Advertisement
ಆಕಾಶದಲ್ಲಿ ಕುಳಿತು ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸುತ್ತ ಊಟ ಮಾಡಬೇಕು, ಸಂಭ್ರಮಿಸಬೇಕು ಎನ್ನುವವರು ಅಕ್ಟೋಬರ್ ತಿಂಗಳ ಬಳಿಕ ದುಬಾೖಗೆ ಹೋಗಬಹುದು. ಇಲ್ಲಿ ವಿಶ್ವದ ಅತೀ ದೊಡ್ಡ ಮತ್ತು ಎತ್ತರದ ವೀಕ್ಷಣ ಚಕ್ರ ನಿರ್ಮಾಣಗೊಂಡಿದ್ದು, ಅ. 21ರಂದು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ.
2013ರಲ್ಲಿ ಐನ್ ದುಬಾೖ ವೀಕ್ಷಣ ಚಕ್ರದ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು 2017ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆ ಬಳಿಕ ಅದನ್ನು 2020ಕ್ಕೆ ಪರಿಷ್ಕರಿಸಲಾಯಿತಾದರೂ 2021ರ ಆಗಸ್ಟ್‌ನಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಮೆರಾಸ್ ಹೋಲ್ಡಿಂಗ್ ಯೋಜನೆಯನ್ನು ಅಭಿವೃದ್ಧಿ ಪಡಿಸಿದ್ದು, ಇದರ ವಾಸ್ತುಶಿಲ್ಪಿ ಸೋಹೆಟ್ಟಾ.
Related Articles
“ಐನ್ ದುಬಾೖ’ ಯಿಂದ ದುಬಾೖ ಮಾಲ್‌ಗೆ ಹೋಗಲು ಸುಮಾರು 21 ನಿಮಿಷ, ಪಾಮ್ ಜುಮೇರಾಗೆ 13 ನಿಮಿಷ, ಬುರ್ಜ್ ಅಲ್ ಅರಬ್‌ಗ 18 ನಿಮಿಷ, ವಾಕ್ ಜೆಬಿಆರ್‌ಗೆ 15 ನಿಮಿಷ, ದುಬಾೖ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ 29 ನಿಮಿಷಗಳಲ್ಲಿ ತಲುಪಬಹುದಾಗಿದೆ.
Advertisement
ವಿಶ್ವದಾಖಲೆವಿಶ್ವದ ಅತೀ ದೊಡ್ಡ ಮತ್ತು ಎತ್ತರದ ವೀಕ್ಷಣ ಚಕ್ರ ಎಂಬ ಹೆಗ್ಗಳಿಕೆ ಈವರೆಗೆ ಅಮೆರಿಕದ ಲಾಸ್ ವೇಗಸ್‌ನಲ್ಲಿರುವ ಹೈ ರೋಲರ್‌ನದ್ದಾಗಿತ್ತು. 2014ರಲ್ಲಿ ಉದ್ಘಾಟನೆಗೊಂಡ ಹೈ ರೋಲರ್ 167.6 ಮೀ.(550 ಅಡಿ)ಎತ್ತರದ್ದಾಗಿದೆ. ಇದೀಗ 250 ಮೀ. ಎತ್ತರದ “ಐನ್ ದುಬಾೖ’ ಈ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 48 ಹೈಟೆಕ್ ಕ್ಯಾಬಿನ್‌ಗಳಿದ್ದು ಇದರಲ್ಲಿರುವ ವೀಕ್ಷಣ ಕ್ಯಾಬಿನ್‌ನಲ್ಲಿ ಸೂರ್ಯಾಸ್ತ ವೀಕ್ಷಣೆ ಸೇರಿದಂತೆ ಹಗಲು, ರಾತ್ರಿ ಪೂರ್ತಿ ಆನಂದಿಸಬಹುದು. ಸಾಮಾಜಿಕ ಕ್ಯಾಬಿನ್‌ನಲ್ಲಿ ಇಲ್ಲಿ ವಿಶ್ರಾಂತಿಗೆ ಅವಕಾಶವಿದೆ. ವಿಐಪಿ ಲಾಂಚ್ ಪ್ರವೇಶ, ಪಾಡ್‌ನ ಮಧ್ಯೆ ಬಾರ್ ಅನ್ನು ಒಳಗೊಂಡಿದೆ. ಖಾಸಗಿ ಕ್ಯಾಬಿನ್‌ಗಳಲ್ಲಿ ಹುಟ್ಟುಹಬ್ಬ, ನಿಶ್ಚಿತಾರ್ಥ, ಮದುವೆ, ವ್ಯಾಪಾರ ಕಾರ್ಯಗಳಿಗೆ ಆಯ್ಕೆ ಮಾಡಿಕೊಳ್ಳಬಹುದು. ಅ. 21ರಂದು ಅಧಿಕೃತ ಚಾಲನೆ
ಐನ್‌ನ ಎಂಟು ಚಕ್ರಗಳ ರಿಮ್‌ನಲ್ಲಿ 107 ಮೀಟರ್‌ಗಳ ಐದು ಭಾಗಗಳಿವೆ. ಲಂಡನ್‌ನಲ್ಲಿರುವ “ಐ’ ಗಿಂತ 75 ಮೀಟರ್ ಎತ್ತರವಾಗಿದ್ದು, ವೀಲ್‌ನ ಮೊದಲ ಐದು ವಿಭಾಗಗಳು ಹಬ್‌ನಿಂದ ಸಂಪರ್ಕಗೊಂಡಿರುತ್ತದೆ. 6 ಮತ್ತು ಉಳಿದ ರಿಮ್‌ಗಳನ್ನು ಜೋಡಿಸಲು ಎರಡು ವಿಂಚ್ ಸಾಧನಗಳನ್ನು ಅಳವಡಿಸಲಾಗಿದೆ. ರಿಮ್ ವಿಭಾಗವು ಎರಡು ಏರ್‌ಬಸ್ ವಿಮಾನಗಳ ತೂಕವನ್ನು ಹೊಂದಿದೆ. ಹಬ್ ರಚನೆಗಳು 115 ಮೀಟರ್ ಸರಳುಗಳ ಮೇಲಿರುತ್ತದೆ. ಚಕ್ರದ ಹಬ್ ಮತ್ತು ಸ್ಪಿಂಡಲ್ ಅನ್ನು ಕಳೆದ ವರ್ಷವೇ ಸ್ಥಾಪಿಸಲಾಗಿದ್ದು, ಅಂತಿಮ ರಚನೆಯಲ್ಲಿ 9 ಸಾವಿರ ಟನ್ ಉಕ್ಕನ್ನು ಬಳಸಲಾಗಿದ್ದು ಇದು ಪ್ಯಾರಿಸ್‌ನಲ್ಲಿರುವ ಐಫೆಲ್ ಟವರ್ ಅನ್ನು ನಿರ್ಮಿಸಲು ಬಳಸಿದ ಕಬ್ಬಿಣದ ಪ್ರಮಾಣಕ್ಕಿಂತ ಶೇ. 25ರಷ್ಟು ಹೆಚ್ಚಾಗಿದೆ. ಐನ್ ಅಧಿಕೃತವಾಗಿ ಕಾರ್ಯಾರಂಭಗೊಂಡ ಬಳಿಕ ಪ್ರವಾಸಿಗರಿಗೆ ದುಬಾೖ ನಗರ ಮತ್ತು ಅದರ ಕರಾವಳಿ ಭಾಗದ 360 ಡಿಗ್ರಿ ವೀಕ್ಷಣೆ ಸಾಧ್ಯವಾಗಲಿದೆ. ತಲಾ 30 ಚದರ ಮೀಟರ್ ಅಗಲದ 48 ಕ್ಯಾಬಿನ್‌ಗಳಲ್ಲಿ ಏಕಕಾಲಕ್ಕೆ 40 ಮಂದಿಗೆ ಅವಕಾಶವಿದ್ದು, 12 ಮಂದಿ ಭೋಜನ ಮಾಡುವ ಸ್ಥಳವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಇದರಲ್ಲಿ ಇರಲಿದೆ. ಇದನ್ನೂ ಓದಿ:ಅಯೋಧ್ಯೆ ಯಾತ್ರೆಗೆ 5,000 ರೂ. ನೆರವು: ಗುಜರಾತ್ ಸರ್ಕಾರ ವಿಶ್ವದ ಇತರ ಪ್ರಮುಖ ವೀಕ್ಷಣ ಚಕ್ರಗಳು
ಹೈ ರೋಲರ್
ಅಮೆರಿಕದ ಲಾಸ್‌ವೇಗಸ್‌ನಲ್ಲಿರುವ ಹೈ ರೋಲರ್ ವೀಕ್ಷಣ ಚಕ್ರ 167.6 ಮೀಟರ್ (550 ಅಡಿ) ಎತ್ತರವನ್ನು ಹೊಂದಿದ್ದು ಇದು ಈವರೆಗೆ ವಿಶ್ವದ ಅತೀ ಎತ್ತರದ ವೀಕ್ಷಣ ಚಕ್ರ ಎಂಬ ಹೆಗ್ಗಳಿಕೆಯನ್ನು ಹೊಂದಿತ್ತು, ಕೈಸರ್ ಎಂಟರ್‌ಟೈನ್‌ಮೆಂಟ್ ಮಾಲಕತ್ವದ ಈ ವೀಕ್ಷಣ ಚಕ್ರದ ನಿರ್ಮಾಣವನ್ನು 2011ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಅರೂಪ್ ಎಂಜಿನಿಯರಿಂಗ್ ಕಂಪೆನಿಯು ಈ ವೀಕ್ಷಣಚಕ್ರವನ್ನು ನಿರ್ಮಿಸಿದ್ದು 2014ರ ಮಾರ್ಚ್ 31ರಂದು ಉದ್ಘಾಟನೆಗೊಂಡಿತ್ತು. ತಲಾ 40 ಪ್ರಯಾಣಿಕರ ಸಾಮರ್ಥ್ಯದ 28 ಕ್ಯಾಬಿನ್‌ಗಳನ್ನು ಒಳಗೊಂಡಿರುವ ಹೈ ರೋಲರ್ ವೀಕ್ಷಣ ಚಕ್ರದ ಒಟ್ಟು ಆಸನ ಸಾಮರ್ಥ್ಯ 1,120. ಪ್ರತಿಯೊಂದೂ ಕ್ಯಾಬಿನ್ 225 ಚ. ಅ. ವಿಸ್ತೀರ್ಣವನ್ನು ಹೊಂದಿದ್ದು ಸುಮಾರು 20,000 ಕೆ.ಜಿ. ಭಾರವಿದೆ. ಪ್ರತಿಯೊಂದೂ ಕ್ಯಾಬಿನ್ ಎಂಟು ಟಿ.ವಿ. ಸ್ಕ್ರೀನ್‌ಗಳನ್ನು ಹೊಂದಿದೆ. ಇಡೀ ವೀಕ್ಷಣ ಚಕ್ರ 2,000 ಎಲ್‌ಇಡಿ ವ್ಯವಸ್ಥೆಯನ್ನು ಒಳಗೊಂಡಿದ್ದು ರಾತ್ರಿ ವೇಳೆ ವಿವಿಧ ಬಣ್ಣಗಳ ದೀಪಗಳು ರಾರಾಜಿಸುತ್ತಿರುತ್ತವೆ. ಸಿಂಗಾಪುರ ಫ್ಲೈಯರ್
ಸಿಂಗಾಪುರದ ಮರೀನಾ ಬೇಯಲ್ಲಿ 2008ರಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತವಾದ ಸಿಂಗಾಪುರ ಫ್ಲೈಯರ್ 541 ಅಡಿ (165 ಮೀ.) ಎತ್ತರವನ್ನು ಹೊಂದಿದೆ. ಈ ವೀಕ್ಷಣ ಚಕ್ರದಿಂದ ನೆರೆಯ ರಾಷ್ಟ್ರಗಳಾದ ಮಲೇಷ್ಯಾ ಮತ್ತು ಇಂಡೋನೇಶ್ಯಾದ ರಮಣೀಯ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯ. ಮಿನಿ ಬಸ್ ಗಾತ್ರದ 28 ಕ್ಯಾಪ್ಸೂಲ್‌ಗಳನ್ನು ಹೊಂದಿರುವ ಈ ವೀಕ್ಷಣ ಚಕ್ರದ ಪ್ರತಿಯೊಂದು ಕ್ಯಾಪ್ಸೂಲ್‌ನಲ್ಲಿ 28 ಮಂದಿ ಆಸೀನರಾಗಬಹುದು. ಸ್ಟಾರ್ ಆಫ್ ನಾನ್‌ಚಾಗ್
ಚೀನದ ನಾನ್‌ಚಾಂಗ್‌ನಲ್ಲಿರುವ ನಾನ್‌ಚಾಂಗ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ “ಸ್ಟಾರ್ ಆಫ್ ನಾನ್‌ಚಾಂಗ್ ವೀಕ್ಷಣ ಚಕ್ರವಿದೆ. ಇದು 525 ಅಡಿ(160ಮೀ.) ಎತ್ತರವಿದ್ದು 2006ರಲ್ಲಿ ಉದ್ಘಾಟನೆಗೊಂಡಿತು. ಎಂಟು ಮಂದಿ ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ 60 ಕ್ಯಾಬಿನ್‌ಗಳನ್ನು ಹೊಂದಿದೆ. ವಿದ್ಯುತ್ ದೀಪಾಲಂಕಾರವೇ ಈ ವೀಕ್ಷಣ ಚಕ್ರದ ಮುಖ್ಯ ಆಕರ್ಷಣೆ. ಬೈಲಾಂಗ್ ರಿವರ್ ಬ್ರಿಡ್ಜ್ ಫೆರೀಸ್ ವೀಲ್
ಚೀನದ ಶಾಂಡೋಂಗ್‌ನ ವೈಫಾಂಗ್‌ನಲ್ಲಿರುವ ಬೈಲಾಂಗ್ ರಿವರ್ ಬ್ರಿಡ್ಜ್ ಫೆರೀಸ್ ವೀಲ್ 476 ಅಡಿ(145 ಮೀ.)ಎತ್ತರವಿದೆ. 2017ರಲ್ಲಿ ಉದ್ಘಾಟನೆಗೊಂಡಿತ್ತು.
ಲಂಡನ್ ಐ
ಲಂಡನ್‌ನ ಥೇಮ್ಸ್ ನದಿಯ ದಕ್ಷಿಣ ದಂಡೆಯಲ್ಲಿರುವ ಲಂಡನ್ ಐ ಅಥವಾ ಮಿಲೇನಿಯಂ ವ್ಹೀಲ್ ಯುರೋಪಿನ ಅತೀ ಎತ್ತರದ ಕ್ಯಾಂಟಿಲಿವರ್ಡ್ ವೀಕ್ಷಣ ಚಕ್ರವಾಗಿದೆ. ವಾರ್ಷಿಕವಾಗಿ 3 ದಶಲಕ್ಷಕ್ಕೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಇದು 135 ಮೀಟರ್ ಎತ್ತರ, 120 ಮೀಟರ್ ವಿಸ್ತಾರವನ್ನು ಹೊಂದಿದೆ. 2000ನೇ ಇಸವಿಯಲ್ಲಿ ಇದನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಯಲಾಯಿತು. ಮೊಟ್ಟೆಯಾಕಾರದ 32 ಕ್ಯಾಬಿನ್‌ಗಳಿದ್ದು, ಪ್ರತೀ ಕ್ಯಾಬಿನ್ 25 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ದುಬಾೖಯ ಕಣ್ಣುದುಬಾೖಯ ಬ್ಲೂವಾಟರ್ಸ್ ದ್ವೀಪದಲ್ಲಿ ನಿರ್ಮಾಣಗೊಂಡಿರುವ “ಐನ್ ದುಬಾೖ’ (ಅರೇಬಿಕ್ ಭಾಷೆಯಲ್ಲಿ ದುಬಾೖಯ ಕಣ್ಣು ಎಂದರ್ಥ)ವಿಶ್ವ ದಾಖಲೆ ಪಟ್ಟಿಗೆ ಸೇರಲಿದೆ. ಲಂಡನ್‌ನಲ್ಲಿರುವ ವೀಕ್ಷಣ ಚಕ್ರ “ಐ’ ನ ಎರಡು ಪಟ್ಟು ಎತ್ತರದಲ್ಲಿ ದುಬಾೖಯ “ಐನ್’ ವೀಕ್ಷಣ ಚಕ್ರ ಪ್ರವಾಸಿಗರನ್ನು ಸೆಳೆಯಲಿದ್ದು, 250 ಮೀಟರ್(820 ಅಡಿ) ಎತ್ತರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಇದರಿಂದ ದುಬಾೖಯ ಸುಂದರ ಆಕಾಶದ ಭವ್ಯ ನೋಟ ಮಾತ್ರವಲ್ಲದೆ ದುಬಾೖ ನಗರದ ವಿಹಂಗಮ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಇದು ದುಬಾೖಯ ಇತ್ತೀಚಿನ ಎಲ್ಲ ದಾಖಲೆಗಳನ್ನು ಮುರಿದು ನಗರದ ಪ್ರಮುಖ ಆಕರ್ಷಣೆಗಳ ತಾಣದ ಪಟ್ಟಿಗೆ ಸೇರಲಿದೆ. ಇದು ಸರಿಸುಮಾರು 38 ನಿಮಿಷಗಳ ಒಂದು ಪರಿಭ್ರಮಣೆಯಿಂದ ಆರಂಭವಾಗಿ 76 ನಿಮಿಷಗಳ ಎರಡು ಸುತ್ತುಗಳ ಅನುಭವವನ್ನು ಗ್ರಾಹಕರಿಗೆ ಒದಗಿಸಲಿದೆ. ಸಂದರ್ಶಕರಿಗೆ ಖಾಸಗಿ ಕ್ಯಾಬಿನ್ ಪ್ರವೇಶಿಸುವ ಅನುಕೂಲವೂ ಇದ್ದು, ಹುಟ್ಟುಹಬ್ಬ, ವಿವಾಹ ನಿಶ್ಚಿತಾರ್ಥ, ಮದುವೆ, ವ್ಯಾಪಾರ ಕಾರ್ಯಗಳಿಗಾಗಿ ವಿಶಿಷ್ಟ ಪ್ಯಾಕೇಜ್‌ಗಳೂ ಲಭ್ಯವಿರುತ್ತವೆ. ಖಾಸಗಿ ಕ್ಯಾಬಿನ್‌ಗಳನ್ನು ವಿಐಪಿ ಅತಿಥಿಗಳನ್ನು ಸತ್ಕರಿಸಲು, ವಿವಿಧ ಕಾರ್ಯ ಕ್ರಮಗಳ ಆಯೋಜನೆ ಮತ್ತು ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿದೆ. ಇದರಲ್ಲಿರುವ 48 ಕ್ಯಾಬಿನ್‌ಗಳಲ್ಲಿ ಏಕಕಾಲಕ್ಕೆ ಒಟ್ಟು 1,750 ಪ್ರವಾಸಿಗರಿಗೆ ಅವಕಾಶವಿದೆ. ಟಿಕೆಟ್ ದರ
ವೀಕ್ಷಣೆ, ಸಾಮಾಜಿಕ ಮತ್ತು ಖಾಸಗಿ ಸೇರಿದಂತೆ ಇದರಲ್ಲಿ ಮೂರು ಕ್ಯಾಬಿನ್‌ಗಳಿದ್ದು, ವೀಕ್ಷಣೆ ಕ್ಯಾಬಿನ್‌ನಲ್ಲಿ ಪ್ರತೀ ವ್ಯಕ್ತಿಗೆ 130 ದಿರ್ಹಾಂ ಅಂದರೆ ಸುಮಾರು 2,600 ರೂ. ಮೌಲ್ಯದ ಟಿಕೆಟ್, ಮೂರರಿಂದ 12 ವರ್ಷದೊಳಗಿನ ಮಕ್ಕಳಿಗೆ 100 ದಿರ್ಹಾಂ ಅಂದರೆ 2000 ರೂ. ಗಳ ಟಿಕೆಟ್ ದರ ನಿಗದಿ ಪಡಿಸಲಾಗಿದೆ. ಒಟ್ಟು 38 ನಿಮಿಷಗಳನ್ನು ಐನ್ ದುಬಾೖಯಲ್ಲಿ ಕಳೆಯಬಹುದು. ಐನ್ ದುಬಾçಯಲ್ಲಿ ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳಿಗೆ 300 ದಿರ್ಹಾಂ ಕುಟುಂಬ ಪಾಸ್ ಮತ್ತು ಕುಟುಂಬ ಪ್ಲಸ್ ಪಾಸ್ ಅನ್ನು ವಿತರಿಸಲಾಗುತ್ತದೆ. ಇದರಲ್ಲಿ ಪ್ರತೀ ವ್ಯಕ್ತಿಗೆ ತಿಂಡಿ, ಪಾನೀಯ ಒಳಗೊಂಡಂತೆ 450 ದಿರ್ಹಾಂನ ಪ್ಯಾಕೇಜ್ ಕೂಡ ಲಭ್ಯವಿದೆ. ಸೂರ್ಯಾಸ್ತದ ವೇಳೆ ವಯಸ್ಕರಿಗೆ 180, ಮಕ್ಕಳಿಗೆ 150 ದಿರ್ಹಾಂ, ಸಾಮಾಜಿಕ ಕ್ಯಾಬಿನ್‌ನ ಪ್ರೀಮಿಯಂ ಪಾಸ್‌ಗೆ 380 ದಿರ್ಹಾಂ, ಲಾಂಜ್ ಪ್ಲಸ್ ಪಾಸ್‌ಗೆ 175 ದಿರ್ಹಾಂ, ಖಾಸಗಿ ಕ್ಯಾಬಿನ್‌ನಲ್ಲಿ ಗರಿಷ್ಠ 10 ಜನರಿಗೆ 1,800 ದಿರ್ಹಾಂ, ವಿವಿಧ ಸಮಾರಂಭಗಳಿಗೆ ಕನಿಷ್ಠ 4,700 ದಿರ್ಹಾಂಗಳ ಆಯ್ಕೆ ಲಭ್ಯವಿದೆ. ಐನ್ ದುಬಾೖ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಕಾದಿರಿಸಬಹುದಾಗಿದೆ. ನಿತ್ಯವೂ ಅಪರಾಹ್ನ ಗಂಟೆ 12ರಿಂದ ರಾತ್ರಿ 12ರ ವರೆಗೆ ವೀಕ್ಷಣೆಗೆ ಲಭ್ಯವಿದ್ದು, ಇದರ ಒಂದು ಸುತ್ತು 38 ನಿಮಿಷಗಳಾಗಿದ್ದು, ಇದರ ಚಲನೆ ನಿಧಾನವಾಗಿರುತ್ತದೆ. ಪ್ರವೇಶ ಪ್ರಕ್ರಿಯೆ ಸಂಬಂಧಿತ ಕಾರ್ಯಗಳಿಗಾಗಿ 30- 60 ನಿಮಿಷ ಮುಂಚಿತವಾಗಿ ಸಂದರ್ಶಕರು ಸ್ಥಳದಲ್ಲಿರುವಂತೆ ಸೂಚಿಸಲಾಗುತ್ತದೆ. ಒಂದು ಕ್ಯಾಬಿನ್‌ನಲ್ಲಿ 40 ಮಂದಿಗೆ ಅವಕಾಶ ಕಲ್ಪಿಸಲಾಗಿದ್ದು, ಕೋವಿಡ್ ನಿರ್ಬಂಧದ ಕಾರಣ ಪ್ರತೀ ಕ್ಯಾಬಿನ್‌ನಲ್ಲಿ 7 ಅಥವಾ ಒಂದೇ ಗ್ರೂಪ್‌ನ 10 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.