕ್ರೀಡಾಂಗಣ ಹಾಲಿ ವೀಕ್ಷಕರ ಆಸನದ ಸಾಮರ್ಥ್ಯ 90 ಸಾವಿರ.

ಸರ್ದಾರ್‌ ಪಟೇಲ್‌ ಕ್ರೀಡಾಂಗಣದ ನೆನಪುಗಳು: ಟೆಸ್ಟ್‌ ದಾಖಲೆಗಳು
760/7 ಅತ್ಯಧಿಕ ಇನಿಂಗ್ಸ್‌ ಸ್ಕೋರ್‌: 2009ರಲ್ಲಿ ಭಾರತ ವಿರುದ್ಧ ಶ್ರೀಲಂಕಾ 2ನೇ ಇನಿಂಗ್ಸ್‌ 760/7 ಡಿಕ್ಲೇರ್‌

ಕಳಪೆ ರನ್‌: 2008ರಲ್ಲಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗೆ ಆಲೌಟಾಗಿತ್ತು.

ವೈಯಕ್ತಿಕ ಅತ್ಯಧಿಕ ರನ್‌: 2009ರಲ್ಲಿ ಭಾರತ ವಿರುದ್ಧ ಮಹೇಲ ಜಯವರ್ಧನೆ 435 ಎಸೆತದಲ್ಲಿ 275 ರನ್‌ ಬಾರಿಸಿದ್ದು ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಅತ್ಯುತ್ತಮ ಬೌಲಿಂಗ್‌: 1983ರಲ್ಲಿ ಕಪಿಲ್‌ದೇವ್‌ ವೆಸ್ಟ್‌ ಇಂಡೀಸ್‌ ವಿರುದ್ಧ ಇನಿಂಗ್ಸ್‌ವೊಂದರಲ್ಲಿ 83ಕ್ಕೆ9 ವಿಕೆಟ್‌ ಕಬಳಿಸಿದ್ದು ಅತ್ಯುತ್ತಮ ನಿರ್ವಹಣೆಯಾಗಿದೆ.

ದ್ರಾವಿಡ್‌ ಅತ್ಯಧಿಕ ರನ್‌: ರಾಹುಲ್‌ ದ್ರಾವಿಡ್‌ ಈ ಕ್ರೀಡಾಂಗಣದಲ್ಲಿ ಒಟ್ಟಾರೆ 7 ಪಂದ್ಯ ಆಡಿದ್ದು 771 ರನ್‌ ಬಾರಿಸಿ ಅತ್ಯಧಿಕ ರನ್‌ ಬಾರಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಏಕದಿನ ದಾಖಲೆಗಳು
ಅತ್ಯಧಿಕ ಒಟ್ಟು ರನ್‌ (ತಂಡ): 2010ರಲ್ಲಿ ಭಾರತ ವಿರುದ್ಧ ದಕ್ಷಿಣ ಆಫ್ರಿಕಾ 365/2

ಕಳಪೆ ಒಟ್ಟು ರನ್‌ (ತಂಡ): 2006 ವೆಸ್ಟ್‌ ಇಂಡೀಸ್‌ ವಿರುದ್ಧ ಜಿಂಬಾಬ್ವೆ 85 ರನ್‌ಗೆ ಕುಸಿದಿತ್ತು.

ವೈಯಕ್ತಿಕ ಅತ್ಯಧಿಕ ರನ್‌: 2000ನೇ ಇಸವಿಯಲ್ಲಿ ಜಿಂಬಾಬ್ವೆ ವಿರುದ್ಧ ಸೌರವ್‌ ಗಂಗೂಲಿ 144 ರನ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next