Advertisement

ವಿಜ್ಞಾನದ ಮೂಲಕ ಜಗತ್ತು ಅರಿಯಲು ಮುಂದಾಗಿ

07:13 AM Mar 01, 2019 | |

ದೊಡ್ಡಬಳ್ಳಾಪುರ: ನಮ್ಮ ಬದುಕಿನ ಪ್ರತಿಯೊಂದು ಪ್ರಸಂಗಗಳೂ ವಿಜ್ಞಾನಕ್ಕೆ ಸಂಬಂಧಿಸಿದ್ದವೇ ಆಗಿವೆ. ಈ ದಿಸೆಯಲ್ಲಿ ವಿಜ್ಞಾನವನ್ನು ಕೇವಲ ಪಠ್ಯ ವಿಷಯವಾಗಿ ಅಧ್ಯಯನ ಮಾಡುವುದಕ್ಕಿಂತ ಮುಖ್ಯವಾಗಿ ಜಗತ್ತನ್ನು ಅರಿಯುವ ಹಾಗೂ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮೂಲಕ ಅಧ್ಯಯನ ಮಾಡಬೇಕಿದೆ ಎಂದು ಜನಪ್ರಿಯ ವಿಜ್ಞಾನ ಲೇಖಕ ಡಾ.ಎ.ಓ.ಆವಲಮೂರ್ತಿ ಹೇಳಿದರು.

Advertisement

ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ನೇತೃತ್ವದಲ್ಲಿ ಗುರುವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ರಾಷ್ಟ್ರೀಯ ವಿಜ್ಞಾನ ದಿನ: ಕಡಿಮೆ ಅವಕಾಶ ಹಾಗೂ ಸೀಮಿತ ಕಾಲಮಿತಿಯಲ್ಲಿ ಜಗತ್ತನ್ನೇ ತನ್ನತ್ತ ಸೆಳೆಯುವ ರೀತಿಯಲ್ಲಿ ವೈಜ್ಞಾನಿಕ ಚಿಂತನೆಯನ್ನು ಪ್ರಸ್ತುತಪಡಿಸಿದ ಸರ್‌ ಸಿ.ವಿ.ರಾಮನ್‌ ಅವರು ಬೆಳಕಿನ ಕುರಿತು ನಡೆಸಿದ ಮಹತ್ವದ ಸಂಶೋಧನೆಯನ್ನು ಜಗತ್ತಿಗೆ ಪರಿಚಯಿಸಿದ ದಿನವಾದ ಫೆ.28 ಅನ್ನು ಪ್ರತಿ ವರ್ಷ ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಣೆ ಮಾಡುತ್ತಿದ್ದೇವೆ ಎಂದರು.

ರಾಮನ್‌ ಎಫೆಕ್ಟ್ ಸಂಶೋಧನೆ: ಭಾರತದ ವಿಜ್ಞಾನ ಕ್ಷೇತ್ರಕ್ಕೆ ಸಿ.ವಿ.ರಾಮನ್‌ ಬಹು ಅಮೂಲ್ಯ ಕೊಡುಗೆ ನೀಡಿದ್ದಾರೆ. ಈವರೆಗೆ ನೊಬೆಲ್‌ ಪ್ರಶಸ್ತಿಗೆ ಭಾಜನವಾಗಿರುವ ಸರಳ ಸೂತ್ರದ, ಕಡಿಮೆ ವೆಚ್ಚದ ಪ್ರಯೋಗ ಎಂದೇ ರಾಮನ್‌ ಎಫೆಕ್ಟ್ ಸಂಶೋಧನೆ ಖ್ಯಾತವಾಗಿದೆ. ಈ ಸಂಶೋಧನೆಯನ್ನು ಮೊದಲ ಬಾರಿಗೆ ರಾಮನ್‌ ಅವರು ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಪರಿಚಯಿಸಿದ್ದರು ಎಂಬುದು ವಿಶೇಷ ಎಂದು ತಿಳಿಸಿದರು. 

ತಾಳ್ಮೆ, ಬುದ್ಧಿಮತ್ತೆ ಅಗತ್ಯ: ವಿಜ್ಞಾನ ಓದುಗರಿಗೆ ಮೊದಲು ಗ್ರಹಿಸುವ ತಾಳ್ಮೆ, ಪ್ರತಿಕ್ರಿಯಿಸುವ ಚಿಂತನೆ, ಅಭಿವ್ಯಕ್ತಿಸುವ ಬುದ್ಧಿಮತ್ತೆ ಅಗತ್ಯವಾಗಿದೆ. ಇಂದು ವಿಜ್ಞಾನದ ಕುರಿತಾದ ಸರಳ ಪ್ರಶ್ನೆಗಳಿಗೂ ನಮ್ಮಲ್ಲಿ ಉತ್ತರಗಳನ್ನು ಕಂಡುಕೊಳ್ಳಲು ಕಷ್ಟಪಡುವ ಸ್ಥಿತಿಯಲ್ಲಿ ನಾವಿದ್ದೇವೆ. ವಿಜ್ಞಾನ ಬದುಕಾಗಬೇಕು. ಬದುಕಿನ ಪ್ರತಿಯೊಂದು ಕ್ರಿಯೆ-ಪ್ರತಿಕ್ರಿಯೆಗಳೂ ಪ್ರಶ್ನೆ-ಉತ್ತರಗಳ ಸಹಜ ಪ್ರಕ್ರಿಯೆಯಾಗಿದ್ದಾಗ ಮಾತ್ರ ವೈಜ್ಞಾನಿಕ ಆಲೋಚನೆಗಳಿಗೆ ಮನ್ನಣೆ ಸಿಗುತ್ತದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಆರ್‌.ರವಿಕಿರಣ್‌ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಗ್ರಹಿಕೆಯ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ. ಭಾಷೆ ಮತ್ತು ವಿಜ್ಞಾನ ಅನೇಕ ಪೂರಕ ಸಂವೇದನೆಗಳನ್ನು ಹೊಂದಿದ್ದು, ಅವುಗಳನ್ನು ಬೆಸೆಯುವ ಪ್ರಯತ್ನ ನಡೆಯಬೇಕು. ವಿಜ್ಞಾನದ ಅನೇಕ ಬೆರಗುಗಳಿಗೆ ಕಾರಣಬದ್ದ ಉತ್ತರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಆವಲಮೂರ್ತಿ ಅವರ ಬರೆಹಗಳು ಯುವ ಸಮುದಾಯಕ್ಕೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪಿ.ಚೈತ್ರಾ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಪಿ.ದಿನೇಶ್‌ ಕುಮಾರ್‌, ಭೌತಶಾಸ್ತ್ರ ವಿಭಾಗದ ನಿಶಾತ್‌ ಸುಲ್ತಾನಾ, ಗಣಿತ ವಿಭಾಗದ ಎಚ್‌.ಆರ್‌.ಭವ್ಯಾ, ಕೇಶವಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಾದ ಸಂಧ್ಯಾ, ರುಮಾನಾ ಕೌಸರ್‌, ಹರ್ಷಿತಾ, ದಿವ್ಯಾ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next